ನ್ಯಾಯಾಧೀಶರ ಕೊರತೆ ನೀಗಿಸಲು ಸರ್ಕಾರಗಳು ಕಾರ್ಯೋನ್ಮುಖವಾಗಬೇಕು: ನ್ಯಾ. ನಾಗಮೋಹನ್‌ ದಾಸ್‌

ದಿನ ಕಳೆದಂತೆ ಶಾಸಕಾಂಗದ ಮೇಲಿನ ನಂಬಿಕೆ ಕಳೆದು ಹೋಗುವಂತ ಪರಿಸ್ಥಿತಿ ಬಂದಿದೆ. ಆದರೆ, ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಜನ ಇನ್ನೂ ಉಳಿಸಿಕೊಂಡಿದ್ದಾರೆ ಎಂದ ನ್ಯಾ. ನಾಗಮೋಹನ್‌ ದಾಸ್‌.
Justice (Rtrd.) H N Nagamohan Das
Justice (Rtrd.) H N Nagamohan DasYoutube

“ರಾಜ್ಯದ ನ್ಯಾಯಾಲಯಗಳಲ್ಲಿರುವ ನ್ಯಾಯಾಧೀಶರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯೋನ್ಮುಖವಾಗಬೇಕು” ಎಂದು ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಾಮೂರ್ತಿ ಎನ್ ನಾಗಮೋಹನ್ ದಾಸ್ ಹೇಳಿದರು.

ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ರಾಜ್ಯ ವಕೀಲರ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ 10ನೇ ವಾರ್ಷಿಕ  ರಾಜ್ಯ ವಕೀಲರ ಸಮ್ಮೇಳನದ ಕೊನೆಯ ದಿನವಾದ ಭಾನುವಾರ “ಯುವ ವಕೀಲರಿಗೆ ಸವಾಲು ಹಾಗೂ ಸಮಸ್ಯೆಗಳು” ಕುರಿತು ವಿಶೇಷ ಉಪನ್ಯಾಸ ನೀಡಿದರು.

“ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಂತಹ ಪಾಳೇಗಾರಿಕೆ ಪದ್ಧತಿ ತೊರೆದು ಪ್ರಜಾಪ್ರಭುತ್ವ ಸ್ಥಾಪನೆಯಾಗಿದೆ. ಜನರ ಸರ್ಕಾರ ಸ್ಥಾಪನೆಯಾಗಿದೆ. ಕಾರ್ಯಾಂಗ, ನ್ಯಾಯಾಂಗ. ಶಾಸಕಾಂಗ ಇವುಗಳು ಸ್ಥಾಪನೆಯಾಗಿವೆ. ಆದರೆ, ದಿನ ಕಳೆದಂತೆ ಶಾಸಕಾಂಗದ ಮೇಲಿನ ನಂಬಿಕೆ ಕಳೆದು ಹೋಗುವಂತ ಪರಿಸ್ಥಿತಿ ಬಂದಿದೆ. ಆದರೆ, ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಜನ ಇನ್ನೂ ಉಳಿಸಿಕೊಂಡಿದ್ದಾರೆ’’ ಎಂದರು.

“ದೇಶದಲ್ಲಿ 25 ಸಾವಿರ ನ್ಯಾಯಾಧೀಶರು ಇದ್ದಾರೆ. 10 ಲಕ್ಷ ವಕೀಲರು ಇದ್ದಾರೆ. 5 ಲಕ್ಷ ನ್ಯಾಯಾಂಗ ಸಿಬ್ಬಂದಿ ಇದ್ದಾರೆ. ಆದರೂ ನ್ಯಾಯಾಂಗದಲ್ಲಿ ಬಹಳಷ್ಟು ಪ್ರಕರಣಗಳು ಇತ್ಯರ್ಥವಾಗಬೇಕಿದೆ. ಬಹಳಷ್ಟು ಕಾನೂನುಗಳು ಸಂವಿಧಾನ ಹಾಗೂ ಸರ್ಕಾರದ ವಿರುದ್ಧ ಕಂಡು ಬಂದರೆ, ಅವುಗಳನ್ನು ರದ್ದು ಮಾಡುವಂಥ, ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವ ಹಾಗೂ ದಂಡ ವಿಧಿಸುವ, ಗಲ್ಲಿಗೇರಿಸುವ ಎಲ್ಲ ಅಧಿಕಾರ ನ್ಯಾಯಾಂಗಕ್ಕೆ ಇದೆ” ಎಂದರು.

Also Read
ಸಂವಿಧಾನದ ಆಶಯ, ಪ್ರಜಾಪ್ರಭುತ್ವದ ಬಲವರ್ಧನೆಗೆ ವಕೀಲರು ಶ್ರಮಿಸಬೇಕು: ಸಚಿವ ಮಹದೇವಪ್ಪ

“ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡುವಂತ ಅಧಿಕಾರ ನ್ಯಾಯಾಂಗಕ್ಕೆ ಇದೆ. ನ್ಯಾಯಾಧೀಶರು, ನ್ಯಾಯಾಂಗ ಸಿಬ್ಬಂದಿ ನ್ಯಾಯಾಂಗದಲ್ಲಿ ಬಹಳ ಪ್ರಮುಖವಾದ ಕಾರ್ಯವನ್ನು ವಹಿಸುತ್ತಾರೆ. ಅದರಲ್ಲಿ ಇತ್ತೀಚೆಗೆ ಬಹಳಷ್ಟು ವ್ಯಾಜ್ಯಗಳು ಇತ್ಯರ್ಥ ಆಗದೆ ಇವೆ. ಇದಕ್ಕೆ ಮೂಲ ಕಾರಣ ನ್ಯಾಯಾಧೀಶರ ಕೊರತೆ ಇದೆ. ಸರ್ಕಾರ ಆ ಕೊರತೆಯುನ್ನು ನೀಗಿಸಬೇಕು” ಎಂದರು.

ನಿವೃತ್ತ ನ್ಯಾಯಮೂರ್ತಿ ಹಾಗೂ ಉಪ ಲೋಕಾಯುಕ್ತ ಎನ್ ಫಣೀಂದ್ರ ಅವರು ಸಾರ್ವಜನಿಕ ಆಡಳಿತದಲ್ಲಿ ವಕೀಲರ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.

Kannada Bar & Bench
kannada.barandbench.com