ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಸಂಬಂಧಿಸದ ವೈಯಕ್ತಿಕ ಫೋನ್ ಕರೆ ಅಥವಾ ಇತರೆ ಉದ್ದೇಶಗಳಿಗಾಗಿ ತಮ್ಮ ಮೊಬೈಲ್ ಫೋನ್‌ಗಳನ್ನು ಕಚೇರಿಯಲ್ಲಿ ಬಳಸುವುದನ್ನು ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ಸೋಮವಾರ ತೀವ್ರವಾಗಿ ಖಂಡಿಸಿದೆ [ಡಿಎಸ್ ರಾಧಿಕಾ ಮತ್ತು ಸರ್ಕಾರ ನಡುವಣ ಪ್ರಕರಣ].
ಕಚೇರಿ ವೇಳೆಯಲ್ಲಿ ಸಾರ್ವಜನಿಕ ಸೇವೆಯಲ್ಲಿರುವವರು ಮೊಬೈಲ್ ಫೋನ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ, ಆದರೆ ಅದನ್ನು ಎಂದಿಗೂ ಅನುಮತಿಸಬಾರದು ಮತ್ತು ಇದು ಗಂಭೀರ ದುಷ್ಕೃತ್ಯಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿ ಎಸ್ ಎಂ ಸುಬ್ರಮಣ್ಯಂ ವಿವರಿಸಿದರು.
ಅಂತಹ "ಎಲ್ಲಾ ಸಂದರ್ಭಗಳಲ್ಲಿ, ಕಚೇರಿಗೆ ಹಾಜರಾಗುವ ಮತ್ತು ಅಲ್ಲಿ ಕೆಲಸ ಮಾಡುವ ಇತರರಿಗೆ ತೊಂದರೆಯಾಗದಂತೆ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಬೇಕು ಅಥವಾ ವೈಬ್ರೇಶನ್ / ಸೈಲೆಂಟ್ ಮೋಡ್‌ನಲ್ಲಿ ಇಡಬೇಕು” ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ಅನೇಕ ಸಾರ್ವಜನಿಕ ಸೇವಕರು ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ಫೋನ್ ಮತ್ತು ಕ್ಯಾಮೆರಾಗಳನ್ನು ಬಳಸುತ್ತಾರೆ ಎಂಬ ಹೆಚ್ಚುವರಿ ಸರ್ಕಾರಿ ಪ್ಲೀಡರ್ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ತನ್ನ ತೀವ್ರ ಅಸಮ್ಮತಿ ವ್ಯಕ್ತಪಡಿಸಿತು.
ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ಫೋನ್, ಕ್ಯಾಮೆರಾ ಬಳಸುವ ಅಶಿಸ್ತು ಮುಂದುವರೆದರೆ ಸರ್ಕಾರಿ ಅಧಿಕಾರಿಗಳ ಸಂಬಳಕ್ಕೆಂದು ಭಾರಿ ತೆರಿಗೆ ಪಾವತಿಸುವ ಸಾರ್ವಜನಿಕರ ವಿರುದ್ಧ ಎಸಗುವ ಮಹಾಪಾಪವಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು.