ರಾಜಕೀಯ ಪಕ್ಷಗಳು ಧಾರ್ಮಿಕ ಚಿಹ್ನೆ, ಹೆಸರು ಬಳಸುತ್ತಿರುವ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರ ಮತ್ತು ಭಾರತದ ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದೆ [ಸೈಯದ್ ವಸೀಮ್ ರಿಜ್ವಿ ವಿರುದ್ಧ ಭಾರತ ಚುನಾವಣಾ ಆಯೋಗ].
ತಾನು ಪರಿಹಾರ ಕೋರಿರುವ ರಾಜಕೀಯ ಪಕ್ಷಗಳನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಮಾಡಿಕೊಳ್ಳಲು ಕೂಡ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ಅರ್ಜಿದಾರ ಸೈಯದ್ ವಸೀಮ್ ರಿಜ್ವಿ ಅವರಿಗೆ ಸ್ವಾತಂತ್ರ್ಯ ನೀಡಿತು.
ಅರ್ಜಿದಾರರ ಪರ ಹಾಜರಿದ್ದ ವಕೀಲ ಗೌರವ್ ಭಾಟಿಯಾ ವಾದ ಮಂಡಿಸಿ, ರಾಜಕೀಯ ಪಕ್ಷಗಳ ಹೆಸರು ಮತ್ತು ಚಿಹ್ನೆಗಳು ಜನ ಪ್ರತಿನಿಧಿ ಕಾಯಿದೆ- 1951ನ್ನು ಉಲ್ಲಂಘಿಸುತ್ತಿದ್ದು ಅವುಗಳಲ್ಲಿ ಕೆಲವು ಧ್ವಜಗಳು ಅರ್ಧಚಂದ್ರ ಮತ್ತು ನಕ್ಷತ್ರದ ಗುರುತುಗಳನ್ನು ಇರಿಸಿಕೊಂಡಿವೆ ಎಂದು ದೂರಿದರು.
ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಮತ ಯಾಚಿಸಿದರೆ ಜನಪ್ರತಿನಿಧಿ ಕಾಯಿದೆ ಅನ್ವಯವಾಗುತ್ತದೆಯೇ ಎಂದು ಪೀಠ ಈ ಹಂತದಲ್ಲಿ ಪ್ರಶ್ನಿಸಿತು. ಆಗ ವಕೀಲರು ಕಾಯ್ದೆಯ ಸೆಕ್ಷನ್ 123(3)(ಎ) ಮತ್ತು ಮತ್ತು ಅಭಿರಾಮ್ ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದರು.
ರಾಜಕೀಯ ಪಕ್ಷಗಳು ಧಾರ್ಮಿಕ ಅರ್ಥ ಹೊಂದಿರಬಾರದು ಮತ್ತು ಎಸ್ ಆರ್ ಬೊಮ್ಮಾಯಿ ಪ್ರಕರಣದಲ್ಲಿ ಜಾತ್ಯತೀತತೆಯನ್ನು ಮೂಲಭೂತ ವೈಶಿಷ್ಟ್ಯದ ಭಾಗವಾಗಿರಬೇಕು ಪರಿಗಣಿಸಿದೆ ಎಂದು ವಕೀಲರು ವಾದಿಸಿದರು.
ಜನ ಪ್ರತಿನಿಧಿ ಕಾಯಿದೆಯ ಸೆಕ್ಷನ್ 123ರ ಪ್ರಕಾರ ಮತದಾರರಿಗೆ ಆಮಿಷವೊಡ್ಡಲು ಧರ್ಮ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ರಿಜ್ವಿ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ. ರಾಜಕೀಯ ಲಾಭಗಳನ್ನು ಧಾರ್ಮಿಕ ಭಾವನೆಗಳೊಂದಿಗೆ ಬೆರೆಸದಂತೆ ಅಭ್ಯರ್ಥಿ ಅಥವಾ ಅವರ ಏಜೆಂಟ್‌ಗಳಿಗೆ ಕಾಯಿದೆ ನಿಷೇಧ ಹೇರುತ್ತದೆ ಎಂದು ಅವರು ಹೇಳಿದ್ದಾರೆ.