JDS MLA G K Venkatashiva Reddy & Karnataka HC
JDS MLA G K Venkatashiva Reddy & Karnataka HC

ಅನುದಾನ ತಾರತಮ್ಯ: ಪಿಐಎಲ್‌ ಸಲ್ಲಿಸಲು ಜೆಡಿಎಸ್‌ ಶಾಸಕ ವೆಂಕಟಶಿವಾರೆಡ್ಡಿಗೆ ಹೈಕೋರ್ಟ್‌ ಸೂಚನೆ

ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಅರ್ಜಿಯನ್ನು ವಿಲೇವಾರಿ ಮಾಡಿತು.
Published on

ರಾಜ್ಯ ಸರ್ಕಾರದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ದೂರಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿಸುವಂತೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಕೆ ವೆಂಕಟಶಿವಾರೆಡ್ಡಿ ಅವರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಸೂಚಿಸಿದೆ.

ಈ ವಿಚಾರವಾಗಿ ವೆಂಕಟಶಿವಾರೆಡ್ಡಿ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಶಾಸಕರ ಪರ ವಕೀಲರು “ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ 2019ರಲ್ಲಿ ಅನುದಾನ ಹಂಚಿಕೆ ಮಾಡಲಾಗಿದ್ದರೂ ಅದು ಈವರೆಗೆ ಬಿಡುಗಡೆ ಆಗಿಲ್ಲ” ಎಂದರು.

ಅದಕ್ಕೆ ಪೀಠವು “ಯಾರು ಹಣ ಕೊಡುತ್ತಿಲ್ಲ” ಎಂದು ಪೀಠ ಪ್ರಶ್ನಿಸಿತು. “ಸಿಎಂ ಕೊಡುತ್ತಿಲ್ಲ” ಎಂದು ವಕೀಲರು ಉತ್ತರಿಸಿದರು. “ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಅನುದಾನ ಕೊಟ್ಟರೆ, ಜೆಡಿಎಸ್ ಶಾಸಕರಿಗೆ 25 ಕೋಟಿ ರೂಪಾಯಿ ಮಾತ್ರ ಮಂಜೂರು ಮಾಡಲಾಗಿದೆ. ಅದೂ ಸಹ ಬಿಡುಗಡೆ ಆಗಿಲ್ಲ” ಎಂದರು.

Also Read
ಅನುದಾನ ತಾರತಮ್ಯ: ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಜೆಡಿಎಸ್‌ ಶಾಸಕ ವೆಂಕಟಶಿವಾರೆಡ್ಡಿ

“ನಿಮಗೆ (ಶಾಸಕರಿಗೆ) ಹಣ ಯಾಕೆ ಬೇಕು” ಎಂದು ಪೀಠ ಪ್ರಶ್ನಿಸಿತು. “ಅರ್ಜಿದಾರರು ಶ್ರೀನಿವಾಸಪುರ ಕ್ಷೇತ್ರದ ಜನಪ್ರತಿನಿಧಿ, ಜನರ ಕೆಲಸಗಳಿಗೆ ಹಣ ಬೇಕು” ಎಂದು ವಕೀಲರು ತಿಳಿಸಿದರು.

“ನಿಮ್ಮ ಮನವಿ ವೈಯುಕ್ತಿಕ ಆಗುವುದಿಲ್ಲ. ಒಬ್ಬ ಜನಪ್ರತಿನಿಧಿಯಾಗಿ ಅನುದಾನ ಕೇಳುತ್ತಿದ್ದೀರಿ. ಹಾಗಿದ್ದಾಗ ಹಣ ನಿಮ್ಮ ಜೇಬಿಗೆ ಬರಲ್ಲ; ಆದೇನಿದ್ದರೂ ಜನರಿಗೆ ಹೋಗಬೇಕು. ಅನುದಾನ ಕೊಡಿ ಎಂದು ಹೇಳಬಹುದೇ ಹೊರತು, ನ್ಯಾಯಾಲಯ ಆದೇಶ ಮಾಡಲು ಬರುವುದಿಲ್ಲ. ಅಷ್ಟಕ್ಕೂ ಜನರಿಗಾಗಿ ಅನುದಾನ ಕೇಳುತ್ತಿದ್ದರೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿಕೊಳ್ಳಿ” ಎಂದು ಸೂಚಿಸಿದ ಪೀಠವು ರಿಟ್ ಅರ್ಜಿಯನ್ನು ವಿಲೇವಾರಿ ಮಾಡಿತು.

Kannada Bar & Bench
kannada.barandbench.com