

ಸರ್ಕಾರಿ ಸ್ವಾಮ್ಯದ ವಸತಿ ಜಾಗವನ್ನು ಸ್ಥಳೀಯ ಅಧಿಕಾರಿಗಳು ತಮಗೆ ಗುತ್ತಿಗೆ ನೀಡುವುದನ್ನು ನಿರ್ಧರಿಸುವುದಕ್ಕೂ ಮೊದಲೇ ನಿವೇಶನದಲ್ಲಿ ಕಾಂಪೌಂಡ್ ನಿರ್ಮಿಸುವ ಮೂಲಕ ಕ್ರಿಕೆಟಿಗ ಮತ್ತು ಟಿಎಂಸಿ ಹಾಲಿ ಸಂಸದ ಯೂಸುಫ್ ಪಠಾಣ್ ಸಾರ್ವಜನಿಕ ಆಸ್ತಿ ಅತಿಕ್ರಮಿಸಿದ್ದಾರೆ ಎಂದು ಗುಜರಾತ್ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಯೂಸುಫ್ ಪಠಾಣ್ ಮತ್ತು ಗುಜರಾತ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಪಠಾಣ್ ಅವರಿಗೆ ನಿವೇಶನ ಮಂಜೂರು ಮಾಡುವ ಪ್ರಸ್ತಾವನೆಯನ್ನು ತಿರಸ್ಕರಿಸಿ ರಾಜ್ಯ ಸರ್ಕಾರ 2024ರಲ್ಲಿ ಕೈಗೊಂಡಿದ್ದ ನಿರ್ಧಾರದ ವಿರುದ್ಧ ಪಠಾಣ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ನ್ಯಾಯಮೂರ್ತಿ ಮೌನಾ ಎಂ ಭಟ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
99 ವರ್ಷಗಳ ಕಾಲ ಗುತ್ತಿಗೆಗೆ ಪಡೆಯಲು ಮಾರುಕಟ್ಟೆ ಮೌಲ್ಯದ ಬೆಲೆಯನ್ನು ಪಾವತಿಸಲು ಸಿದ್ಧರಿರುವುದಾಗಿ ಪಠಾಣ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳು ತಿರಸ್ಕರಿಸಿದರು.
ಖ್ಯಾತನಾಮರೂ ಸಂಸದರೂ ಆಗಿರುವುದರಿಂದ ಪಠಾಣ್ ಸಮಾಜಕ್ಕೆ ಹೆಚ್ಚು ಉತ್ತರದಾಯಿಯಾಗಿದ್ದು ಭೂ ಅತಿಕ್ರಮಣಕ್ಕೆ ಕಾರಣರೆಂದು ಕಂಡುಬಂದ ಹಿನ್ನೆಲೆಯಲ್ಲಿ ಅವರಿಗೆ ಯಾವುದೇ ದಯೆ ತೋರಲಾಗದು ಎಂದು ನ್ಯಾಯಾಲಯ ಹೇಳಿದೆ.
ಖ್ಯಾತನಾಮರು ಸಾಮಾಜಿಕವಾಗಿ ಮಾದರಿಗಳಾಗಿ ಸೇವೆ ಸಲ್ಲಿಸಬೇಕು ಮತ್ತು ಅವರ ಹೊಣೆಗಾರಿಕೆ ಸಾಮಾನ್ಯ ಜನರಿಗಿಂತ ಹೆಚ್ಚಾಗಿರುತ್ತದೆಯೇ ವಿನಾ ಕಡಿಮೆಯಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ ಎಂಬುದಾಗಿ ಅದು ನೆನೆಯಿತು.
ಜನಪ್ರಿಯ ವ್ಯಕ್ತಿಗಳು ಕಾನೂನು ಉಲ್ಲಂಘನೆ ಮಾಡಿದಾಗ ಅವರಿಗೆ ವಿಶೇಷ ಪರಿಹಾರ ನೀಡುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಅರ್ಜಿದಾರರು ತಾವು ಅತಿಕ್ರಮಿಸಿಕೊಂಡಿರುವ ಜಮೀನಿನ ಒಡೆತನ ಮುಂದುವರೆಸಲು ಸಾಧ್ಯವಿಲ್ಲ ಎಂದು ಆಗಸ್ಟ್ ಆಗಸ್ಟ್ 21ರಂದು ನೀಡಿದ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ.
2012 ರಲ್ಲಿ ಪಠಾಣ್ ವಡೋದರಾದಲ್ಲಿರುವ ತಮ್ಮ ಬಂಗಲೆಯ ಪಕ್ಕದಲ್ಲಿರುವ 978 ಚದರ ಮೀಟರ್ ವಿಸ್ತೀರ್ಣದ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಭದ್ರತೆ ಅಗತ್ಯವಿರುವುದರಿಂದ 99 ವರ್ಷಗಳ ಕಾಲ ಗುತ್ತಿಗೆಗೆ ನೀಡುವಂತೆ ಕೋರಿ ಅವರು ಪುರಸಭೆಗೆ ಅರ್ಜಿ ಸಲ್ಲಿಸಿದ್ದರು. ಯಾವುದೇ ಸಾರ್ವಜನಿಕ ಹರಾಜು ನಡೆಸದೆ ಪಠಾಣ್‌ಗೆ ಜಮೀನನ್ನು ಮಂಜೂರು ಮಾಡುವ ಪ್ರಸ್ತಾಪವಿದ್ದ ಕಾರಣ, ವಡೋದರಾ ಪಾಲಿಕೆ ಆಯುಕ್ತರು ಅಂತಿಮವಾಗಿ ಪ್ರಕರಣವನ್ನು ರಾಜ್ಯ ಸರ್ಕಾರಕ್ಕೆ ಉಲ್ಲೇಖಿಸಿದರು. ಪ್ರಕರಣ ರಾಜ್ಯ ಸರ್ಕಾರದ ಅಂಗಳದಲ್ಲಿರುವಾಗಲೇ ಅವರು ಆ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಿ ಅತಿಕ್ರಮಣ ನಡೆಸಿದ್ದರು ಎಂಬುದು ಅವರ ವಿರುದ್ಧ ಕೇಳಿ ಬಂದ ಆರೋಪವಾಗಿತ್ತು.
ಪಠಾಣ್ ಅವರು ಪ್ರಶ್ನಾರ್ಹ ಜಮೀನನ್ನು ದೀರ್ಘಕಾಲದಿಂದ ಹೊಂದಿದ್ದಾರೆ ಎಂಬುದಾಗಲಿ, ಅಥವಾ ಆಸ್ತಿಯನ್ನು ಗುತ್ತಿಗೆಗೆ ಪಡೆಯಲು ಮಾರುಕಟ್ಟೆ ಬೆಲೆಯನ್ನು ಪಾವತಿಸಲು ಅವರು ಸಿದ್ಧರಿದ್ದಾರೆ ಎಂಬುದಾಗಲಿ, ಆ ಜಮೀನಿನ ಮೇಲೆ ಅವರಿಗೆ ಯಾವುದೇ ಹಕ್ಕುಗಳನ್ನು ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
"ಅಕ್ರಮ ಶಾಶ್ವತಗೊಳಿಸಲು ಅನುಮತಿಸಲಾಗದು. ಆದ್ದರಿಂದ, ಅರ್ಜಿದಾರರು ಪ್ರಶ್ನಾರ್ಹ ಜಮೀನನ್ನು ಅತಿಕ್ರಮಣ ಮಾಡಿದ್ದಾರೆಂದು ಕಂಡುಬಂದಾಗ, ಪಾಲಿಕೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ನ್ಯಾಯಾಲಯ ಆದೇಶಿಸಿತು.