ಅಧಿಕಾರರೂಢ ರಾಜಕೀಯ ಪಕ್ಷಗಳು ಮಣಿಸಲಾಗದಂತಹ ಮುಖ್ಯ ಚುನಾವಣಾ ಆಯುಕ್ತರ ಅಗತ್ಯವಿದೆ: ಸುಪ್ರೀಂ ಕೋರ್ಟ್

ಮುಖ್ಯ ಚುನಾವಣಾ ಆಯುಕ್ತರ ನೇಮಕ ಮಾಡುವ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಳ್ಳುವಂತೆ ಸೂಚಿಸಿದ ನ್ಯಾಯಾಲಯ. ಇಂದು ಕೂಡ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಕೆ.
ಅಧಿಕಾರರೂಢ ರಾಜಕೀಯ ಪಕ್ಷಗಳು ಮಣಿಸಲಾಗದಂತಹ ಮುಖ್ಯ ಚುನಾವಣಾ ಆಯುಕ್ತರ ಅಗತ್ಯವಿದೆ: ಸುಪ್ರೀಂ ಕೋರ್ಟ್
Published on

ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಅಧಿಕಾರದಲ್ಲಿ ಉಳಿಯಬೇಕಾದರೆ ಅವರು ತಮ್ಮ ಅಣತಿಯಂತೆ ನಡೆದುಕೊಳ್ಳಬೇಕೆಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಒತ್ತಾಯಿಸುತ್ತವೆ, ಇದರಿಂದಾಗಿ ಚುನಾವಣಾ ಆಯೋಗದ ಸ್ವಾತಂತ್ರ್ಯದೊಂದಿಗೆ ರಾಜಿಯಾದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಅಭಿಪ್ರಾಯಪಟ್ಟಿತು.

ಇತ್ತೀಚೆಗೆ ಹಲವು ಮುಖ್ಯ ಚುನಾವಣಾ ಆಯುಕ್ತರ ಅಧಿಕಾರಾವಧಿ ಮೊಟಕುಗೊಂಡಿರುವುದನ್ನು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಅಜಯ್ ರಾಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಹಾಗೂ ಸಿ.ಟಿ.ರವಿಕುಮಾರ್ ಅವರಿದ್ದ ಸಂವಿಧಾನ ಪೀಠ ಪ್ರಸ್ತಾಪಿಸಿತು.

“2015ರಿಂದ ಹಲವು ಸಿಇಸಿಗಳನ್ನು ಕಂಡಿದ್ದೇವೆ. ಮೊಟಕುಗೊಂಡ ಅಧಿಕಾರಾವಧಿಯೊಂದಿಗೆ ಅವರು ತಮ್ಮನ್ನು ಆಯ್ಕೆ ಮಾಡಲೆಂಬಂತೆ ರೂಪುಗೊಂಡಿರುತ್ತಾರೆ ಎನ್ನಬಹುದು. ಯುಪಿಎ ಅವಧಿಯಲ್ಲೂ ಇದು ನಡೆದಿತ್ತು” ಎಂದು ನ್ಯಾ. ಜೋಸೆಫ್‌ ಹೇಳಿದರು.

ಮುಖ್ಯ ಚುನಾವಣಾ ಆಯುಕ್ತರ ಮೇಲೆ ಅಗಾಧವಾದ ಜವಾಬ್ದಾರಿ ಇದೆ ಹೀಗಾಗಿ ಅವರು ಮಣಿಸಲಾಗದಂತಹ ವ್ಯಕ್ತಿಯಾಗಬೇಕು ಎಂದು ನ್ಯಾಯಾಲಯ ಹೇಳಿತು. ಈ ನಿಟ್ಟಿನಲ್ಲಿ ನ್ಯಾಯಾಲಯ ಚುನಾವಣಾ ಸುಧಾರಣೆ ಜಾರಿಗೆ ತಂದ ಮತ್ತು ಚುನಾವಣಾ ಆಯೋಗವನ್ನು ಬಲಶಾಲಿ ಸಂಸ್ಥೆಯನ್ನಾಗಿ ಮಾಡಿದ ನಿವೃತ್ತ ಸಿಇಸಿ ಟಿ ಎನ್ ಶೇಷನ್ ಅವರ ಹೆಸರನ್ನು ಪ್ರಸ್ತಾಪಿಸಿತು.

Also Read
ರಾಜಕೀಯ ಪಕ್ಷಗಳಿಂದ ಧಾರ್ಮಿಕ ಚಿಹ್ನೆ, ಹೆಸರು ಬಳಕೆ: ಚುನಾವಣಾ ಆಯೋಗ, ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

"ತಮ್ಮನ್ನು ಮಣಿಸಲು ಅನುವು ಮಾಡಿಕೊಡದಂತಹ, ಗುಣಶೀಲ ವ್ಯಕ್ತಿ ಬೇಕಿದೆ… ಹಾಗಾದರೆ ಇಂತಹ ವ್ಯಕ್ತಿಯನ್ನು ಯಾರು ನೇಮಿಸಬಲ್ಲರು ಎಂಬುದು ಪ್ರಶ್ನೆ. ನೇಮಕಾತಿ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಇದ್ದರೆ ವ್ಯವಸ್ಥೆಯಲ್ಲಿ ಗೊಂದಲ ಕಡಿಮೆಯಾಗಲಿದೆ" ಎಂದು ನ್ಯಾಯಾಲಯ ಹೇಳಿದೆ.

ಸಂವಿಧಾನದ 342 (2) ನೇ ವಿಧಿಯನ್ನು ಉಲ್ಲಂಘಿಸಿ ನೇಮಕಾತಿ ಮಾಡುವ ಅಧಿಕಾರ ಕಾರ್ಯಾಂಗಕ್ಕೆ ಇದೆ ಎಂಬುದನ್ನು ಆಧರಿಸಿ ಭಾರತ ಚುನಾವಣಾ ಆಯೋಗಕ್ಕೆ (ಇಸಿಐ) ಸದಸ್ಯರನ್ನು ನೇಮಿಸುವ ಈಗಿನ ವ್ಯವಸ್ಥೆಯನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಇಂದು ಕೂಡ ಪ್ರಕರಣದ ವಿಚಾರಣೆ ಮುಂದುವರೆಯಲಿದೆ.

Kannada Bar & Bench
kannada.barandbench.com