ಕಾವೇರಿ ಕಾಲಿಂಗ್ ಯೋಜನೆಯನ್ನು ಸರ್ಕಾರಿ ಉದ್ದಿಮೆ ಎಂದು ಬಿಂಬಿಸಿ ಸಾರ್ವಜನಿಕರಿಂದ ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್ ಹಣವೇನಾದರೂ ಸಂಗ್ರಹಿಸಿದೆಯೇ ಎನ್ನುವ ಬಗ್ಗೆ ಪತ್ತೆ ಹಚ್ಚಲು ರಾಜ್ಯ ಸರ್ಕಾರ ತನಿಖೆ ನಡೆಸುವ ಇಚ್ಛೆ ಹೊಂದಿದೆಯೇ ಅಥವಾ ಇಲ್ಲವೇ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಇದೇ ವೇಳೆ, ಈ ಸಂಬಂಧ ತನಿಖೆಗೆ ಅಧಿಕಾರಿಯೊಬ್ಬರನ್ನು ನೇಮಿಸುವಂತೆಯೂ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತು.
ಕಾವೇರಿ ಕಾಲಿಂಗ್ ಇಶಾ ಫೌಂಡೇಶನ್/ಇಶಾ ಔಟ್‌ರೀಚ್ ಯೋಜನೆಯಾಗಿದ್ದು, ಅದು ಸರ್ಕಾರದ ಯೋಜನೆಯಲ್ಲ. ರಾಜ್ಯ ಸರ್ಕಾರ ಇದಕ್ಕೆ ಯಾವುದೇ ಅನುದಾನ ಅಥವಾ ಖಾಸಗಿ ಭೂಮಿಯನ್ನು ನೀಡಿಲ್ಲ ಎಂದು ಸರ್ಕಾರದ ಪರ ವಕೀಲರು ಹೇಳಿದೆ ಹಿನ್ನೆಲೆಯಲ್ಲಿ ನ್ಯಾಯಾಲಯ ಮೇಲಿನಂತೆ ಪ್ರಶ್ನಿಸಿದೆ.
“ಇದು ಸರ್ಕಾರಿ ಯೋಜನೆ ಎಂದು ಬಿಂಬಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿರುವ ಕುರಿತು ತಿಳಿದುಕೊಳ್ಳಲು ನೀವು ತನಿಖೆ ನಡೆಸುವ ಉದ್ದೇಶ ಹೊಂದಿದ್ದೀರಾ? ನಿಮಗೆ ತನಿಖೆ ನಡೆಸುವ ಇರಾದೆ ಇದೆಯೇ?” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಪ್ರಶ್ನಿಸಿತು.
ಕಾವೇರಿ ಕಾಲಿಂಗ್ ಸರ್ಕಾರದ ಯೋಜನೆಯಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಸರ್ಕಾರ ಹೇಳುತ್ತಲೇ ಪ್ರತಿಕ್ರಿಯಿಸಿದ ಪೀಠವು “ನೀವು ಅದನ್ನು ಸ್ಪಷ್ಟಪಡಿಸಿದ್ದೀರಿ… ಹಲವು ಆದೇಶಗಳನ್ನು ಹೊರಡಿಸಿದ ಬಳಿಕ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಅವರು (ಪ್ರತಿವಾದಿಗಳು) ತಡವಾಗಿ ಇದು ಸರ್ಕಾರದ ಯೋಜನೆಯಲ್ಲ ಎಂಬ ನಿಲುವನ್ನು ತೆಗೆದುಕೊಂಡಿದ್ದಾರೆ. ಈ ಸಂಬಂಧ ನೀವು ಹೇಳಿಕೆ ನೀಡಿದರೆ ಅರ್ಜಿಯನ್ನು ವಿಲೇವಾರಿ ಮಾಡಬಹುದು. ಇದು ಸರ್ಕಾರಿ ಯೋಜನೆ ಎಂದು ಹೇಳಿ ಎರಡನೇ ಅಥವಾ ಮೂರನೇ ಪ್ರತಿವಾದಿಗಳು ಯಾವುದಾದರೂ ಸಂದರ್ಭದಲ್ಲಿ ಹಣ ಸಂಗ್ರಹಿಸಿದ್ದಾರೆಯೇ ಎಂಬುದನ್ನು ತಿಳಿಯಲು ಅಧಿಕಾರಿಯೊಬ್ಬರನ್ನು ನೇಮಿಸಿ ತನಿಖೆ ನಡೆಸಿ” ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಸ್ಪಷ್ಟೀಕರಣ ಅಫಿಡವಿಟ್ ಅನ್ನು ದಾಖಲಿಸಿಕೊಳ್ಳುವಂತೆ ರಿಜಿಸ್ಟ್ರಿಗೆ ಸೂಚಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 24ಕ್ಕೆ ಮುಂದೂಡಿದೆ.