“ಇತರರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರಗಳ ಕುರಿತ ಸುಪ್ರೀಂ ಕೋರ್ಟ್ ಮೌನ ವಿಮರ್ಶಾತೀತವಲ್ಲ” ಎಂದು ಪುನರುಚ್ಚರಿಸಿರುವ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅವರು ಸುಪ್ರೀಂ ಕೋರ್ಟ್ ವಿಮರ್ಶಿಸಿ ಮಾಡಿದ್ದ ಟ್ವೀಟ್‌ಗಳಿಗೆ ಕ್ಷಮೆ ಕೋರಲು ನಿರಾಕರಿಸಿದ್ದಾರೆ.
ಸುಪ್ರೀಂ ಕೋರ್ಟ್ ಟೀಕಿಸಿ ಕಮ್ರಾ ಟ್ವೀಟ್ ಮಾಡಿದ್ದನ್ನು ಉಲ್ಲೇಖಿಸಿ ಸುಮಾರು ಹತ್ತು ಮಂದಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ಅನುಮತಿ ಕೋರಿದ್ದರು. ಈ ಪೈಕಿ ಎಂಟು ಮನವಿಗಳಿಗೆ ಅನುಮತಿಸಿರುವ ಅಟಾರ್ನಿ ನಡೆಯನ್ನು ಉಲ್ಲೇಖಿಸಿ ಕಮ್ರಾ ತಮ್ಮ ಹೇಳಿಕೆಯನ್ನು ಟ್ವೀಟ್ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಅಟಾರ್ನಿ ಜನರಲ್ ಅವರಿಗೆ ಸಂಬೋಧಿಸಿ ಬರೆದಿರುವ ಪತ್ರದಲ್ಲಿ ಕುನಾಲ್ ಕಮ್ರಾ ಅವರು ಹೀಗೆ ಹೇಳಿದ್ದಾರೆ.
“ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಹೇಳಿಕೆಯನ್ನು ಸ್ವಲ್ಪ ತಿರುಚಿ ಹೇಳುವುದಾದರೆ “ನನಗೆ ನೀಡಬೇಕೆಂದಿರುವ ಸಮಯವನ್ನು ಪ್ರಮುಖ ವಿಷಯಗಳಿಗೆ ನೀಡಿದರೆ ದೇವಲೋಕವೇನು ಕೆಳಗೆ ಬೀಳುವುದೇ” ಎಂದು ಕಮ್ರಾ ಪ್ರಶ್ನಿಸಿದ್ದಾರೆ.
ತನ್ನ ಟ್ವೀಟ್‌ಗಳನ್ನು ಇನ್ನೂ ನ್ಯಾಯಾಲಯವು ನಿಂದನೆ ಎಂದು ಪರಿಗಣಿಸಿಲ್ಲವಾದ್ದರಿಂದ ಅವುಗಳನ್ನು ನ್ಯಾಯಾಂಗ ನಿಂದನೆ ಎಂದು ಸಾರುವುದಕ್ಕೂ ಮುನ್ನ ನ್ಯಾಯಮೂರ್ತಿಗಳೂ “ಕಿರು ನಗೆ ಬೀರುತ್ತಾರೆ” ಎಂಬ ಭರವಸೆ ಹೊಂದಿರುವುದಾಗಿ ಹೇಳಿದ್ದಾರೆ.
ಅರ್ನಾಬ್ ಪ್ರಕರಣವನ್ನು ಪರೋಕ್ಷವಾಗಿ ಉಲ್ಲೇಖಿಸಿರುವ ಕಮ್ರಾ, ಅತಿಮುಖ್ಯ ಸಮಯದಲ್ಲಿನ ಧ್ವನಿ ವರ್ಧಕದ (ಪ್ರೈಮ್ ಟೈಮ್ ಲೌಡ್‌ಸ್ಪೀಕರ್-ಅರ್ನಾಬ್ ಗೋಸ್ವಾಮಿ) ಪರ ಪಕ್ಷಪಾತದ ಆದೇಶ ನೀಡಿರುವ ಸುಪ್ರೀಂ ಕೋರ್ಟ್ ನಿರ್ಣಯದ ಕುರಿತು ಟ್ವೀಟ್ ಮೂಲಕ ತಾವು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಹೇಳಿದ್ದಾರೆ.
ಕಾನೂನು ವಿದ್ಯಾರ್ಥಿಯಾದ ಸ್ಕಂದ ಬಾಜಪೇಯಿ, ವಕೀಲರಾದ ಶ್ರೀರಂಗ ಕಾಂತೇಶ್ವರಕರ್ ಮತ್ತು ಅಭಿಷೇಕ್ ರಾಸ್ಕರ್ ಸೇರಿದಂತೆ ಎಂಟು ಮಂದಿಗೆ ವೇಣುಗೋಪಾಲ್ ಅವರು ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿಸಿದ್ದಾರೆ.