ಗಾಣಿಗ ಪೀಠಕ್ಕೆ ಅನುದಾನ, ಭೂಮಿ ಮಂಜೂರು ಪ್ರಕರಣ: ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

2011ರ ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಿದ್ದ ಅಂದಿನ ಸಿಎಂ ಯಡಿಯೂರಪ್ಪ ಅವರು ಗಾಣಿಗ ಸಮುದಾಯದ ಗುರುಪೀಠಕ್ಕೆ ಐದು ಕೋಟಿ ರೂಪಾಯಿ ಮೀಸಲಿಟ್ಟಿದ್ದರು. ಆನಂತರ ದಾಸನಪುರ ಬಳಿ 10 ಎಕರೆ ಗೋಮಾಳದ ಜಮೀನನ್ನು ಮಂಜೂರು ಮಾಡಲಾಗಿತ್ತು.
Karnataka High Court
Karnataka High Court

ಗಾಣಿಗ ಸಮುದಾಯದ ಗುರುಪೀಠಕ್ಕೆ ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರ್ಕಾರದಿಂದ ಐದು ಕೋಟಿ ರೂಪಾಯಿ ಅನುದಾನ ನೀಡಿದ ಮತ್ತು ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್‌ಗೆ ಹತ್ತು ಎಕರೆ ಜಮೀನು ಮಂಜೂರು ಮಾಡಿದ ಕ್ರಮ ಪ್ರಶ್ನಿಸಿರುವ ಅರ್ಜಿಗೆ ಮೂರು ವಾರದೊಳಗೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.

ಬೆಂಗಳೂರಿನ ಎನ್ ಹನುಮೇಗೌಡ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸ್ವಯಂಪ್ರೇರಿತ ಪಿಐಎಲ್ ಆಗಿ ಪರಿವರ್ತಿಸಿಕೊಂಡಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು, ಅಲ್ಲದೇ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ 7ಕ್ಕೆ ಮುಂದೂಡಿತು.

Also Read
ಗಾಣಿಗ ಪೀಠಕ್ಕೆ ₹5 ಕೋಟಿ ಅನುದಾನ, 8 ಎಕರೆ ಜಮೀನು ಮಂಜೂರು ಪ್ರಶ್ನಿಸಿ ಪಿಐಎಲ್: ವಕೀಲೆ ವಿದ್ಯುಲ್ಲತಾ ಅಮಿಕಸ್‌ ಕ್ಯೂರಿ

2011ರ ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಿದ್ದ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಾಣಿಗ ಸಮುದಾಯದ ಗುರುಪೀಠಕ್ಕೆ ಐದು ಕೋಟಿ ರೂಪಾಯಿ ಮೀಸಲಿಟ್ಟಿದ್ದರು. ನಂತರ ವಿಧಾನ ಪರಿಷತ್ ಮಾಜಿ ಸದಸ್ಯ ಬಿ ಜೆ ಪುಟ್ಟಸ್ವಾಮಿ, ವಿಶ್ವ ಗಾಣಿಗರ ಸಮುದಾಯ ಟ್ರಸ್ಟ್ ನೋಂದಣಿ ಮಾಡಿಸಿ, ಅದಕ್ಕೆ ಅಧ್ಯಕ್ಷರಾಗಿದ್ದರು. ಟ್ರಸ್ಟ್ ಶಿಕ್ಷಣ ಸಂಸ್ಥೆ ಹೊಂದಿರದಿದ್ದರೂ ಶೈಕ್ಷಣಿಕ ಉದ್ದೇಶಕ್ಕೆಂದು ದಾಸನಪುರ ಬಳಿ 10 ಎಕರೆ ಗೋಮಾಳ ಜಮೀನನ್ನು ಟ್ರಸ್ಟ್‌ಗೆ ರಾಜ್ಯ ಸರ್ಕಾರದಿಂದ ಮಂಜೂರು ಮಾಡಲಾಗಿತ್ತು. ಈ ಕುರಿತು ಸಿಐಡಿ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಹನುಮೇಗೌಡ 2019ರಲ್ಲಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ಅರ್ಜಿದಾರರು ಪುಟ್ಟಸ್ವಾಮಿ ಅವರ ವಿರುದ್ಧ ಹಲವು ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್, ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಪರಿವರ್ತಿಸಿಕೊಂಡು ವಿಚಾರಣೆ ನಡೆಸುತ್ತಿದೆ.

Related Stories

No stories found.
Kannada Bar & Bench
kannada.barandbench.com