ಕೋಗಿಲು ಬಡಾವಣೆ ಒತ್ತುವರಿ ತೆರವಿಗೂ ಮುನ್ನ ಸರ್ಕಾರ ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು: ಹೈಕೋರ್ಟ್‌

“2018ರಲ್ಲಿ ಅಲ್ಲಿನ 40ಕ್ಕೂ ಹೆಚ್ಚು ನಿವಾಸಿಗಳಿಗೆ ಜಾಗವನ್ನು ತಾತ್ಕಾಲಿಕ ಹಂಚಿಕೆ ಮಾಡಿರುವ ಸಂಬಂಧ ಪತ್ರ ನೀಡಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಉತ್ತರಿಸಬೇಕು” ಎಂದಿರುವ ನ್ಯಾಯಾಲಯ.
Kogilu Layout
Kogilu Layout
Published on

ಕೋಗಿಲು ಬಡಾವಣೆಯಲ್ಲಿನ ವಾಸಿಂ ಮತ್ತು ಫಕೀರ್‌ ಕಾಲೊನಿಗಳಲ್ಲಿ ಜನರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರೂ ಅವುಗಳನ್ನು ತೆರವುಗೊಳಿಸುವಾಗ ರಾಜ್ಯ ಸರ್ಕಾರವು ಸಮೀಕ್ಷೆ ನಡೆಸಿ, ಪ್ರಕ್ರಿಯೆ ಪಾಲಿಸಬೇಕಿತ್ತು ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಮೌಖಿಕವಾಗಿ ಹೇಳಿದೆ.

ಅಕ್ರಮವಾಗಿ ತೆರವು ಕಾರ್ಯಾಚರಣೆ ನಡೆಸಿರುವುದರಿಂದ ಅದನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಕೋಗಿಲು ಬಡಾವಣೆ ನಿವಾಸಿಗಳಾದ ಜೈಬಾ ತಬಸ್ಸುಮ್, ರೆಹನಾ ಮತ್ತು ಆರೀಫ್ ಬೇಗಂ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.

Chief Justice Vibhu Bhakhru & Justice CM Poonacha
Chief Justice Vibhu Bhakhru & Justice CM Poonacha

“ಸಂತ್ರಸ್ತರಿಗೆ ಸೂರು ಕಲ್ಪಿಸಲು ಏನು ಮಾಡಲಾಗಿದೆ ಎಂಬುದನ್ನು ತಿಳಿಸಬೇಕು. ಅರ್ಜಿದಾರರು ಅಕ್ರಮವಾಗಿ ಮನೆ ನಿರ್ಮಿಸಿದ್ದರೂ ಸರ್ಕಾರ ಅಲ್ಲಿಗೆ ತೆರಳಿ ತೆರವು ಮಾಡುವುದಕ್ಕೂ ಮುನ್ನ ಪ್ರಕ್ರಿಯೆ ಪಾಲಿಸಬೇಕಿತ್ತು. ಎಷ್ಟು ಜನರು ಇದ್ದಾರೆ ಎಂಬ ಸಮೀಕ್ಷೆಯನ್ನು ಸರ್ಕಾರ ನಡೆಸಬೇಕಿತ್ತು. ಎಷ್ಟು ಜನರಿಗೆ ವ್ಯವಸ್ಥೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕಿತ್ತು” ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ.

ಅಲ್ಲದೇ, “2018ರಲ್ಲಿ ಅಲ್ಲಿನ 40ಕ್ಕೂ ಹೆಚ್ಚು ನಿವಾಸಿಗಳಿಗೆ ಜಾಗವನ್ನು ತಾತ್ಕಾಲಿಕ ಹಂಚಿಕೆ ಮಾಡಿರುವ ಸಂಬಂಧ ಪತ್ರ ನೀಡಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಇದಕ್ಕೂ ರಾಜ್ಯ ಸರ್ಕಾರ ಉತ್ತರಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು “ಒತ್ತುವರಿ ತೆರವಿಗೂ ಮುನ್ನ ಸರ್ಕಾರ ಸಮೀಕ್ಷೆ ನಡೆಸಿದೆಯೇ? ಎಷ್ಟು ಜನರು ಅಲ್ಲಿದ್ದರು ಎಂಬುದನ್ನು ಪತ್ತೆ ಮಾಡಿತ್ತೇ? ಪುನರ್ವಸತಿ ಕಲ್ಪಿಸಿರುವ ಸ್ಥಳದಲ್ಲಿ ಸೌಲಭ್ಯಗಳಿಲ್ಲ. 200ಕ್ಕೂ ಹೆಚ್ಚು ಜನರಿದ್ದು, ಅವರಿಗೆ ಊಟದ ವ್ಯವಸ್ಥೆ ಮಾಡಿಲ್ಲ” ಎಂದರು.

“2013ರ ವೇಳೆ ಆಕ್ಷೇಪಿತ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಿರಲಿಲ್ಲ. ಆದರೆ, ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಆ ಜಾಗದಲ್ಲಿ ಜನರು ಜೋಪಡಿಗಳಲ್ಲಿ ನೆಲೆಸಿದ್ದರು. 28 ವರ್ಷಗಳ ಹಿಂದೆ 110 ಮನೆ ಇದ್ದವು, ತೆರವು ಕಾರ್ಯಾಚರಣೆ ನಡೆಸುವಾಗ 300 ಮನೆಗಳಿದ್ದವು ಎಂದು ಅರ್ಜಿಯಲ್ಲಿ ವಿವರಿಸಿದ್ದೇವೆ. ಈ ಜಾಗಕ್ಕೆ ಸಂಬಂಧಿಸಿದಂತೆ 2018ರಲ್ಲಿ 40ಕ್ಕೂ ಹೆಚ್ಚು ನಿವಾಸಿಗಳಿಗೆ ತಾತ್ಕಾಲಿಕ ಹಂಚಿಕೆ ಪತ್ರ ನೀಡಲಾಗಿದೆ. ಅಕ್ರಮ ಒತ್ತುವರಿ ತೆರವು ಮಾಡುವಾಗ 15 ದಿನ ಮುಂಚಿತವಾಗಿ ನೋಟಿಸ್‌ ನೀಡಬೇಕು ಎಂಬ ನಿಯಮ ಇದೆ. ಅದನ್ನು ಪಾಲಿಸಲಾಗಿಲ್ಲ” ಎಂದು ದೂರಿದರು.

ಈ ಹಂತದಲ್ಲಿ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಆಕ್ಷೇಪಿತ ಸ್ಥಳವನ್ನು ಕಲ್ಲು ಕ್ವಾರಿಗೆ ನೀಡಲಾಗಿತ್ತು. ಪರವಾನಗಿ ಮುಗಿದ ಮೇಲೆ ಬಿಬಿಎಂಪಿಗೆ ಘನತ್ಯಾಜ್ಯ ವಿಲೇವಾರಿಗೆ ಹಂಚಿಕೆ ಮಾಡಲಾಗಿತ್ತು. 2013, 2014 ಆನಂತರದ ವರ್ಷಗಳಲ್ಲಿ ಎಷ್ಟೆಷ್ಟು ಮನೆಗಳು ತಲೆ ಎತ್ತಿವೆ ಎಂಬುದರ ಕುರಿತಾದ ಉಪಗ್ರಹ ಚಿತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. 14.03 ಎಕರೆಯನ್ನು ಬಿಬಿಎಂಪಿಗೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಅದು ಕೊಳಚೆ ನೀರು ನಿಲ್ಲುವ ಸ್ಥಳವಾಗಿತ್ತು” ಎಂದರು.

ಆಗ ಪೀಠವು ಅರ್ಜಿದಾರರನ್ನು ಕುರಿತು “30 ವರ್ಷದಿಂದ ಅಲ್ಲಿ ನೆಲೆಸಿದ್ದರು ಎಂದು ವಾದಿಸುತ್ತಿದ್ದೀರಿ. ಗೂಗಲ್‌/ಉಪಗ್ರಹ ಚಿತ್ರಗಳ ಪ್ರಕಾರ ನೀವು ಅಲ್ಲಿರಲಿಲ್ಲ. ನಾವು ಉಪಗ್ರಹ ಚಿತ್ರಗಳನ್ನು ಪ್ರಶ್ನಿಸಬೇಕೆ?” ಎಂದಿತು.

Also Read
ಕೋಗಿಲು ಬಡಾವಣೆ ಒತ್ತುವರಿ ತೆರವು: ಸಂತ್ರಸ್ತರ ಪುನವರ್ಸತಿ ಸ್ಥಳ ಗುರುತಿಸಿರುವ ಬಗ್ಗೆ ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಬಿಬಿಎಂಪಿಗೆ ತೆರವು ಕಾರ್ಯಾಚರಣೆ ನಡೆಸುವ ಹಕ್ಕು ಇಲ್ಲ ಎಂಬ ಅರ್ಜಿದಾರರ ವಾದಕ್ಕೆ ಆಕ್ಷೇಪಿಸಿದ ಪೀಠವು “ಹಕ್ಕಿನ ವಿಚಾರ ಪರಿಗಣಿಸುತ್ತಿಲ್ಲ. ಬಿಬಿಎಂಪಿಯು ಒತ್ತುವರಿ ತೆರವು ನಡೆಸಿರುವ ರೀತಿ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮಾತ್ರ ಪರಿಗಣಿಸಲಾಗುತ್ತಿದೆ” ಎಂದಿತು.

ರಾಜ್ಯ ಸರ್ಕಾರವನ್ನು ಕುರಿತು “ಸಂತ್ರಸ್ತರಿಗೆ ಪುನವರ್ಸತಿ ಕಲ್ಪಿಸುವ ಕೆಲಸ ನಡೆಯುತ್ತಿದೆಯೇ? ವಸತಿಯು ಮೂಲಭೂತ ಅಗತ್ಯಗಳಲ್ಲಿ ಒಂದು. ಜನರಿಗೆ ಸೂರು ಕಲ್ಪಸಿದೇ ಇರಲಾಗದು. ಸೂರು ಕಳೆದುಕೊಂಡಿರುವವರು ಎಲ್ಲಿದ್ದಾರೆ? ಅವರಿಗೆ ಏನು ವ್ಯವಸ್ಥೆ ಮಾಡಲಾಗಿದೆ?” ಎಂದಿತು.

ಆಗ ಎಜಿ ಅವರು “ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ನೆಲೆಸಿರುವ ಕುಟುಂಬಗಳು, ಅಲ್ಲಿರುವ ಜನರು, ವೈದ್ಯಕೀಯ ಮತ್ತು ಉಪಹಾರ ವ್ಯವಸ್ಥೆ ಮಾಡಿರುವ ಕುರಿತು ಜನವರಿ 22ರಂದು ಸಮಗ್ರವಾದ ಅಫಿಡವಿಟ್‌ ಸಲ್ಲಿಸಲಾಗಿದೆ. ನ್ಯಾಯಾಲಯದ ನಿರ್ದೇಶನದ ಪ್ರಕಾರ ಎಲ್ಲಾ ವ್ಯವಸ್ಥೆ ಮಾಡಲಾಗಿದೆ” ಎಂದರು. ಇದಕ್ಕೂ ಪೂರಕ ದಾಖಲೆ, ಚಿತ್ರ-ವಿಡಿಯೊಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.

ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಫೆಬ್ರವರಿ 4ಕ್ಕೆ ಮುಂದೂಡಿತು.

Kannada Bar & Bench
kannada.barandbench.com