ಸಲಿಂಗ ವಿವಾಹಕ್ಕೆ ಕಾನೂನು ಮನ್ನಣೆ ನೀಡುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಯೋಚಿಸುವುದಾಗಿ ಕೇಂದ್ರ ಸರ್ಕಾರ ಹೇಳುವುದರೊಂದಿಗೆ ಕಾವೇರಿದ ಕಲಾಪಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಸಾಕ್ಷಿಯಾಯಿತು.
ಅರ್ಜಿಗಳ ನಿರ್ವಹಣೆಗೆ ಯೋಗ್ಯವೇ ಎನ್ನುವುದರ ಕುರಿತಂತೆ ಕೇಂದ್ರ ಸರ್ಕಾರದ ವಾದವನ್ನು ಮೊದಲು ಆಲಿಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ತಿರಸ್ಕರಿಸುವುದರೊಂದಿಗೆ ಈ ಬೆಳವಣಿಗೆ ನಡೆಯಿತು.
ವಿಷಯವು ಶಾಸಕಂಗದ ವ್ಯಾಪ್ತಿಗೆ ಬರುವುದರಿಂದ ಅರ್ಜಿಗಳು ನಿರ್ವಹಣೆಗೆ ಯೋಗ್ಯವೇ ಎನ್ನುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಾದವನ್ನು ಮೊದಲು ಆಲಿಸಬೇಕು ಎಂದು ಮೆಹ್ತಾ ವಾದ ಆರಂಭಿಸಿದರು. ಈ ವಿಚಾರ ಸಂಸತ್ತಿನ ವ್ಯಾಪ್ತಿಗೆ ಬರುವುದರಿಂದ ಈ ಮನವಿ ಮಾಡುತ್ತಿದ್ದೇನೆ ಎಂದರು.
“ನಾವು ಪ್ರಾಥಮಿಕ ಆಕ್ಷೇಪಣೆ ಎತ್ತುವ ಅರ್ಜಿಯನ್ನು ಸಲ್ಲಿಸುತ್ತಿದ್ದೇವೆ. ನ್ಯಾಯಾಲಯವು ಈ ವಲಯವನ್ನು ಪ್ರವೇಶಿಸಲು ಸಾಧ್ಯವೇ ಅಥವಾ ಸಂಸತ್ತಷ್ಟೇ ಅದನ್ನು ಮಾಡಬಹುದೇ? ಸಮಾಜೋ- ನ್ಯಾಯಿಕ ಸಂಸ್ಥೆಯನ್ನು ರಚಿಸುವ ಅಥವಾ ರೂಪಿಸುವ ಕಾರ್ಯವನ್ನು ನ್ಯಾಯಾಲಯ ಮಾಡಬೇಕೆ ಇಲ್ಲವೇ ಶಾಸಕಾಂಗ ಮಾಡಬೇಕೆ ಎಂಬ ಚರ್ಚೆ ಮೊದಲುಗೊಳ್ಳಬೇಕಿದೆ” ಎಂದು ಎಸ್‌ಜಿ ಮೆಹ್ತಾ ಹೇಳಿದರು.
ಆದರೆ, ಪ್ರಕರಣದ ವಿಸ್ತೃತ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ನ್ಯಾಯಾಲಯ ಕೆಲ ಸಮಯದವರೆಗೆ ಅರ್ಜಿದಾರರ ಅಹವಾಲುಗಳನ್ನು ಆಲಿಸಲಿದೆ ಎಂದು ಸಿಜೆಐ ತಿಳಿಸಿದರು.
“ಅರ್ಜಿದಾರರ ವಾದಾಂಶಗಳ ವಿಸ್ತೃತ ಭಿತ್ತಿಯ ಹಿನ್ನೆಲೆಯಲ್ಲಿ ನಿಮ್ಮ ವಾದದ ಸಮರ್ಥನೆಗಳು (ಸಲಿಂಗ ವಿವಾಹ ಮಾನ್ಯತೆ ಕೋರಿರುವ) ಇರಲಿವೆ. ನಾವು ವಿಚಾರಣಾರ್ಹತೆಯ ಕುರಿತ ವಾದಗಳನ್ನು ಆಲಿಸಬೇಕು. ಅದು ನಮ್ಮ ಮನಸ್ಸಿನಿಂದ ಮರೆಯಾಗದು. ಮುಂದಿನ ಹಂತದಲ್ಲಿ ನಿಮ್ಮ ವಾದ ಆಲಿಸಲಿದ್ದೇವೆ. ನಮಗೆ ಮೊದಲಿಗೆ (ಪ್ರಕರಣದ) ಒಂದು ಚಿತ್ರಣ ದೊರೆಯಬೇಕಿದೆ. ಮೊದಲು 15ರಿಂದ 20 ನಿಮಿಷಗಳು ಅರ್ಜಿದಾರರ ವಾದವನ್ನು ಆಲಿಸೋಣ. ಅಹವಾಲು ತಿಳಿಯೋಣ. ಅರ್ಜಿದಾರರ ವಾದವನ್ನು ನಾವು ಮುಂಚಿತವಾಗಿಯೇ ತಡೆಯಲು ಸಾಧ್ಯವಿಲ್ಲ” ಎಂದು ಸಿಜೆಐ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ ““ಈ ವಿಚಾರವನ್ನು ನಿರ್ಧರಿಸಲು ಯಾವ ಸಾಂವಿ ಧಾನಿಕ ವೇದಿಕೆ ಸೂಕ್ತ ಎನ್ನುವುದರ ಬಗ್ಗೆ ನನ್ನ ವಾದವಿರಲಿದೆ. ಈ ವಿಚಾರವನ್ನು ಎತ್ತುವ ವೇಳೆ ನಾವು ಪ್ರಕರಣದ ವಿಚಾರಣಾರ್ಹತೆಯ ಬಗ್ಗೆ ಚರ್ಚಿಸಲು ಹೋಗುವುದಿಲ್ಲ” ಎಂದರು.
ಈ ಹಂತದಲ್ಲಿ ಸಿಜೆಐ “ಮೊದಲು ಪ್ರಕರಣದ ಚಿತ್ರಣವನ್ನು ತಿಳಿಯೋಣ” ಎಂದರು. ಪಟ್ಟು ಬಿಡದ ಮೆಹ್ತಾ ತಮ್ಮ ಪ್ರಾಥಮಿಕ ವಾದಕ್ಕೆ ಅವರು ಉತ್ತರಿಸಲಿ ಎಂದು ಒತ್ತಾಯಿಸಿದರು.
ಆಗ ಸಿಜೆಐ “ಇಲ್ಲಿ ನಾನು ಉಸ್ತುವಾರಿಯಾಗಿದ್ದೇನೆ, (ಪ್ರಕರಣ ಹೇಗೆ ನಡೆಯಬೇಕು ಎನ್ನುವುದನ್ನು) ನಾನೇ ನಿರ್ಧರಿಸುತ್ತೇನೆ… ನಾವು ಅರ್ಜಿದಾರರನ್ನು ಮೊದಲು ಆಲಿಸೋಣ. ನ್ಯಾಯಾಲಯಲ್ಲಿ ಹೇಗೆ ವಿಚಾರಣೆ ನಡೆಯಬೇಕು ಎಂದು ನಿರ್ದೇಶಿಸುವುದಕ್ಕೆ ನಾನು ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ತಿರುಗೇಟು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೆಹ್ತಾ, ವಿಚಾರಣೆಯಲ್ಲಿ ಭಾಗವಹಿಸಬೇಕೆ ಬೇಡವೇ ಎಂಬ ಬಗ್ಗೆ ನಿರ್ಧರಿಸಲು ಸರ್ಕಾರ ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
“ಸರ್ಕಾರ ವಿಚಾರಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳುತ್ತಿರುವಿರೇನು?” ಎಂದು ನ್ಯಾ ಸಂಜಯ್ ಕಿಶನ್ ಕೌಲ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೆಹ್ತಾ ''ದಕ್ಷಿಣ ಭಾರತದ ರೈತರು ಅಥವಾ ಉತ್ತರ ಭಾರತದ ವ್ಯಾಪಾರಸ್ಥರು ಏನು ಯೋಚಿಸುತ್ತಾರೆ ಎಂಬುದು ನಮಗಾರಿಗೂ ತಿಳಿದಿರುವುದಿಲ್ಲ” ಎಂದು ಮಾರ್ಮಿಕವಾಗಿ ಹೇಳಿದರು.
ಈ ನಡುವೆ, “ಪ್ರಕರಣ ಮುಂದೂಡುವುದನ್ನು ಹೊರತುಪಡಿಸಿ ಯಾವುದೇ ಮನವಿ ಪರಿಗಣಿಸುತ್ತೇವೆ” ಎಂದು ಸಿಜೆಐ ಸ್ಪಷ್ಟಪಡಿಸಿದರು.
“ವಿಚಾರಣೆಯಲ್ಲಿ ಭಾಗವಿಸುವುದೋ ಬೇಡವೋ ಎಂಬುದನ್ನು ನಿರ್ಧರಿಸುವುದಾಗಿ ಸರ್ಕಾರ ಹೇಳುವುದು ಸರಿಯಾಗಿ ಕಾಣುತ್ತಿಲ್ಲ. ಇದು ಬಹು ಮುಖ್ಯ ವಿಚಾರ” ಎಂದು ನ್ಯಾ. ಕೌಲ್ ನುಡಿದರು. ಬಳಿಕ ನ್ಯಾಯಾಲಯ ಅರ್ಜಿದಾರರ ವಿಚಾರಣೆ ನಡೆಸಿತು. ಅಂತಿಮವಾಗಿ ಎಸ್‌ಜಿ ಅವರು ತಮ್ಮ ವಾದ ಆರಂಭಿಸಿದರು.
“ನಾನು ಸಿಜೆಐ ಕೋಪಗೊಳ್ಳುವಂತೆ ಮಾಡಿಬಿಟ್ಟೆ… ಈ ಹಿಂದೆ ನನ್ನ ಸ್ನೇಹಿತರು ಹೀಗೆ ಮಾಡಿದ್ದಾರೆ. ಆದರೆ ನಾನಿದರಲ್ಲಿ ನಿಷ್ಣಾತನಲ್ಲ” ಎಂದು ಲಘುದಾಟಿಯಲ್ಲಿ ಮೆಹ್ತಾ ನುಡಿದರು. ಬಳಿಕ ಅರ್ಜಿಗಳ ನಿರ್ವಹಣಾ ಯೋಗ್ಯತೆಯ ಕುರಿತ ವಾದವನ್ನು ಮೊದಲು ಆಲಿಸುವಂತೆ ಮತ್ತೆ ಕೋರಿದರು.
ಮಧ್ಯಾಹ್ನದ ನ್ಯಾಯಾಲಯ ಕಲಾಪದಲ್ಲಿ ಈ ಬಗ್ಗೆ ಹೇಳುವುದಾಗಿ ಸಿಜೆಐ ತಿಳಿಸಿದರು.