ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿ ಸರ್ಕಾರ ರಚಿಸುತ್ತಿದ್ದಂತೆಯೇ ನೂತನ ಅಡ್ವೊಕೇಟ್ ಜನರಲ್ ಯಾರಾಗಲಿದ್ದಾರೆ ಎಂಬ ವಿಚಾರ ಸಾಕಷ್ಟು ಕುತೂಹಲ ಹುಟ್ಟಿಸಿತ್ತು. ಹಲವಾರು ಹೆಸರುಗಳು ಈ ವೇಳೆ ಕೇಳಿ ಬಂದವು. ಅಂತಿಮವಾಗಿ ಆ ಸ್ಥಾನವನ್ನು ಅಲಂಕರಿಸಿದ್ದು ಹಿರಿಯ ವಕೀಲರಾದ ಕೆ ಶಶಿಕಿರಣ್ ಶೆಟ್ಟಿ.
ಹಿರಿಯ ವಕೀಲ ಕೆ ಶಶಿಕಿರಣ್ ಶೆಟ್ಟಿ ಅವರು 23 ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ. ಶಶಿಕಿರಣ್ ಶೆಟ್ಟಿ ಅವರು 2014ರಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ಪಡೆದರು. ಶೆಟ್ಟಿ ಮತ್ತು ಹೆಗ್ಡೆ ಲಾ ಫರ್ಮ್‌ನ ಮುಖ್ಯಸ್ಥರೂ ಆಗಿರುವ ಅವರು ವೈವಿಧ್ಯಮಯ ಪ್ರಕರಣಗಳನ್ನು ನಿರ್ವಹಿಸಿದ್ದು, ಮುಸ್ಲಿಂ ಮೀಸಲಾತಿ ಪ್ರಕರಣ, ಶಾಸಕರ ಅನರ್ಹತೆ ಪ್ರಕರಣಗಳಂತಹ ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದ ಅನುಭವಿಯಾಗಿದ್ದಾರೆ. ಅವರು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರ ಪುತ್ರರೂ ಹೌದು.
ಬೆಂಗಳೂರಿನಲ್ಲಿರುವ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಯಿಂದ 1998ರಲ್ಲಿ ಬಿಎ, ಎಲ್‌ಎಲ್‌ಬಿ ಪದವಿ ಪಡೆದ ಶಶಿಕಿರಣ್ ಶೆಟ್ಟಿ ಅವರು ಸಾಂವಿಧಾನಿಕ, ಆಡಳಿತಾತ್ಮಕ ಪ್ರಕರಣಗಳು ಸೇರಿದಂತೆ, ಮಧ್ಯಸ್ಥಿಕೆ, ಆಸ್ತಿ ಹಕ್ಕು, ಗಣಿಗಾರಿಕೆ, ಪರಿಸರ, ಬ್ಯಾಂಕಿಂಗ್, ಕೌಟುಂಬಿಕ ಕಾನೂನುಗಳಿಗೆ ಸಂಬಂಧಿಸಿದ ವೈವಿಧ್ಯಮಯ ಪ್ರಕರಣಗಳಲ್ಲಿ ಕರ್ನಾಟಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದಾರೆ. ಕಾರ್ಪೊರೇಟ್ ಕಕ್ಷಿದಾರರು, ಬ್ಯಾಂಕ್‌ಗಳು, ಶಿಕ್ಷಣ ಸಂಸ್ಥೆಗಳು, ಕಟ್ಟಡ ಸಹಕಾರ ಸಂಘಗಳು, ಪ್ರಾಪರ್ಟಿ ಡೆವಲಪರ್‌ಗಳು, ಪುನರ್‌ನಿರ್ಮಾಣ ಕಂಪೆನಿಗಳು ಇವರಿಂದ ಕಾನೂನು ಸೇವೆ ಪಡೆದಿವೆ. ರಾಜ್ಯದ ಅಡ್ವೊಕೇಟ್ ಜನರಲ್ ಆಗಿ ನೂತನ ಜವಾಬ್ದಾರಿ ಹೊತ್ತಿರುವ ಶಶಿಕಿರಣ್ ಶೆಟ್ಟಿ ಅವರು "ಬಾರ್ ಅಂಡ್ ಬೆಂಚ್"ಗೆ ನೀಡಿರುವ ಸಂದರ್ಶನ ಇಲ್ಲಿದೆ:
ನೂತನ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದೀರಿ, ನಿಮ್ಮ ಆದ್ಯತೆಗಳು ಏನು?
ವಿವಿಧ ಮಾದರಿಯ ಪ್ರಕರಣಗಳಲ್ಲಿ ರಾಜ್ಯ ಸರ್ಕಾರವು ಅತಿದೊಡ್ಡ ದಾವೆದಾರನಾಗಿದೆ. ಆರಂಭಿಕ ಹಂತದಲ್ಲಿ ಪ್ರಕರಣಗಳ ಆಳ-ಅಗಲ ಅರ್ಥ ಮಾಡಿಕೊಂಡು, ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವುದು ನನ್ನ ಆದ್ಯತೆಯಾಗಿದೆ. ಸಮರ್ಥವಾಗಿ ಪ್ರಕರಣಗಳ ನಿರ್ವಹಣೆ ಮಾಡುವುದರಿಂದ ದೀರ್ಘಾವಧಿಯಲ್ಲಿ ವ್ಯವಸ್ಥೆ ಸುಧಾರಿಸಲು ಅನುಕೂಲವಾಗಲಿದೆ. ನ್ಯಾಯದಾನದಲ್ಲಿ ರಾಜೀ ಮಾಡಿಕೊಳ್ಳದೇ ದಾವೆಗಳ ಸಂಖ್ಯೆ ಕಡಿತ ಮಾಡಿ, ಪ್ರಕರಣಗಳನ್ನು ತುರ್ತಾಗಿ ಇತ್ಯರ್ಥಪಡಿಸುವ ಉದ್ದೇಶ ಹೊಂದಿದ್ದೇನೆ. ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತ್ವರಿತವಾಗಿ ನ್ಯಾಯದಾನ ಮಾಡುವುದು ಮಾತ್ರವೇ ಅಲ್ಲದೆ ಎಲ್ಲರಿಗೂ ವ್ಯವಸ್ಥೆಯು ಎಲ್ಲರಿಗೂ ಕೈಗೆಟುಕುವಂತೆ ಮಾಡುವೆಡೆಗೆ ನನ್ನ ಗಮನವಿದೆ.
ಉತ್ತಮ ರೀತಿಯಲ್ಲಿ ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ನಮ್ಮ ವ್ಯವಸ್ಥೆಯಲ್ಲಿ ದಕ್ಷತೆ ಮತ್ತು ಕ್ರಮಬದ್ಧತೆಯನ್ನು ಹೆಚ್ಚಿಸುವುದು ನನ್ನ ಗುರಿಗಳಲ್ಲಿ ಒಂದಾಗಿದೆ. ಅಡ್ವೊಕೇಟ್ ಜನರಲ್ ಕಚೇರಿಯು ತನ್ನ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸಲು ಪ್ರಸಕ್ತ ವರ್ಷ ಅನೇಕ ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಯೋಜನೆಗಳನ್ನು ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ನಮ್ಮ ಕಚೇರಿಯ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿಯಲ್ಲಿನ ಎಲ್ಲಾ ಕಾನೂನು ಅಧಿಕಾರಿಗಳು ಮತ್ತು ಸಚಿವಾಲಯದ ಸಿಬ್ಬಂದಿಗೆ ಲ್ಯಾಪ್‌ಟಾಪ್/ಕಂಪ್ಯೂಟರ್‌ಗಳನ್ನು ಲಭ್ಯವಾಗಿಸುವುದು, ಲ್ಯಾನ್ ನೆಟ್‌ವರ್ಕ್ ಉನ್ನತೀಕರಣಗೊಳಿಸುವ ಕೆಲಸ ಚಾಲ್ತಿಯಲ್ಲಿದೆ.
ವಕೀಲ ಸಮುದಾಯಕ್ಕೆ ನೀವು ನೀಡುವ ಭರವಸೆಗಳು ಏನು?
ಪ್ರಪ್ರಥಮವಾಗಿ ಹೇಳುವುದೇನೆಂದರೆ ಯಾವುದೇ ಸಲಹೆಗಳನ್ನು ಆಲಿಸಲು ನಾನು ಸದಾ ಲಭ್ಯವಿರುತ್ತೇನೆ. ವ್ಯವಸ್ಥೆಯನ್ನು ಸುಧಾರಿಸುವ ಸಲುವಾಗಿ ಮತ್ತು ವಕೀಲ ಸಮುದಾಯದ ಒಳಿತಿಗಾಗಿ ನನ್ನ ಸ್ಥಾನವನ್ನು ಅತ್ಯುತ್ತಮ ರೀತಿಯಲ್ಲಿ ಬಳಕೆ ಮಾಡಲು ನನಗೆ ಸಂತೋಷವಿದೆ. ಎಲ್ಲ ಅಹವಾಲುಗಳನ್ನು ಆಲಿಸಲಾಗುವುದು. ಒಗ್ಗೂಡಿ ಮುನ್ನಡೆಯುವಲ್ಲಿ ನಮ್ಮ ಪ್ರಯತ್ನವಿರಲಿದೆ.
ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು ನನ್ನ ಪ್ರಮುಖ ಆದ್ಯತೆಗಳಲ್ಲಿ ಒಂದು. ವಕೀಲರು ತಮ್ಮ ಬಹುತೇಕ ಸಮಯವನ್ನು ನ್ಯಾಯಾಲಯಗಳಲ್ಲಿ ಕಳೆಯುತ್ತಾರೆ. ಇಲ್ಲಿ ಅವರಿಗೆ ಸೂಕ್ತ ಸ್ಥಳಾವಕಾಶ ಮತ್ತು ಸೌಲಭ್ಯ ಕಲ್ಪಿಸುವ ಮೂಲಕ ಅವರು ಸರಾಗವಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸುವುದು ಅತ್ಯಗತ್ಯ. ಊಟ, ಉಪಾಹಾರ, ಕರ್ತವ್ಯ ನಿರ್ವಹಣೆ ಸ್ಥಳ ಮತ್ತು ಶೌಚಾಲಯಗಳ ವಿಚಾರದಲ್ಲಿ ಹಾಲಿ ಇರುವ ಸೌಲಭ್ಯವನ್ನು ಪರಿಶೀಲಿಸಬೇಕಿದೆ. ಇದರ ಜೊತೆಗೆ ಹೈಕೋರ್ಟ್ ಗ್ರಂಥಾಲಯವನ್ನು ಆಧುನಿಕಗೊಳಿಸಿ, ಡಿಜಿಟೀಕರಣ ಮಾಡುವ ತುರ್ತು ಇದೆ. ಆ ಮೂಲಕ ನಮ್ಮ ವಕೀಲರಿಗೆ ಇದರ ಬಳಕೆಯ ಲಭ್ಯತೆಯನ್ನು ಸುಗಮಗೊಳಿಸಬೇಕಿದೆ.
ಕಾನೂನು ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳು ಸದ್ಯದ ಅಗತ್ಯವಾಗಿವೆ. ಇದಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ಪ್ರಾಕ್ಟೀಸ್‌ನ ಗುಣಮಟ್ಟ ಹೆಚ್ಚುವುದಲ್ಲದೆ, ಯುವ ಮತ್ತು ಉದಯೋನ್ಮುಖ ವಕೀಲರ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಕಿರಿಯ ವಕೀಲರಿಗೆ ಯಾವೆಲ್ಲಾ ರೀತಿಯಲ್ಲಿ ಬೆಂಬಲ ಮತ್ತು ಉತ್ತೇಜನ ನೀಡಬಹುದು ಎಂದೂ ಸಹ ನಾನು ಯೋಚಿಸುತ್ತಿದ್ದೇನೆ. ಯುವ ವಕೀಲರಿಗೆ ಆರಂಭಿಕ ಹಂತದಲ್ಲಿ ಸಾಕಷ್ಟು ಸವಾಲುಗಳು ಇರಲಿದ್ದು, ಈ ಸಂದರ್ಭದಲ್ಲಿ ಅವರಿಗೆ ಹೇಗೆ ಬೆಂಬಲ ನೀಡಬಹುದು ಎನ್ನುವ ಬಗ್ಗೆ ನಾನು ದಾರಿಗಳನ್ನು ಅನ್ವೇಷಿಸುತ್ತಿದ್ದೇನೆ. ನಮ್ಮ ಕಚೇರಿಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡಲು ವೈವಿಧ್ಯಮಯ ಕಾನೂನು ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟೂ ಹೆಚ್ಚಿನ ಆದ್ಯತೆ ನೀಡಲು ಉತ್ಸುಕನಾಗಿದ್ದೇನೆ. ಆ ಮೂಲಕ ದಾವೆ ಕ್ಷೇತ್ರದ ಹೊಳಹುಗಳ ಬಗ್ಗೆ ಅರಿಯಲು, ಆರಂಭಿಕ ಹಂತದಲ್ಲಿಯೇ ದಾವೆ ಕ್ಷೇತ್ರದಲ್ಲಿ ಅದರಲ್ಲಿಯೂ ವಿಶೇವಾಗಿ ಸಾರ್ವಜನಿಕ ಕೆಲಸಗಳ ಕುರಿತಾಗಿ ಆಸಕ್ತಿ ಬೆಳಸಿಕೊಳ್ಳಲು ಸಾಧ್ಯವಾದಷ್ಟು ಅವಕಾಶಗಳನ್ನು ಕಲ್ಪಿಸಿಕೊಡುವ ಉದ್ದೇಶವನ್ನು ಹೊಂದಿದ್ದೇನೆ.
ಹೊಸ ಸರ್ಕಾರ ಬಂದಿದೆ. ಯಾವ ರೀತಿಯ ಸವಾಲುಗಳು ಎದುರಾಗಬಹುದು ಎಂದುಕೊಂಡಿದ್ದೀರಿ? ಅದಕ್ಕೆ ನಿಮ್ಮ ಸಿದ್ಧತೆ ಹೇಗಿದೆ?
ಪ್ರತಿಯೊಂದು ಸರ್ಕಾರವು ರಾಜ್ಯದೆಡೆಗೆ, ಭವಿಷ್ಯದೆಡೆಗೆ ಭಿನ್ನ ನೋಟ ಮತ್ತು ಕಲ್ಪನೆಗಳನ್ನು ಹೊಂದಿರುತ್ತವೆ. ತಮ್ಮ ಮೇಲೆ ವಿಶ್ವಾಸವಿರಿಸಿ ಆಯ್ಕೆ ಮಾಡಿದ ಜನರ ಅಣತಿಯಂತೆ ಅವರು ನಡೆದುಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ವಿವಿಧ ಕಾನೂನಿನ ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಸಲಹೆ ನೀಡುವುದು ಮತ್ತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವುದು ನನ್ನ ಕೆಲಸ. ಪ್ರಸ್ತುತ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಮುಖ ಪ್ರಕರಣಗಳ ಬಗ್ಗೆ ಅವಲೋಕಿಸುತ್ತಿದ್ದು, ಆ ಮೂಲಕ ಉತ್ತಮ ಸಿದ್ಧತೆಯೊಂದಿಗೆ ಉತ್ತಮ ಹೆಜ್ಜೆ ಇರಿಸಲು ನಿರ್ಧರಿಸಿದ್ದೇನೆ.
ಬಜರಂಗ ದಳ ಸೇರಿದಂತೆ ತೀವ್ರಗಾಮಿ ಸಂಘಟನೆಗಳನ್ನು ನಿಷೇಧಿಸಲಾಗುವುದು, ನೈತಿಕ ಪೊಲೀಸ್ ಗಿರಿಗೆ ಅಂತ್ಯ ಹಾಡಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ. ಕಾನೂನು-ಸುವ್ಯವಸ್ಥೆಯ ದೃಷ್ಟಿಯಿಂದ ಸರ್ಕಾರಕ್ಕೆ ನಿಮ್ಮಂದ ಯಾವ ರೀತಿ ಸಲಹೆ ಇರಲಿದೆ?
(ಕಾಂಗ್ರೆಸ್ ಪಕ್ಷದ) ಪ್ರಣಾಳಿಕೆಯನ್ನು ಸರಿಯಾದ ದೃಷ್ಟಿಕೋನದಿಂದ ನೋಡಬೇಕಿದೆ. ಸಮಾಜದ ಎಲ್ಲಾ ವರ್ಗಗಳ ಜನರು ಶಾಂತಿಯುತವಾಗಿ ಸಹಬಾಳ್ವೆ ನಡೆಸುವ ಕಳಕಳಿಯನ್ನು ಅದರಲ್ಲಿ ಹೊಂದಲಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡರೆ ಅವರನ್ನು ನಿಯಂತ್ರಣದಲ್ಲಿ ಇಡಬೇಕಾಗುತ್ತದೆ. ನಮ್ಮ ಸಂವಿಧಾನ ನಿರೂಪಕರು ಈ ದೇಶದ ಸ್ವರೂಪ ಲಕ್ಷಣಗಳನ್ನು, ಅಸಂಖ್ಯಾತ ಹಿತಾಸಕ್ತಿಗಳನ್ನು ಪರಿಗಣಿಸಿ ಸಂವಿಧಾನದ ಕರಡನ್ನು ರೂಪಿಸಿದ್ದಾರೆ. ಸಂವಿಧಾನದಲ್ಲಿ ಈ ವೈವಿಧ್ಯತೆ ಪ್ರತಿಬಿಂಬಿತವಾಗಿದೆ. ಎಲ್ಲಾ ಸಮುದಾಯ ಮತ್ತು ವರ್ಗಗಳ ನಡುವೆ ಶಾಂತಿ, ಸಹಬಾಳ್ವೆ ಸಂವಿಧಾನದ ಅಂತಿಮ ಗುರಿಯಾಗಿದೆ.
ಕಾಂಗ್ರೆಸ್ ಮುಖಂಡರು ಬಿಜೆಪಿ ಸರ್ಕಾರ ಕೈಗೊಂಡಿರುವ ನೀತಿ-ನಿರ್ಧಾರಗಳು ಹಾಗೂ ವಿವಾದಾತ್ಮಕ ಕಾನೂನುಗಳನ್ನು ಮರುಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ಅಡ್ವೊಕೇಟ್ ಜನರಲ್ ಆಗಿ ನಿಮ್ಮ ಸಲಹೆ ಏನಿರಲಿದೆ?
ಪಕ್ಷದ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯ ಆಧಾರದಲ್ಲಿ ಪ್ರಸಕ್ತ ಸರ್ಕಾರವನ್ನು ಜನತೆಯು, ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಚುನಾಯಿಸಿದ್ದಾರೆ. ತಮ್ಮ ನೀತಿ ಮತ್ತು ಪ್ರಣಾಳಿಕೆಗೆ ಅನುಗುಣವಾಗಿ ಪ್ರಸ್ತುತ ಇರುವ ನಿಯಮಾವಳಿಗಳನ್ನು ಪರಿಶೀಲಿಸುವುದು ಅಥವಾ ಬಿಡುವುದು ಸರ್ಕಾರದ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ. ಹೀಗೆ ತೆಗೆದುಕೊಳ್ಳಲಾಗುವ ನಿರ್ಧಾರಗಳು ಕಾನೂನಿನ ಚೌಕಟ್ಟಿನಲ್ಲಿರುವಂತೆ ನೋಡಿಕೊಳ್ಳಲು ಸಲಹೆ, ಮಾರ್ಗದರ್ಶನವನ್ನು ನೀಡುವುದು, ಸಾಂವಿಧಾನಿಕ ಮೌಲ್ಯಗಳ ರಕ್ಷಕನಾಗಿ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ.
ಹಿಜಾಬ್, ಒಳ ಮೀಸಲಾತಿಯಂತಹ ವಿಚಾರದಲ್ಲಿ ಹಿಂದಿನ ಸರ್ಕಾರ ಹೊಂದಿದ್ದ ನಿಲುವಿಗೆ ವ್ಯತಿರಿಕ್ತವಾದ ನಿಲುವನ್ನು ಕಾಂಗ್ರೆಸ್ ಪಕ್ಷ ಹೊಂದಿತ್ತು. ಆದರೆ, ಈ ವಿಚಾರಗಳು ನ್ಯಾಯಾಲಯದಲ್ಲಿ ಸಾಕಷ್ಟು ದೂರ ಸಾಗಿರುವುದರಿಂದ ಇವುಗಳನ್ನು ಹೇಗೆ ಪರಿಹರಿಸುವಿರಿ? ಶಾಸನಾತ್ಮಕ ಹಾದಿ ತುಳಿಯಲು ಸಲಹೆ ನೀಡುತ್ತೀರಾ?
ನೀವು ಹೇಳಿರುವಂತೆ ಅವು ಮಹತ್ವದ ಪ್ರಕರಣಗಳಾಗಿದ್ದು, ಪ್ರಸ್ತುತ ನ್ಯಾಯಾಲಯಗಳ ಪರ್ಯಾಲೋಚನೆಗೆ ಒಳಪಟ್ಟಿವೆ. ಹೀಗಾಗಿ, ಪ್ರಕರಣಗಳು ನ್ಯಾಯಾಲಯದ ವ್ಯಾಪ್ತಿಯಲ್ಲಿರುವ ಈ ಸಂದರ್ಭದಲ್ಲಿ ಇವುಗಳ ಕುರಿತು ನಾನು ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯಲ್ಲ. ಪ್ರತಿಯೊಂದು ಪ್ರಕರಣವೂ ಅತ್ಯಂತ ಸೂಕ್ಷ್ಮವಾಗಿದ್ದು, ಸೂಕ್ತ ಕಾಲಘಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು.
ಸರ್ಕಾರಿ ಅಭಿಯೋಜಕರು, ಎಎಜಿ, ಎಜಿಎ, ಗೌರ್ಮೆಂಟ್ ಪ್ಲೀಡರ್‌ಗಳ ನೇಮಕ ವಿಚಾರದಲ್ಲಿ ಕೆಪಿಸಿಸಿ ಕಾನೂನು ಕೋಶದ ಅಭಿಪ್ರಾಯ ಪಡೆಯಬೇಕು ಎಂಬ ನಿರ್ಣಯ ಅಂಗೀಕರಿಸಲಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ನೇಮಕಾತಿಗಳಿಗೆ ಸಂಬಂಧಿಸಿದಂತೆ ಅರ್ಹತೆಗೆ ಒಳಪಟ್ಟು ಕೆಪಿಸಿಸಿ ಕಾನೂನು ಕೋಶದ ಸಲಹೆ ಪಡೆಯುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ಅರ್ಹತೆ ಮತ್ತು ಅನುಭವ ಆಧರಿಸಿ ಅಂತಿಮವಾಗಿ ವಕೀಲರನ್ನು ಆಯ್ಕೆ ಮಾಡಲಾಗುತ್ತದೆ. ಕೆಪಿಸಿಸಿ ಕಾನೂನು ಕೋಶ ಸೇರಿದಂತೆ ಎಲ್ಲೆಡೆಯಿಂದಲೂ ಉತ್ತಮ ವಕೀಲರ ಕುರಿತಾದ ಸಲಹೆಗಳನ್ನು ಸ್ವಾಗತಿಸುತ್ತೇವೆ. ರಾಜ್ಯವನ್ನು ಸಮರ್ಥವಾಗಿ ಪ್ರತಿನಿಧಿಸಲು ಉತ್ತಮ ತಂಡ ರಚಿಸುವ ಉದ್ದೇಶ ಹೊಂದಿದ್ದೇವೆ.
ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರವು ಇಂದಿರಾ ಕ್ಯಾಂಟೀನ್ ಯೋಜನೆ ಆರಂಭಿಸಿದಾಗ ಹಾಲಿ ಸಂಸದರೊಬ್ಬರು ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾದಿಂದ ಅನುಮತಿ ಪಡೆಯಲಾಗಿಲ್ಲ ಎಂದು ಹೈಕೋರ್ಟ್‌ಗೆ ಪಿಐಎಲ್ ಹಾಕಿದ್ದರು. ಅಂತೆಯೇ ಈಗ ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳಿಗೆ ಮಾರ್ಗಸೂಚಿ ಜಾರಿ ಮಾಡಿದಾಗ ನ್ಯಾಯಾಲಯದಲ್ಲಿ ಅವುಗಳನ್ನು ಪ್ರಶ್ನಿಸುವ ಸಾಧ್ಯತೆ ಇರುತ್ತದೆ. ಇದನ್ನು ಹೇಗೆ ಎದುರಿಸುತ್ತೀರಿ?
ಸಮಾಜದಲ್ಲಿ ತಾತ್ಸಾರ ಮತ್ತು ಅವಗಣನೆಗೆ ಒಳಗಾಗಿರುವ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ಸಮುದಾಯಗಳನ್ನು ಕೇಂದ್ರೀಕರಿಸಿ ಸರ್ಕಾರವು ಯೋಜನೆಗಳನ್ನು ರೂಪಿಸಿದೆ. ಅತ್ಯಂತ ಕೆಳಸ್ತರದ ಬಡವರನ್ನು ಮೇಲೆತ್ತುವ ಸಾಮರ್ಥ್ಯವನ್ನು ಸರ್ಕಾರ ಪ್ರಸ್ತಾಪಿಸಿರುವ ಗ್ಯಾರಂಟಿ ಯೋಜನೆಗಳು ಹೊಂದಿವೆ. ನನ್ನ ದೃಷ್ಟಿಯಲ್ಲಿ ಇದೊಂದು ಮಹತ್ತರವಾದ ಪ್ರಯತ್ನವಾಗಿದ್ದು, ಇದಕ್ಕೆ ಸಾಧ್ಯವಾದಷ್ಟು ಹೆಚ್ಚು ಬೆಂಬಲ ಬೇಕಿದೆ. ಇದೇ ವೇಳೆ, ಈ ಗ್ಯಾರಂಟಿ ಯೋಜನೆಗಳನ್ನು ನೋಡುವ ನೋಟಕ್ರಮದಲ್ಲಿಯೂ ಬದಲಾವಣೆಯಾಗಬೇಕಿದೆ. ಇವು ಉಚಿತ ಕೊಡುಗೆಯಾಗಲಿ ಅಥವಾ ಉಪಕಾರವಾಗಲಿ ಅಲ್ಲ. ಬದಲಿಗೆ, ಸಂವಿಧಾನ ಖಾತರಿಪಡಿಸಿರುವ ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಬರುವ ಮಾನವ ಹಕ್ಕುಗಳಾಗಿವೆ, ರಾಜ್ಯ ನಿರ್ದೇಶಕ ತತ್ವಗಳ ನೀತಿಯ ಧ್ಯೇಯೋದ್ದೇಶಕ್ಕೆ ಅನುಗುಣವಾಗಿವೆ. ಈ ನಿಟ್ಟಿನಲ್ಲಿ ರೂಪಿಸಲಾಗುವ ನೀತಿಗಳು ಕಾನೂನಿಗೆ ವಿರುದ್ಧವಲ್ಲ ಎಂಬುದನ್ನು ಖಾತರಿಪಡಿಸಲು ನಾನು ಕೆಲಸ ಮಾಡುತ್ತೇನೆ.
ಈ ಯೋಜನೆಗಳು ವ್ಯಕ್ತಿಯ ಜೀವನ ಗುಣಮಟ್ಟ ಸುಧಾರಿಸುವುದಲ್ಲದೇ ಫಲಾನುಭವಿಗಳ ದೈನಂದಿನ ಘನತೆಯನ್ನು ಹೆಚ್ಚಿಸಲಿವೆ. ಇವುಗಳು ಸ್ವಾವಲಂಬನೆಗೆ ಅವಕಾಶ ಕಲ್ಪಿಸಿ, ದೀರ್ಘಾವಧಿಯಲ್ಲಿ ಆರ್ಥಿಕ ಬೆಳವಣಿಗೆಗೆ ಅನುಕೂಲಕಾರಿಯಾಗಲಿವೆ. ಈ ಗ್ಯಾರಂಟಿ ಯೋಜನೆಗಳಿಂದಾಗಿ ಉಳಿತಾಯವಾಗುವ ಹಣವನ್ನು ಫಲಾನುಭವಿಗಳು ತಮ್ಮ ಮಕ್ಕಳ ಉತ್ತಮ ಶಿಕ್ಷಣ, ಆರೋಗ್ಯ ಮತ್ತಿತರ ಖರ್ಚಿಗೆ ವಿನಿಯೋಗಿಸಬಹುದಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ವಿನಾಯಿತಿ, ಅನುದಾನ, ಪ್ರೋತ್ಸಾಹಧನ ನೀಡುವ ವಿಚಾರದಲ್ಲಿ ಬಹುತೇಕರಿಗೆ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ. ಆದರೆ, ಅಧಿಕಾರ ಕೇಂದ್ರಗಳನ್ನು ಪ್ರವೇಶಿಸಲು ಸಾಧ್ಯವಾಗದವರ ಪರಿಸ್ಥಿತಿ ಸುಧಾರಿಸಲೆಂದು ರೂಪಿಸಲ್ಪಡುವ ಯೋಜನೆಗಳು ಅವರಲ್ಲಿ ಅಸಮಾಧಾನ ಹುಟ್ಟಿಸುತ್ತವೆ.