2002ರ ಕೋಮುಗಲಭೆಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಕ್ಲೀನ್ ಚಿಟ್ ನೀಡಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ವಾಸ್ತವಾಂಶಗಳಿಗೆ ವಿರುದ್ಧವಾದ ತೀರ್ಮಾನ ಕೈಗೊಂಡಿದ್ದಕ್ಕಾಗಿ ಅದನ್ನೇ ತನಿಖೆಗೆ ಒಳಪಡಿಸಬೇಕು ಎಂದು ಗಲಭೆಯಲ್ಲಿ ಹತ್ಯೆಗೀಡಾದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಗುರುವಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಜಾಫ್ರಿ ಅವರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು “ಎಸ್‌ಐಟಿ ತನಿಖೆ ʼನಡೆಸದೆʼ, ʼಸಹಕರಿಸಲುʼ ಮುಂದಾಯಿತು. ಅದು ಮಾಡಿದ ತನಿಖೆ ಸಂಚುಕೋರರನ್ನು ರಕ್ಷಿಸುವ ಲೋಪಗಳಿಂದ ಕೂಡಿದೆ” ಎಂದರು.
"ಎಸ್‌ಐಟಿಯು ತನಗೆ ತಿಳಿದಿರುವ ವಾಸ್ತವಾಂಶಗಳಿಗೆ ವಿರುದ್ಧವಾದ ನಿರ್ಣಯಕ್ಕೆ ಬಂದಿದೆ. ವಾಸ್ತವವಾಗಿ, ಎಸ್‌ಐಟಿಯನ್ನೇ ತನಿಖೆಗೊಳಪಡಿಸಬೇಕು. ಇದು ನಿಜ... ನನಗೆ ವ್ಯಕ್ತಿಗಳ ಬಗ್ಗೆ ಆತಂಕವಿಲ್ಲ. ಬದಲಿಗೆ (ತನಿಖೆ) ಪ್ರಕ್ರಿಯೆಯ ಬಗ್ಗೆ ಆತಂಕ ಇದೆ. ಎಸ್‌ಐಟಿ ತನ್ನ ಕೆಲಸವನ್ನು ಮಾಡಲಿಲ್ಲ ಎಂದು ನಾನು ಹೇಳುತ್ತಿದ್ದೇನೆ. ಇದು ರಕ್ಷಣೆಯ ಕಾರ್ಯವಾಗಿತ್ತು. ಇದು ಸಹಕಾರದ ಕೆಲಸದಲ್ಲಿ ತೊಡಗಿತ್ತು" ಎಂದು ಅವರು ವಾದಿಸಿದರು.
ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ಕರೆಯ ದತ್ತಾಂಶ ಮತ್ತು ಮುಸ್ಲಿಮರ ಮನೆಗಳನ್ನು ಗುರುತಿಸುವ ಗುಂಪುಗಳು ಸೇರಿದಂತೆ ಎಲೆಕ್ಟ್ರಾನಿಕ್ ದಾಖಲೆಗಳ ರೂಪದಲ್ಲಿ ಪುರಾವೆಗಳಿವೆ. ಇವೆಲ್ಲವೂ ಪಿತೂರಿಯ ಕಡೆ ಬೆರಳು ಮಾಡುತ್ತವೆ. ಆದರೆ ಎಸ್‌ಐಟಿ ಅದೆಲ್ಲವನ್ನೂ ನಿರ್ಲಕ್ಷಿಸಿದ್ದು ಹೆಚ್ಚಿನ ತನಿಖೆ ನಡೆಸಲಿಲ್ಲ ಮತ್ತು ಮ್ಯಾಜಿಸ್ಟ್ರೇಟ್ ಮತ್ತು ಹೈಕೋರ್ಟ್‌ಗಳು ಕೂಡ ಅದನ್ನು ಕಡೆಗಣಿಸಲು ನಿರ್ಧರಿಸಿದವು ಎಂದು ಸಿಬಲ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಸ್‌ಐಟಿ ನೀಡಿರುವ ಕ್ಲೀನ್ ಚಿಟ್ ಪ್ರಶ್ನಿಸಿ ಜಾಫ್ರಿ ಅವರು ಸಲ್ಲಿಸಿರುವ ಅರ್ಜಿಯ ಕುರಿತಂತೆ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠದ ಮುಂದೆ ವಾದ ಮಂಡಿಸಲಾಯಿತು. ಎಸ್‌ಐಟಿ ಸಲ್ಲಿಸಿದ ಪ್ರಕರಣದ ಮುಕ್ತಾಯದ ವರದಿಯನ್ನು ಮ್ಯಾಜಿಸ್ಟ್ರೇಟ್ ಮತ್ತು ಗುಜರಾತ್ ಹೈಕೋರ್ಟ್ ಅಂಗೀಕರಿಸಿರುವುದನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಎಸ್‌ಐಟಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ಹೇಗೆ ಒಳ್ಳೆಯ ಪುರಸ್ಕಾರ ನೀಡಲಾಗಿದೆ ಎಂಬುದರ ಕುರಿತು ಇಂದಿನ ವಿಚಾರಣೆ ವೇಳೆ ಸಿಬಲ್ ಗಮನಸೆಳೆದರು.
"ಸಹಕರಿಸಿದ ಎಲ್ಲರಿಗೂ ದೊಡ್ಡ ರೀತಿಯಲ್ಲಿ ಸಹಾಯ ಮಾಡಲಾಗಿದೆ. ಎಸ್‌ಐಟಿ ನೇತೃತ್ವ ವಹಿಸಿದ್ದ ಆರ್ ಕೆ ರಾಘವನ್ ಅವರನ್ನು ಸಿಪ್ರಸ್ ಹೈಕಮಿಷನರ್ ಮಾಡಲಾಗಿದೆ. ಅಹಮದಾಬಾದ್ ಪೊಲೀಸ್ ಕಮಿಷನರ್ ಪಿ ಸಿ ಪಾಂಡೆ ಅವರ ಕರೆ ಮಾಹಿತಿ ದಾಖಲೆಗಳನ್ನು (ಸಿಡಿಆರ್) ಪರಿಶೀಲಿಸಿದರೆ ಅವರು ಆರೋಪಿಗಳೊಂದಿಗೆ ಸಂಭಾಷಣೆ ನಡೆಸಿರುವುದು ಗೊತ್ತಾಗುತ್ತದೆ" ಎಂದು ಅವರು ಹೇಳಿದರು.
ಎಲ್ಲಾ ಪುರಾವೆಗಳು ಮೇಲು ನೋಟಕ್ಕೇ ಪಿತೂರಿಯನ್ನು ಸೂಚಿಸುತ್ತದೆ. ಪಿತೂರಿ ನಡೆದಿರಲಿಲ್ಲ ಎಂದು ಹೇಳಲು ಯಾವುದೇ ನ್ಯಾಯಾಧೀಶರಿಗೆ ಸಾಧ್ಯವಿಲ್ಲ. ಯಾರೆಲ್ಲಾ ಭಾಗಿಯಾಗಿದ್ದಾರೆ ಯಾಕೆ ಭಾಗಿಯಾಗಿದ್ದಾರೆ ಎಂಬ ಕುರಿತು ಹೆಚ್ಚಿನ ತನಿಖೆ ಅಗತ್ಯವಿದೆ. ಇದನ್ನು ಮಾಡಬೇಕಾದದ್ದು ಎಸ್‌ಐಟಿ ಜವಾಬ್ದಾರಿ. ಆದರೆ ಅರ್ಜಿದಾರರು ಆ ಕೆಲಸ ಮಾಡುವಂತಾಯಿತು ಎಂದರು.
ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ತಮ್ಮ ಇಚ್ಛೆಯಂತೆ ವರ್ತಿಸುತ್ತಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರಿದವರು ಹೇಳಿಕೆಗಳನ್ನು ನೀಡಿದ್ದಾರೆ. ಎಂದು ಸಿಬಲ್ ಹೇಳಿದರು. ಕುತೂಹಲಕರ ರೀತಿಯಲ್ಲಿ 1984 ರ ಸಿಖ್ ವಿರೋಧಿ ಗಲಭೆಯೊಂದಿಗೆ ಘಟನೆಗೆ ಅವರು ಇದನ್ನು ಹೋಲಿಸಿದರು.
"ನಾನು ಮಹಾರಾಣಿ ಭಾಗ್‌ನಲ್ಲಿ ವಾಸಿಸುತ್ತಿದ್ದೆ. ಅಲ್ಲಿ ಇಬ್ಬರು ಸಿಖ್ ವ್ಯಕ್ತಿಗಳ ಮನೆಗಳನ್ನು ಅದಾಗಲೇ ಗಲಭೆಕೋರರು ಗುರುತಿಸಿದ್ದರು. ಅವರು ಆ ಮನೆಗಳ ಮೇಲೆ ಮಾತ್ರ ದಾಳಿ ಮಾಡಿದರು. ಅದೇ ರೀತಿ 2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ಮುಸ್ಲಿಂ ಮನೆಗಳನ್ನು ಗುರುತಿಸಲಾಗಿತ್ತು" ಎಂದು ಸಿಬಲ್ ವಿವರಿಸಿದರು.