ಚಾಮರಾಜನಗರ ಕೋವಿಡ್ ದುರಂತ: ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಬಿ ಎ ಪಾಟೀಲ ನೇತೃತ್ವದ ಆಯೋಗ ರಚಿಸಿದ ರಾಜ್ಯ ಸರ್ಕಾರ

ಚಾಮರಾಜನಗರ ಮತ್ತು ಮೈಸೂರು ಜಿಲ್ಲಾಧಿಕಾರಿಗಳು ಸೇರಿದಂತೆ ಘಟನೆಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ದಾಖಲೆಗಳನ್ನು ತನಿಖಾ ಸಮಿತಿಗೆ ಒಪ್ಪಿಸಲು ಆರೋಗ್ಯ ಇಲಾಖೆಗೆ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಚಾಮರಾಜನಗರ ಕೋವಿಡ್ ದುರಂತ: ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಬಿ ಎ ಪಾಟೀಲ ನೇತೃತ್ವದ ಆಯೋಗ ರಚಿಸಿದ ರಾಜ್ಯ ಸರ್ಕಾರ
Published on

ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ದೊರೆಯದೆ ಭಾನುವಾರ ರಾತ್ರಿ 24 ಕೋವಿಡ್‌ ರೋಗಿಗಳು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ ಎ ಪಾಟೀಲ ಅವರಿರುವ ಏಕ ಸದಸ್ಯ ತನಿಖಾ ಆಯೋಗವನ್ನು ರಚಿಸಿ ಬುಧವಾರ ಆದೇಶ ಹೊರಡಿಸಿದೆ.

1952ರ ಕಮಿಷನ್‌ ಆಫ್‌ ಇನ್ಲ್ಕೈರಿ ಆಕ್ಟ್‌ನ ಸೆಕ್ಷನ್‌ ಮೂರರ ಅಡಿ ಬಿ ಎ ಪಾಟೀಲ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಾಜೇಶ್‌ ಗೋಯಲ್‌ ಅವರು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಘಟನೆಗೆ ಕಾರಣವಾದ ಸನ್ನಿವೇಶಗಳ ಕುರಿತು ತನಿಖೆ ನಡೆಸಬೇಕು. ಆಯೋಗದ ಕಚೇರಿ ಮೈಸೂರಿನಲ್ಲಿ ಇರಬೇಕು. ಕಾಯಿದೆಯ ಅಡಿ ನೀಡಲಾಗಿರುವ ಎಲ್ಲಾ ಅಧಿಕಾರವನ್ನು ತನಿಖಾ ಆಯೋಗ ಬಳಸಿಕೊಳ್ಳಬೇಕು ಎಂದು ಕೋರಲಾಗಿದೆ.

Also Read
[ಚಾಮರಾಜನಗರ ಕೋವಿಡ್‌ ದುರಂತ] ನ್ಯಾಯಾಂಗ ತನಿಖೆಯ ಇಂಗಿತ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್

ಘಟನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನ ನೀಡಿತ್ತು. ಮತ್ತೊಂದೆಡೆ ಮೂರು ದಿನಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಐಎಎಸ್‌ ಅಧಿಕಾರಿ ಶಿವಯೋಗಿ ಕಳಸದ್‌ ಅವರಿಗೆ ಸರ್ಕಾರ ಸೂಚಿಸಿತ್ತು.

ಇತ್ತ ಕರ್ನಾಟಕ ಹೈಕೋರ್ಟ್‌ ಇದೇ ಪ್ರಕರಣಕ್ಕೆ ಸಂಭವಿಸಿದಂತೆ ಸತ್ಯಶೋಧನೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ ಎನ್ ವೇಣುಗೋಪಾಲ ಗೌಡ ನೇತೃತ್ವದ ಸಮಿತಿಯನ್ನು ಬುಧವಾರ ರಚಿಸಿದೆ.

Kannada Bar & Bench
kannada.barandbench.com