
ಚರ್ಚೆಗಳು ನಡೆದ ಬಳಿಕವೂ ಮಸೂದೆಯನ್ನು ತಡೆ ಹಿಡಿಯಲು ರಾಜ್ಯಪಾಲರು ಮುಂದಾದರೆ ಆ ಮಸೂದಗೆ ಒಪ್ಪಿಗೆ ನೀಡುವಂತೆ ರಾಜ್ಯ ಸಚಿವ ಸಂಪುಟ ಅವರನ್ನು ಒತ್ತಾಯಿಸಬಹುದು ಎಂದು ಕೇರಳ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಮಂಡಿಸಿದ ವಾದಕ್ಕೆ ಕರ್ನಾಟಕ ದನಿಗೂಡಿಸಿದೆ.
ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕುವುದಕ್ಕೆ ಗಡುವು ವಿಧಿಸಬಹುದೇ ಎಂಬ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 143 ನೇ ವಿಧಿಯ ಅಡಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಮಾಡಿದ ಶಿಫಾರಸ್ಸನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ವಿಕ್ರಮ್ ನಾಥ್ , ಪಿ ಎಸ್ ನರಸಿಂಹ ಹಾಗೂ ಅತುಲ್ ಎಸ್ ಚಂದೂರ್ಕರ್ ಅವರಿದ್ದ ಸಾಂವಿಧಾನಿಕ ಪೀಠದೆದುರು ಈ ವಾದ ಮಂಡಿಸಲಾಯಿತು.
ಕೇರಳ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಕೆ ವೇಣುಗೋಪಾಲ್ , ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಚರ್ಚೆಗಳ ನಂತರವೂ ಯಾವುದೇ ಒಮ್ಮತ ಏರ್ಪಡದಿದ್ದರೆ ಮತ್ತು ರಾಜ್ಯಪಾಲರು ಮಸೂದೆಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯಲು ಉದ್ದೇಶಿಸಿದರೆ, ಸಚಿವ ಸಂಪುಟ ತಕ್ಷಣವೇ 163ನೇ ವಿಧಿಯಡಿ ಒಪ್ಪಿಗೆ ನೀಡುವಂತೆ ಸಲಹೆ ನೀಡಬಹುದು ಎಂದು ಹೇಳಿದರು.
"ರಾಜ್ಯಪಾಲರಿಗೆ ವಿಧಿ 163ರ ಅಡಿ ಅಂಕಿತವನ್ನು ನೀಡುವುದರ ಹೊರತಾದ ಯಾವುದೇ ಆಯ್ಕೆಗಳಿಲ್ಲ. ನನ್ನ ದೃಷ್ಟಿಕೋನದಲ್ಲಿ ಹೇಳಬೇಕೆಂದರೆ, ಶಾಸನಸಭೆಯಲ್ಲಿ ಮಸೂದೆಯು ಅಂಗೀಕಾರಗೊಂಡ ಬೆನ್ನಿಗೇ, ಚರ್ಚೆಗೆ ಆಸ್ಪದವನ್ನೂ ನೀಡದೆ ಮಂತ್ರಿಪರಿಷತ್ತು163ನೇ ವಿಧಿಯನ್ನು ಬಳಸುವ ಮೂಲಕ ಅಂಕಿತ ಹಾಕುವಂತೆ ರಾಜ್ಯಪಾಲರನ್ನು ಒತ್ತಾಯಿಸುವುದು ಸೂಕ್ತವಲ್ಲವೇನೋ. ರಾಜ್ಯಪಾಲರನ್ನು ಹಾಗೆ ಒತ್ತಾಯಿಸುವುದು... ರಾಜ್ಯದ ಮುಖ್ಯಸ್ಥರಾಗಿ ಅವರು ಹೊಂದಿರುವ ಉನ್ನತ ಸ್ಥಾನಕ್ಕೆ ತಕ್ಕುದಾದುದಲ್ಲ," ಎಂದು ಅವರು ವಿವರಿಸಿದರು. ಆ ಮೂಲಕ 163ರ ಅಡಿ ರಾಜ್ಯಪಾಲರಿಗೆ ಅಂಕಿತ ಹಾಕುವುದರ ಹೊರತಾದ ಆಯ್ಕೆಗಳಿಲ್ಲ ಎನ್ನುವುದನ್ನು ಸ್ಪಷ್ಪಪಡಿಸುವುದರ ಜೊತೆಗೇ, ಸಾಂವಿಧಾನಿಕ ಔಪಚಾರಿಕತೆಯ ಬಗ್ಗೆಯೇ ತಿಳಿಸಿದರು.
ಇದೇ ವೇಳೆ, ಹಣಕಾಸು ಮಸೂದೆಗೆ ಒಪ್ಪಿಗೆ ನೀಡದೆ ಇರುವ ಅಧಿಕಾರ ರಾಜ್ಯಪಾಲರಿಗೆ ಇದೆ ಎಂಬ ಪ್ರಶ್ನೆಯೇ ಇಲ್ಲ ಇದನ್ನು ಸಂವಿಧಾನ ಸ್ಪಷ್ಟಪಡಿಸಿದೆ ಎಂದು ಸಹ ತಿಳಿಸಿದರು.
ಕರ್ನಾಟಕ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯಂ ಅವರು ಕೂಡ ವೇಣುಗೋಪಾಲ್ ಅವರ ವಾದಕ್ಕೆ ದನಿಗೂಡಿಸಿದರು. ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ವಿಟೋ ಅಧಿಕಾರ ಇಲ್ಲ ಎಂದು ಹೇಳಿದರು.
ರಾಜ್ಯಪಾಲರಿಗೆ ತಕ್ಕುದಲ್ಲದ ವಿಟೋ ಅಧಿಕಾರ ನೀಡುವಂತೆ ಮಾಡುವ ಯಾವುದೇ ವ್ಯಾಖ್ಯಾನ ಚುನಾಯಿತ ರಾಜ್ಯ ಶಾಸಕಾಂಗಗಳ ಅಸ್ತಿತ್ವಕ್ಕೆ ವಿರುದ್ಧ ಎಂದರು.
ಗವರ್ನರ್ ಬಿಲ್ ಅನ್ನು ಮಂತ್ರಿ ಪರಿಷತ್ತಿನ ಸಲಹೆಯ ಆಧಾರದ ಮೇಲೆ ಶಾಸನಸಭೆಗೆ ಹಿಂದಿರುಗಿಸಲು ಮಾತ್ರ ಅಧಿಕಾರ ಹೊಂದಿದ್ದು, ಮರುಪಾಸಾದ ನಂತರ ಅನಿವಾರ್ಯವಾಗಿ ಅನುಮೋದಿಸಬೇಕು ಎಂದು ಸುಬ್ರಮಣಿಯಂ ಹೇಳಿದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿರುವ ಸಾಲಿಸಿಟರ್ ಜನರ್ ತುಷಾರ್ ಮೆಹ್ತಾ ಅವರು ಮಂಡಿಸಿರುವ ಲಿಖಿತ ವಾದಗಳೇ ವಿರೋಧಾಭಾಸಗಳಿಂದ ಕೂಡಿವೆ ಎಂದರು.
ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರವಿಂದ್ ದಾತಾರ್, ರಾಜ್ಯಪಾಲರಿಗೆ 200ನೇ ವಿಧಿಯ ಅಡಿಯಲ್ಲಿ ಮಸೂದೆ ತಡೆಯುವ ಯಾವುದೇ ವಿವೇಚನಾಧಿಕಾರ ಇಲ್ಲ ಎಂದು ವಾದಿಸಿದರು.
ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರು ನ್ಯಾಯಾಲಯದ ಪ್ರಕ್ರಿಯೆಗಳ ಮೂಲಕ ಶಾಸಕಾಂಗ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವಂತಹ ಪರಿಸ್ಥಿತಿಗೆ ನ್ಯಾಯಾಲಯವನ್ನು ಎಳೆಯುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ವಕೀಲ ನಿರಂಜನ್ ರೆಡ್ಡಿ ಕೂಡ ಇಂದು ವಾದ ಮಂಡಿಸಿದ್ದು ನಾಳೆಯೂ (ಬುಧವಾರ) ವಿಚಾರಣೆ ಮುಂದುವರೆಯಲಿದೆ.