ನಿವೃತ್ತ ಮುಖ್ಯ ಕಾರ್ಯದರ್ಶಿ ಜಾಧವ್‌ ತಾಯಿಗೆ ಭೂಮಿ ಮಂಜೂರು ಪ್ರಕರಣ: ನಿವೃತ್ತ ಡಿ ಸಿ ಶಂಕರ್‌ಗೆ ನಿರೀಕ್ಷಣಾ ಜಾಮೀನು

ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ 2021ರ ಆ.13ರಂದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 17ಎ ಅನ್ವಯ ತನ್ನ ವಿರುದ್ಧ ತನಿಖೆ ನಡೆಸಲು ಅನುಮತಿಸಿದ್ದಾರೆ ಎಂದು ಅರ್ಜಿದಾರರು ವಿವರಿಸಿದ್ದಾರೆ.
City civil courts bengaluru
City civil courts bengaluru

ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರ ತಾಯಿ ಹಾಗೂ ಮತ್ತಿತರರು ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಭೂಮಿ ಕಬಳಿಸಲು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತನಿಖೆಗೆ ಅನುಮತಿಸಿದ್ದು, ಬಂಧನ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ನಿವೃತ್ತ ಜಿಲ್ಲಾಧಿಕಾರಿ ವಿ ಶಂಕರ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯನ್ನು ವಿಶೇಷ ನ್ಯಾಯಾಲಯ ಈಚೆಗೆ ಪುರಸ್ಕರಿಸಿದೆ.

ಶಂಕರ್‌ ಅವರ ಮನವಿ ವಿಚಾರಣೆಯನ್ನು 23ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮಿನಾರಾಯಣ ಭಟ್‌ ಕೆ ಅವರು ನಡೆಸಿದ್ದು, ಅಧಿಕಾರಿಯನ್ನು ಬಂಧಿಸಿದರೆ ರೂ. 5 ಲಕ್ಷ ಮೌಲ್ಯದ ಬಾಂಡ್‌ ಮತ್ತು ಭದ್ರತೆ ಪಡೆದು ಅವರನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ.

ಹಗರಣದಲ್ಲಿ ಶಂಕರ್‌ ಭಾಗಿಯಾಗಿದ್ದಾರೋ, ಇಲ್ಲವೋ ಎಂಬುದು ಸೂಕ್ತ ತನಿಖೆಯಿಂದ ತಿಳಿಯಲಿದೆ. ಮೇಲ್ನೋಟಕ್ಕೆ ಅರ್ಜಿದಾರರನ್ನು ಬಂಧಿಸುವ ಅಥವಾ ವಶಕ್ಕೆ ಪಡೆಯುವ ಅಗತ್ಯವಿಲ್ಲ. ದಾಖಲೆಗಳ ಸಾಕ್ಷಿಯ ಆಧಾರದಲ್ಲಿ ಪ್ರಾಸಿಕ್ಯೂಷನ್‌ ಪ್ರಕರಣ ನಡೆಸುತ್ತಿದೆ. ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದರಿಂದ ತನಿಖೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಪೀಠವು ಹೇಳಿದೆ.

ಹೀಗಾಗಿ, ಅರ್ಜಿದಾರ ಶಂಕರ್‌ ಅವರು 20 ದಿನಗಳ ಒಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಸಾಕ್ಷಿಗಳನ್ನು ಪ್ರಭಾವಿಸುವಂತಿಲ್ಲ. ತನಿಖೆಗೆ ಸಹಕರಿಸಬೇಕು ಮತ್ತು ನ್ಯಾಯಾಲಯ ಸೂಚಿಸಿದಾಗ ಹಾಜರಾಗಬೇಕು. ನ್ಯಾಯಾಲಯದ ಅನುಮತಿ ಇಲ್ಲದೇ ದೇಶ ತೊರೆಯುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಆನೇಕಲ್‌ ತಾಲ್ಲೂಕಿನ ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿಯ ಸರ್ವೆ ನಂ.29ರಲ್ಲಿ ಸರ್ಕಾರದ 78 ಎಕರೆ ಭೂಮಿ ಇದೆ. ಈ ಪೈಕಿ 8.3 ಎಕರೆ ಭೂಮಿಯನ್ನು ಕರ್ನಾಟಕ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿ ಅರವಿಂದ್‌ ಜಾಧವ್‌ ಅವರ ತಾಯಿ ತಾರಾಬಾಯಿ ಮಾರುತಿ ರಾವ್‌ ಜಾಧವ್‌ ಅವರಿಗೆ ಹಂಚಿಕೆ ಮಾಡಲಾಗಿತ್ತು. 66 ಎಕರೆ ಭೂಮಿಗೆ ಸಂಬಂಧಿಸಿದಂತೆ ಹಲವರು ಭೂಮಿ ತಮಗೆ ಸೇರಿದ್ದು ಎಂದು ಪಹಣಿ ನೀಡುವಂತೆ ಆನೇಕಲ್‌ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ ಎಂದು ಮಾಹಿತಿದಾರ ಎಸ್‌ ಭಾಸ್ಕರನ್‌ ಅವರ ಹೇಳಿಕೆ ಆಧರಿಸಿ 2016ರ ಆಗಸ್ಟ್‌ 23ರಂದು ಎಸಿಬಿ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದರು.

ನಿವೃತ್ತ ಮುಖ್ಯ ಕಾರ್ಯದರ್ಶಿ ಅರವಿಂದ್‌ ಜಾಧವ್‌, ಅರ್ಜಿದಾರರಾಗಿರುವ ಅಂದಿನ ಜಿಲ್ಲಾಧಿಕಾರಿ ವಿ ಶಂಕರ್‌, ಆನೇಕಲ್‌ ವಿಭಾಗದ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಅವರು ಅಕ್ರಮವಾಗಿ ರಾಮನಾಯಕನಹಳ್ಳಿಯಲ್ಲಿ ಸರ್ವೆ ನಂ. 29/1 ಸೃಷ್ಟಿಸಿದ್ದಾರೆ ಎಂದು ದೂರಲಾಗಿದೆ.

Also Read
ನಿವೃತ್ತ ಮುಖ್ಯ ಕಾರ್ಯದರ್ಶಿ ಜಾಧವ್‌ ತಾಯಿಗೆ ಭೂಮಿ ಮಂಜೂರು ಪ್ರಕರಣ: ಅಧಿಕಾರಿ ಜಯಪ್ರಕಾಶ್‌ಗೆ ನಿರೀಕ್ಷಣಾ ಜಾಮೀನು

ಇದನ್ನು ಆಧರಿಸಿ ಸರ್ವೇಯರ್‌ ಆರ್‌ ಅರುಣ್‌ ಹಾಗೂ ಮತ್ತಿಬ್ಬರ ವಿರುದ್ದ ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಸೆಕ್ಷನ್‌ 13(1)(ಸಿ) ಜೊತೆಗೆ 13(2) ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 34 ಮತ್ತು 120ಬಿ ಅಡಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ವಿ ಶಂಕರ್‌ ಮತ್ತು ಅಂದಿನ ಮುಖ್ಯ ಕಾರ್ಯದರ್ಶಿ ಅರವಿಂದ್‌ ಜಾಧವ್‌ ಬಗ್ಗೆ ಉಲ್ಲೇಖವಿದೆಯಾದರೂ ಅವರ ಹೆಸರುಗಳು ಕಲಂ 6ರಲ್ಲಿವೆ ಎಂದು ವಿವರಿಸಲಾಗಿದೆ.

ರಾಮನಾಯಕನಹಳ್ಳಿಯಲ್ಲಿ ಸರ್ವೆ ನಂ. 29/1 ರ ಪೋಡಿ ನಡೆಸಲು ಸರ್ಕಾರದ ಆದೇಶದ ಅನ್ವಯ ಪೂರ್ವಾನುಮತಿ ನೀಡಿದ್ದಾಗಿ ವಿ ಶಂಕರ್‌ ವಿವರಿಸಿದ್ದಾರೆ. ಇದರ ಅನ್ವಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಆಸ್ತಿಯ ಸರ್ವೆ ನಡೆಸಿದ್ದಾರೆ. ಇಲ್ಲಿ ಯಾವುದೇ ತೆರನಾದ ಸ್ಪಜನ ಪಕ್ಷಪಾತ ನಡೆದಿಲ್ಲ. ಆದರೆ, ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ 2021ರ ಆಗಸ್ಟ್‌ 13ರಂದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 17ಎ ಅನ್ವಯ ತನ್ನ ವಿರುದ್ಧ ತನಿಖೆ ನಡೆಸಲು ಅನುಮತಿಸಿದ್ದಾರೆ. ಏಕ ವ್ಯಕ್ತಿ ಪೋಡಿ ಅನುಮತಿಸಿರುವ ಪ್ರಮುಖ ಆರೋಪವನ್ನು ತನ್ನ ವಿರುದ್ಧ ಮಾಡಲಾಗಿದೆ. ಆದರೆ, ಇದಕ್ಕೆ ಸರ್ಕಾರದ ಆದೇಶ ಪ್ರಕಾರ ತುರ್ತು ಸಂದರ್ಭದಲ್ಲಿ ಅನುಮತಿ ನೀಡಲು ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಅದರಂತೆಯೇ ಅನುಮತಿಸಿದ್ದು, ಉಳಿದ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ ಎಂದು ಶಂಕರ್‌ ಪರ ವಕೀಲ ಡಿ ನಾಗರಾಜ್‌ ಅವರು ವಾದಿಸಿದ್ದರು. ಇದನ್ನು ನ್ಯಾಯಾಲಯ ಪುರಸ್ಕರಿಸಿದೆ.

Related Stories

No stories found.
Kannada Bar & Bench
kannada.barandbench.com