ಅಲ್ಪಸಂಖ್ಯಾತರ ಶಾಲೆಗಳ ನೇಮಕಾತಿ ಸರ್ಕಾರದ ನಿಯಂತ್ರಣಕ್ಕೆ: ಕಾಯಿದೆ ಎತ್ತಿಹಿಡಿದ ಗುಜರಾತ್ ಹೈಕೋರ್ಟ್

ಗುಜರಾತ್ ಪ್ರೌಢ ಮತ್ತು ಉನ್ನತ ಪ್ರೌಢ ಶಿಕ್ಷಣ ಕಾಯಿದೆಯ ಸೆಕ್ಷನ್ 40 ಎ ಸಿಂಧುತ್ವ ಪ್ರಶ್ನಿಸಿ ಕೆಲವು ಅನುದಾನಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದವು.
Gujarat High Court
Gujarat High Court
Published on

ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಪ್ರಾಂಶುಪಾಲರು ಮತ್ತು ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ನಿಯಮಾವಳಿ ರೂಪಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಿ ಗುಜರಾತ್‌ನ ಪ್ರೌಢ ಮತ್ತು ಉನ್ನತ ಪ್ರೌಢ ಶಿಕ್ಷಣ ಕಾಯಿದೆ- 2021ಕ್ಕೆ ಮಾಡಲಾದ ತಿದ್ದುಪಡಿ ಪ್ರಶ್ನಿಸಿದ್ದ ಅರ್ಜಿಗಳನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ಮೌಂಟ್ ಕಾರ್ಮೆಲ್ ಹೈಸ್ಕೂಲ್ ಮತ್ತು ಗುಜರಾತ್‌ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ರಾಜ್ಯ ಸರ್ಕಾರದ ಕ್ರಮವು ಸಂವಿಧಾನದ 30ನೇ ವಿಧಿಯಡಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ಸಂಸ್ಥೆಗಳನ್ನು ನಿರ್ವಹಿಸುವ ಹಕ್ಕುಗಳನ್ನು ಮೊಟಕು ಅಥವಾ ಪ್ರತಿಬಂಧಿಸುತ್ತದೆಯೇ ಎಂಬ ಕುರಿತು ನ್ಯಾಯಮೂರ್ತಿ ಸುನೀತಾ ಅಗರ್‌ವಾಲ್‌ ಮತ್ತು ನ್ಯಾಯಮೂರ್ತಿ ಪ್ರಣವ್ ತ್ರಿವೇದಿ ಅವರಿದ್ದ ವಿಭಾಗೀಯ ಪೀಠ ಪರಿಗಣಿಸಿತು.  

Also Read
ಅಲ್ಪಸಂಖ್ಯಾತರಲ್ಲದವರ ಆಡಳಿತದ ಕಾರಣಕ್ಕೆ ಅಲಿಗಢ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನ ಕೊನೆಯಾಗದು: ಸುಪ್ರೀಂ

2021ರಲ್ಲಿ ಮಾಡಲಾದ ತಿದ್ದುಪಡಿಯು ಗುಜರಾತ್ ಪ್ರೌಢ ಮತ್ತು ಉನ್ನತ ಪ್ರೌಢ ಶಿಕ್ಷಣ ಮಂಡಳಿಗೆ ನೋಂದಾಯಿತ ಅಲ್ಪಸಂಖ್ಯಾತ ಸಂಸ್ಥೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹತೆ, ಆಯ್ಕೆಯ ವಿಧಾನ ಮತ್ತು ನೇಮಕಾತಿಯ ಷರತ್ತು, ಬಡ್ತಿ ಮತ್ತು ಉದ್ಯೋಗದಿಂದ ವಜಾಗೊಳಿಸುವ ನಿಯಮಾವಳಿ ರೂಪಿಸಲು ಅಧಿಕಾರ ನೀಡುತ್ತದೆ. ಅಲ್ಲದೇ, ಮುಖ್ಯೋಪಾಧ್ಯಾಯ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವಿರುದ್ಧದ ಶಿಸ್ತು ಕ್ರಮದ ಕುರಿತಾದ ನಿಯಮಗಳನ್ನು ರೂಪಿಸಲು ಸಹ ಅಧಿಕಾರ ನೀಡುತ್ತದೆ ಎನ್ನುವ ಅಂಶವನ್ನು ಪೀಠವು ಗಮನಿಸಿತು.

ಈ ಅಧಿಕಾರವು ಸಂವಿಧಾನದ 30 (1) ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ತಮ್ಮ ಸಂಸ್ಥೆಗಳನ್ನು ನಿರ್ವಹಿಸುವ ಅಲ್ಪಸಂಖ್ಯಾತರ ಹಕ್ಕನ್ನು ಉಲ್ಲಂಘಿಸುವುದು ಎಂದು ಹೇಳಲಾಗದು ಎಂಬುದಾಗಿ ತೀರ್ಪು ನೀಡಿದೆ.

ಗುಜರಾತ್ ಪ್ರೌಢ ಮತ್ತು ಉನ್ನತ ಪ್ರೌಢ ಶಿಕ್ಷಣ ಕಾಯಿದೆಯ ಸೆಕ್ಷನ್ 40 ಎ ಸಿಂಧುತ್ವ  ಪ್ರಶ್ನಿಸಿ ಕೆಲವು ಅನುದಾನಿತ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದವು.

ಅರ್ಜಿಗಳು "ನೋಂದಾಯಿತ ಖಾಸಗಿ ಪ್ರೌಢ ಮತ್ತು ಉನ್ನತ ಪ್ರೌಢ ಅಲ್ಪಸಂಖ್ಯಾತ ಶಾಲೆಗಳಲ್ಲಿನ ಪ್ರಾಂಶುಪಾಲರ (ಆಯ್ಕೆಯ ವಿಧಾನ) ನಿಯಮಾವಳಿ- 2021" ಮತ್ತು "ನೋಂದಾಯಿತ ಖಾಸಗಿ ಪ್ರೌಢ ಮತ್ತು ಉನ್ನತ ಪ್ರೌಢ ಅಲ್ಪಸಂಖ್ಯಾತ ಶಾಲೆಗಳಲ್ಲಿನ ಶಿಕ್ಷಕರು (ಆಯ್ಕೆಯ ವಿಧಾನ) ನಿಯಮಗಳು, 2021"ನ್ನು ಕೂಡ ಪ್ರಶ್ನಿಸಿದ್ದವು.

ಪ್ರಕರಣದ ಕುರಿತು ವಿಸ್ತೃತವಾಗಿ ಎರಡೂ ಬದಿಯ ಪಕ್ಷಕಾರರ ವಾದಗಳನ್ನು ಆಲಿಸಿದ ನ್ಯಾಯಾಲಯವು, ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಆಧರಿಸಿ ನಂತರ, ತಮ್ಮ ಆಯ್ಕೆಯ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಲೆಂದು ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ನೀಡಿರುವ ಹಕ್ಕು ಆತ್ಯಂತಿಕವಲ್ಲ ಎಂದು ಹೇಳಿದೆ.

Also Read
ಅಲ್ಪಸಂಖ್ಯಾತ ಸಂಸ್ಥೆಗಳು ಆರ್‌ಟಿಇ ಕೋಟಾದಡಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಂತಿಲ್ಲ: ಬಾಂಬೆ ಹೈಕೋರ್ಟ್

ಹೀಗಾಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಗುಜರಾತ್ ಪ್ರೌಢ ಮತ್ತು ಉನ್ನತ ಪ್ರೌಢ ಕಾಯಿದೆಯ ಇನ್ನೂ ಮೂರು ನಿಬಂಧನೆಗಳನ್ನು ಅನ್ವಯಿಸಿದರೆ ಅದು  ಅಲ್ಪಸಂಖ್ಯಾತರ ಆಡಳಿತ ಮತ್ತು ಆಡಳಿತದ ಹಕ್ಕುಗಳ ಮೇಲಿನ ಅತಿಕ್ರಮಣವಾಗುವುದಿಲ್ಲ ಎಂದು ಅದು ಅಭಿಪ್ರಾಯಪಟ್ಟಿದೆ.

ಅಲ್ಪಸಂಖ್ಯಾತ ಸ್ಥಾನಮಾನ ಹೊಂದಿರುವ ಶಾಲೆಗಳ ಪ್ರಾಂಶುಪಾಲರು ಮತ್ತು ಶಿಕ್ಷಕರ ನೇಮಕಾತಿಗಾಗಿ ರಾಜ್ಯವು ರೂಪಿಸಿದ ನಿಯಮಗಳನ್ನು ನ್ಯಾಯಾಲಯ ಎತ್ತಿಹಿಡಿದಿದೆ.

Kannada Bar & Bench
kannada.barandbench.com