ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಗಳು 2021 (ಐಟಿ ನಿಯಮಗಳು) ಅನ್ನು ಅನುಸರಿಸುವ ಸಂಬಂಧ ಸದ್ಭಾವನೆಯ ಸಂಕೇತದ ಭಾಗವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (ಎಂಇಐಟಿವೈ) ಟ್ವಿಟರ್‌ಗೆ ಅಂತಿಮ ಬಾರಿಗೆ ನೋಟಿಸ್ ಜಾರಿಗೊಳಿಸಿದೆ.
ಐಟಿ ನಿಯಮಗಳ ಅಡಿ ಮುಖ್ಯ ಅನುಸರಣಾ ಅಧಿಕಾರಿಯನ್ನು ನೇಮಿಸಿರುವ ಮಾಹಿತಿಯನ್ನು ಟ್ವಿಟರ್ ಬಹಿರಂಗಪಡಿಸಿಲ್ಲ ಎಂದು ಸಚಿವಾಲಯದ ಸೈಬರ್ ಕಾನೂನು ವಿಭಾಗದ ಸಮೂಹ ಸಂಚಾಲಕ ರಾಕೇಶ್ ಮಹೇಶ್ವರಿ ಸಹಿ ಮಾಡಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಟ್ವಿಟರ್ ನೇಮಿಸಿರುವ ಅಹವಾಲು ಸ್ವೀಕಾರ ಅಧಿಕಾರಿ ಮತ್ತು ನೋಡಲ್ ವ್ಯಕ್ತಿಗಳು ಸಂಸ್ಥೆಯ ಉದ್ಯೋಗಿಗಳಲ್ಲ. ಉಲ್ಲೇಖಿಸಲಾದ ಕಚೇರಿ ವಿಳಾಸವು ಕಾನೂನು ಸಂಸ್ಥೆಯೊಂದರ ವಿಳಾಸವಾಗಿದೆ. ಅದು ನಿಯಮಗಳಿಗೆ ಅನುಸಾರವಾಗಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.
“ಟ್ವಿಟರ್ ನಿಯಮಗಳನ್ನು ಅನುಸರಿಸದಿದ್ದರೆ ಮಧ್ಯಸ್ಥ ವೇದಿಕೆಯಾಗಿ ಹೊಣೆಗಾರಿಕೆಯಿಂದ ವಿನಾಯಿತಿಯನ್ನು ಕಳೆದುಕೊಳ್ಳುವುದು ಸೇರಿದಂತೆ ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಸೆಕ್ಷನ್ 79ರ ಅಡಿ ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಹೇಳಬೇಕಾಗಿಲ್ಲ…” ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಟ್ವಿಟರ್‌ನಲ್ಲಿ ಪ್ರಕಟಿಸಲಾಗುವ ಪೋಸ್ಟ್‌ಗಳಿಗೆ ಸಂಬಂಧಿಸಿದ ಅಹವಾಲು ಆಲಿಸಲು ಭಾರತೀಯರಿಗೆ ನ್ಯಾಯಯುತವಾದ ವ್ಯವಸ್ಥೆಯ ಅಗತ್ಯವಿದೆ. “ಒಂದು ದಶಕದಿಂದ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಭಾರತೀಯರು ತಮ್ಮ ಅಹವಾಲುಗಳನ್ನು ಭಾರತ ಮೂಲದ ನಿರ್ದಿಷ್ಟ ವ್ಯವಸ್ಥೆಯ ಮೂಲಕ ಕಾಲಮಿತಿಯೊಳಗೆ ಪಾರದರ್ಶಕವಾಗಿ ಬಗೆಹರಿಸಿಕೊಳ್ಳುವ ವ್ಯವಸ್ಥೆ ರೂಪಿಸಲು ಟ್ವಿಟರ್ ಇಂಕ್ ನಿರಾಕರಿಸುವುದನ್ನು ನಂಬಲಾಗುತ್ತಿಲ್ಲ… ಕಾನೂನಿನ ಅನ್ವಯ ಇದು ಕಡ್ಡಾಯವಾಗಿದ್ದರೂ ಸಹ ಅದನ್ನು ನಿರಾಕರಿಸುವ ಮೂಲಕ ಟ್ವಿಟರ್ ಇಂಕ್ ಕುಖ್ಯಾತಿಗೆ ಗುರಿಯಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹೀಗಾಗಿ, ಮೇ 26ರಿಂದ ಜಾರಿಗೆ ಬಂದಿರುವ ಐಟಿ ನಿಯಮಗಳನ್ನು ಅನುಸರಿಸುವ ಸಂಬಂಧ ಕೇಂದ್ರ ಸರ್ಕಾರವು ಟ್ವಿಟರ್‌ಗೆ ಅಂತಿಮ ಅವಕಾಶ ಕಲ್ಪಿಸಿದೆ. ಐಟಿ ನಿಯಮಗಳ ಅನ್ವಯ ಟ್ವಿಟರ್ ಅಹವಾಲು ಪರಿಹಾರ ಅಧಿಕಾರಿಯನ್ನು (ಜಿಆರ್‌ಒ) ನೇಮಿಸಿ ಎಂದು ವಿಚಾರಣೆಯ ಸಂದರ್ಭದಲ್ಲಿ ಈಚೆಗೆ ದೆಹಲಿ ಹೈಕೋರ್ಟ್‌ಗೆ ಟ್ವಿಟರ್ ತಿಳಿಸಿತ್ತು.