ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಶೀಘ್ರ ಸಹಿ ಹಾಕುವುದು ಕಡ್ಡಾಯ ಎಂಬುದನ್ನು ರಾಜ್ಯಪಾಲರು ಮರೆಯಬಾರದು: ಸುಪ್ರೀಂ

ತೆಲಂಗಾಣ ರಾಜ್ಯಪಾಲರಾದ ತಮಿಳ್‌ಸಾಯಿ ಸೌಂದರರಾಜನ್‌ ಅವರು ರಾಜ್ಯ ಸರ್ಕಾರವು ಸಹಿ ಹಾಕಲು ಕಳುಹಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುತ್ತಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸುವಾಗ ಸುಪ್ರೀಂ ಕೋರ್ಟ್‌ ಮೇಲಿನಂತೆ ಹೇಳಿದೆ.
Tamilisai Soundararajan , K. Chandrashekar Rao and Supreme Court
Tamilisai Soundararajan , K. Chandrashekar Rao and Supreme Court
Published on

ರಾಜ್ಯದ ಶಾಸನಸಭೆ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕದೆ ಹಾಗೆ ಉಳಿಸಿಕೊಳ್ಳುವ ಮೂಲಕ ವಿಳಂಬ ನೀತಿ ಅನುಸರಿಸುತ್ತಿರುವ ವಿಚಾರವಾಗಿ ಸುಪ್ರೀಂ ಕೋರ್ಟ್‌ ಗಂಭೀರ ಅವಲೋಕನ ಮಾಡಿದೆ. ಸಂವಿಧಾನದ 200ನೇ ವಿಧಿಯ ಪ್ರಕಾರ ಶಾಸನಸಭೆ ಅಂಗೀಕರಿಸಿದ ಮಸೂದೆಗಳಿಗೆ ಸಾಧ್ಯವಾದಷ್ಟು ಬೇಗ ಸಹಿ ಹಾಕುವುದು ರಾಜ್ಯಪಾಲರ ಕರ್ತವ್ಯವಾಗಿದೆ ಎಂದು ಅದು ಹೇಳಿದೆ [ತೆಲಂಗಾಣ ಸರ್ಕಾರ ವರ್ಸಸ್‌ ರಾಜ್ಯಪಾಲರ ಕಾರ್ಯದರ್ಶಿ ಮತ್ತು ಇತರರು].

ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟು ರಾಜ್ಯಪಾಲರ ಸಮ್ಮತಿಗೆ ಕಳುಹಿಸಿರುವ ಹತ್ತು ಮಸೂದೆಗಳಿಗೆ ರಾಜ್ಯಪಾಲರಾದ ತಮಿಳ್‌ಸಾಯಿ ಸೌಂದರರಾಜನ್‌ ಅವರ ಸಹಿ ಹಾಕಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾ. ಪಿ ಎಸ್‌ ನರಸಿಂಹ ಅವರ ನೇತೃತ್ವದ ವಿಭಾಗೀಯ ಪೀಠ ಇತ್ಯರ್ಥಪಡಿಸಿತು.

“ಸಾಧ್ಯವಾದಷ್ಟು ಬೇಗ (ಸಂವಿಧಾನದ 200(1) ನೇ ವಿಧಿಯಲ್ಲಿ) ಎಂಬ ಪದವು ಮಹತ್ವದ ಸಾಂವಿಧಾನಿಕ ಉದ್ದೇಶ ಹೊಂದಿದೆ. ಇದನ್ನು ಸಾಂವಿಧಾನಿಕ ಪ್ರಾಧಿಕಾರಿಗಳು ಗಮನದಲ್ಲಿಟ್ಟುಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.

ಹೆಚ್ಚುವರಿ ಅಭಿಪ್ರಾಯ ಕೋರಿ ಸದರಿ ಮಸೂದೆಗಳನ್ನು ರಾಜ್ಯ ಸರ್ಕಾರಕ್ಕೆ ಮರಳಿಸಿರುವುದರಿಂದ ಯಾವುದೇ ಮಸೂದೆಗಳು ರಾಜ್ಯಪಾಲರ ಬಳಿ ಉಳಿದಿಲ್ಲ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಪೀಠಕ್ಕೆ ತಿಳಿಸಿದ್ದರಿಂದ ಸುಪ್ರೀಂ ಕೋರ್ಟ್‌ ಅರ್ಜಿ ಇತ್ಯರ್ಥಪಡಿಸಿತು.

ರಾಜ್ಯ ಶಾಸನಸಭೆಯಲ್ಲಿ ಅಂಗೀಕರಿಸಲಾದ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕದೇ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಸಂವಿಧಾನದ 32ನೇ ವಿಧಿಯಡಿ ಸುಪ್ರೀಂ ಕೋರ್ಟ್‌ ವ್ಯಾಪ್ತಿಯನ್ನು ಬಳಸುವುದು ರಾಜ್ಯಕ್ಕೆ ಅನಿವಾರ್ಯವಾಗಿದೆ ಎಂದು ಅರ್ಜಿಯಲ್ಲಿ ತೆಲಂಗಾಣ ಸರ್ಕಾರ ತಿಳಿಸಿದೆ.

ಸಾಂವಿಧಾನಿಕ ನಿರ್ದೇಶನ ಪಾಲಿಸುವಲ್ಲಿ ವಿಫಲವಾಗಿರುವ ರಾಜ್ಯಪಾಲರ ನಡೆಯನ್ನು ಕಾನೂನುಬಾಹಿರ ಮತ್ತು ಸಾಂವಿಧಾನಿಕ ವಿರೋಧಿ ಎಂದು ಆದೇಶಿಸಿಬೇಕು ಎಂದು ಕೋರಲಾಗಿತ್ತು.

ಇದಕ್ಕೂ ಮುನ್ನ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ದುಷ್ಯಂತ್‌ ಧವೆ ಅವರು “ರಾಜ್ಯ ಶಾಸನ ಸಭೆಯು ಅಂಗೀಕರಿಸಿದ ಮಸೂದೆಗಳಿಗೆ ಸಮ್ಮತಿ ನೀಡುವಲ್ಲಿ ರಾಜ್ಯಪಾಲರು ಅನುಸರಿಸುತ್ತಿರುವ ವಿಳಂಬ ಧೋರಣೆಯಿಂದಾಗಿ ಚುನಾಯಿತ ಸರ್ಕಾರಗಳು ರಾಜ್ಯಪಾಲರ ಕೃಪಾಕಟಾಕ್ಷಕ್ಕೆ ಕಾಯುವ ಪರಿಸ್ಥಿತಿ ಇದೆ. ಇದು ಬಿಜೆಪಿಯೇತರ ಸರ್ಕಾರಗಳು ಇರುವ ಕಡೆ ಮಾತ್ರ ಆಗುತ್ತಿದೆ. ಮಧ್ಯಪ್ರದೇಶ, ಗುಜರಾತ್‌ ಇತ್ಯಾದಿ ರಾಜ್ಯಗಳಲ್ಲಿ ಒಂದೇ ದಿನದಲ್ಲಿ ಮಸೂದೆಗೆ ಸಹಿ ಹಾಕಲಾಗುತ್ತದೆ… ಆದರೆ, ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ಕಡೆ ಮಾತ್ರ ಹೀಗಾಗುತ್ತಿದೆʼ ಎಂದರು.

Also Read
ಬಿ ಎಲ್ ಸಂತೋಷ್ ಹೆಸರು ಕೇಳಿ ಬಂದಿದ್ದ ಶಾಸಕರ ಖರೀದಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ತೆಲಂಗಾಣ ಹೈಕೋರ್ಟ್

ಇದಕ್ಕೆ ತುಷಾರ್‌ ಮೆಹ್ತಾ ಅವರು “ನಾನು ಇದಕ್ಕೆ ಪ್ರತಿಕ್ರಿಯಿಸುವುದಿಲ್ಲ” ಎಂದರು. ಇದಕ್ಕೆ ಧವೆ ಅವರು “ಕೇಂದ್ರ ಸರ್ಕಾರ ನೇಮಕ ಮಾಡಿರುವ ಕಾನೂನು ಅಧಿಕಾರಿ ನೀವು (ಮೆಹ್ತಾ)” ಎಂದರು. ಅಲ್ಲದೇ, ತಡ ಮಾಡದೇ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕಬೇಕು ಎಂದು ಆದೇಶದಲ್ಲಿ ಉಲ್ಲೇಖಿಸುವಂತೆ ಪೀಠಕ್ಕೆ ಅವರು ಕೋರಿದರು.

ಇದಕ್ಕೆ ಮೆಹ್ತಾ ಅವರು “ಇದು ಸರಿಯಾದ ಕೋರಿಕೆಯಲ್ಲ. ಸಾಂವಿಧಾನಿಕ ಅನುಪಾಲನೆಯಾಗಿಲ್ಲ ಎಂಬುದನ್ನು ಅದು ತೋರಿಸಲಿದೆ” ಎಂದರು. ಅದಾಗ್ಯೂ, ಅರ್ಜಿ ಇತ್ಯರ್ಥಪಡಿಸುವಾಗ ನ್ಯಾಯಾಲಯವು ಅದೇ ರೀತಿ ಉಲ್ಲೇಖಿಸಿತು.

Kannada Bar & Bench
kannada.barandbench.com