ಮಾನನಷ್ಟ ಮೊಕದ್ದಮೆ: ರಾಹುಲ್‌ಗೆ ಮಧ್ಯಂತರ ರಕ್ಷಣೆ ನಿರಾಕರಿಸಿದ ಗುಜರಾತ್ ಹೈಕೋರ್ಟ್; ಜೂನ್‌ನಲ್ಲಿ ತೀರ್ಪು

ರಾಹುಲ್ ಪರವಾಗಿ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ ನ್ಯಾ. ಹೇಮಂತ್‌ ಪ್ರಚ್ಚಕ್ ಅವರಿದ್ದ ಏಕಸದಸ್ಯ ಪೀಠ ಬೇಸಿಗೆ ರಜೆ ಮುಗಿದ ಬಳಿಕ ಅಂತಿಮ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.
Rahul Gandhi and Gujarat High Court
Rahul Gandhi and Gujarat High Court

"ಎಲ್ಲಾ ಕಳ್ಳರಿಗೂ ಮೋದಿ ಉಪನಾಮವಿದೆ" ಎಂಬ ಹೇಳಿಕೆ ನೀಡಿದ್ದಕ್ಕಾಗಿ ತಮ್ಮ ವಿರುದ್ಧ ಹೂಡಿದ್ದ  ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ತನ್ನನ್ನು ದೋಷಿ ಎಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ನೀಡಿದ್ದ ತೀರ್ಪಿಗೆ ತಡೆ ನೀಡುವಂತೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೋರಿದ್ದ ಮನವಿಗೆ ಸಂಬಂಧಿಸಿದ ತೀರ್ಪನ್ನು ಗುಜರಾತ್‌ ಹೈಕೋರ್ಟ್‌ ಮಂಗಳವಾರ ಕಾಯ್ದಿರಿಸಿದೆ [ರಾಹುಲ್‌ ಗಾಂಧಿ ಮತ್ತು ಪೂರ್ಣೇಶ್‌ ಮೋದಿ ನಡುವಣ ಪ್ರಕರಣ].

ರಾಹುಲ್‌ ಪರವಾಗಿ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ ನ್ಯಾ. ಹೇಮಂತ್‌ ಪ್ರಚ್ಚಕ್‌ ಅವರಿದ್ದ ಏಕಸದಸ್ಯ ಪೀಠ ಬೇಸಿಗೆ ರಜೆ ಮುಗಿದ ಬಳಿಕ ಅಂತಿಮ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು. ಮೇ 5 ಹೈಕೋರ್ಟ್‌ನ ಅಂತಿಮ ಕೆಲಸದ ದಿನವಾಗಿದ್ದು ಜೂನ್‌ 5 ರಂದು ಮತ್ತೆ ಅದು ತೆರೆಯಲಿದೆ.  “ರಜೆ ವೇಳೆ ತೀರ್ಪು ಬರೆದು ಬಳಿಕ ಅದನ್ನು ಪ್ರಕಟಿಸುತ್ತೇನೆ” ಎಂದು ನ್ಯಾ. ಪ್ರಚ್ಚಕ್‌ ಹೇಳಿದರು.

ರಾಹುಲ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಮಧ್ಯಂತರ ಆದೇಶ ನೀಡುವಂತೆ ನ್ಯಾಯಮೂರ್ತಿಗಳಿಗೆ ಮಾಡಿದ ಮನವಿ ತಿರಸ್ಕೃತವಾಯಿತು.

Also Read
ಕ್ರಿಮಿನಲ್‌ ಮಾನಹಾನಿ: ತಮ್ಮನ್ನು ದೋಷಿ ಎಂದಿರುವ ತೀರ್ಪಿಗೆ ತಡೆ ಕೋರಿ ಗುಜರಾತ್‌ ಹೈಕೋರ್ಟ್‌ ಮೆಟ್ಟಿಲೇರಿದ ರಾಹುಲ್‌

ದಯವಿಟ್ಟು ಇಂದು ಕೆಲ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಿಂಘ್ವಿ ಅವರು ನ್ಯಾಯಾಲಯವನ್ನು ಕೋರಿದರು. ಆದರೆ, ನ್ಯಾಯಮೂರ್ತಿಗಳು ತಾವು ಇದಾಗಲೇ ಸ್ಪಷ್ಟಪಡಿಸಿದ್ದೇನೆ. ಆದೇಶವನ್ನು ಬರೆಯಲು ರಜೆಯ ಸಮಯ ಬಳಸುವುದಾಗಿ ತಿಳಿಸಿದರು.

ಪ್ರಕರಣದ ಮೂಲ ದಾಖಲೆ ಮತ್ತು ನಡಾವಳಿಗಳನ್ನು ತನಗೆ ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶಿಸಿದೆ. ದಾವೆ ಹೂಡಿದ್ದ ಬಿಜೆಪಿ ನಾಯಕ ಪೂರ್ಣೇಶ್‌ ಮೋದಿ ಅವರ ಪರವಾಗಿ ಹಿರಿಯ ನ್ಯಾಯವಾದಿ ನಿರುಪಮ್‌ ನಾನಾವತಿ ವಾದ ಮಂಡಿಸಿದರು.

Kannada Bar & Bench
kannada.barandbench.com