ರಾಜ್ಯಪಾಲರ ನಿಷ್ಕ್ರಿಯತೆ: ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಜ್ಯಪಾಲರ ವಿಳಂಬಕ್ಕೆ ಸುಪ್ರೀಂ ಬೇಸರ

ಶಾಸಕಾಂಗ ಅಂಗೀಕರಿಸಿದ ಅಥವಾ ಮಂಡಿಸಲು ಉದ್ದೇಶಿಸಿರುವ ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡುವಲ್ಲಿ ವಿಳಂಬ ಮಾಡಿರುವುದನ್ನು ಪ್ರಶ್ನಿಸಿ ಪಂಜಾಬ್ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Punjab CM Bhagwant Mann, Governor Banwarilal Purohit and Supreme court
Punjab CM Bhagwant Mann, Governor Banwarilal Purohit and Supreme court

ವಿವಿಧ ರಾಜ್ಯಗಳ ರಾಜ್ಯಪಾಲರು ಅಲ್ಲಿನ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳ ಮೇಲೆ ಕಾರ್ಯನಿರ್ವಹಿಸದೆ ಮಸೂದೆಗಳಿಗೆ ಒಪ್ಪಿಗೆ ನೀಡುವುದಕ್ಕಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೆ ಕಾಯುತ್ತಿರುವ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಸೋಮವಾರ ಕಳವಳ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್‌ಗೆ ಎಡತಾಕುವ ಮುನ್ನವೇ ಮಸೂದೆಗಳಿಗೆ ಅಂಕಿತ ಹಾಕುವಂತೆ ರಾಜ್ಯಪಾಲರಿಗೆ ಒತ್ತಾಯಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ತೆಲಂಗಾಣದಲ್ಲೂ ಇದೇ ಸ್ಥಿತಿ ಇದೆ ಎಂದು ನೆನೆಯಿತು.

Also Read
ವಿಧೇಯಕಗಳಿಗೆ ಒಪ್ಪಿಗೆ ನೀಡಲು ವಿಳಂಬ: ರಾಜ್ಯಪಾಲರುಗಳ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಪಂಜಾಬ್, ತಮಿಳುನಾಡು

ಪಂಜಾಬ್‌ ವಿಧಾನಸಭೆಯನ್ನು ಮಾರ್ಚ್ 22, 2023 ರಂದು ಮುಂದೂಡಿ ಮೂರು ತಿಂಗಳ ನಂತರ ಮರುಸಭೆ ನಡೆಸಲಾಯಿತು ಎಂಬ ವಿಚಾರ ಗಮನಿಸಿದ ಸಿಜೆಐ ಇದು ಸಾಂವಿಧಾನಿಕವೇ ಎಂದು ಪ್ರಶ್ನಿಸಿದರು. ಪಂಜಾಬ್ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಆತ್ಮಶೋಧ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

"ಸಾಂವಿಧಾನಿಕವಾಗಿ ಈ ರೀತಿ ಮಾಡಬಹುದೇ? ನೀವು 6 ತಿಂಗಳಲ್ಲಿ ಅಧಿವೇಶನ ನಡೆಸಬೇಕಲ್ಲವೇ? ಆದ್ದರಿಂದಲೇ ಸುಗ್ರೀವಾಜ್ಞೆಯ ಅವಧಿ 6 ತಿಂಗಳು ಮೀರಬಾರದು ಎಂದಿದೆ. ಆದರೆ ನೀವು ಅಧಿವೇಶನವನ್ನು 3 ತಿಂಗಳು ಮುಂದೂಡಿ ಎಂದು ರಾಜ್ಯಪಾಲರು ಹೇಳುತ್ತಾರೆ... ಹಾಗಾದರೆ ಬಜೆಟ್ ಅಧಿವೇಶನ ಮುಂಗಾರು ಅಧಿವೇಶನ ಒಂದೇ ಆಗಿಬಿಡುತ್ತದೆ. ಇದು ಸಂವಿಧಾನಬದ್ಧವೇ? ಸಿಎಂ ಮತ್ತು ರಾಜ್ಯಪಾಲರು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ರಾಜ್ಯಪಾಲರು ತಾನು ಚುನಾಯಿತ ಪ್ರತಿನಿಧಿಯಲ್ಲ ಎಂದು ತಿಳಿದಿರಬೇಕು. ಅವರು ಮಸೂದೆಗೆ ಅಂಕಿತ ಹಾಕದೆ ಒಂದು ಬಾರಿ ಹಿಂದಕ್ಕೆ ಕಳುಹಿಸಬಹುದು,” ಎಂದು ನ್ಯಾಯಾಲಯ ಹೇಳಿತು. ಪ್ರಕರಣದ ಮುಂದಿನ ವಿಚಾರಣೆ ಶುಕ್ರವಾರ, ನವೆಂಬರ್ 10ರಂದು ನಡೆಯಲಿದೆ.

ರಾಜ್ಯ ವಿಧಾನಸಭೆ ಅಂಗೀಕರಿಸಿದ ಅಥವಾ ಮಂಡಿಸಲು ಉದ್ದೇಶಿಸಿರುವ ಮಸೂದೆಗಳಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಒಪ್ಪಿಗೆ ನೀಡಲು ವಿಳಂಬ ಮಾಡಿರುವುದನ್ನು ಪ್ರಶ್ನಿಸಿ ಪಂಜಾಬ್ ಸರ್ಕಾರ  ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅವಲೋಕನಗಳನ್ನು ಮಾಡಿತು.

ತಮ್ಮ ರಾಜ್ಯಗಳ ರಾಜ್ಯಪಾಲರ ವಿರುದ್ಧ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಸಲ್ಲಿಸಿರುವ ಇದೇ ರೀತಿಯ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಎದುರು ನೋಡುತ್ತಿವೆ.

Related Stories

No stories found.
Kannada Bar & Bench
kannada.barandbench.com