

ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಸಂಕೀರ್ಣದೊಳಗೆ ವಕೀಲರ ಮೇಲೆ ನಡೆದಿದೆ ಎನ್ನಲಾದ ದಾಳಿ ಗೂಂಡಾರಾಜ್ಯಕ್ಕೆ ಸಮ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.
ಆರೋಪದ ಗಂಭೀರತೆಯನ್ನು ಒತ್ತಿ ಹೇಳಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಾಲಯದ ಆವರಣದೊಳಗೆ ನಡೆದ ಹಿಂಸಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದರು.
"ಈ ರೀತಿಯ ಗೂಂಡಾರಾಜ್ಯ ಒಪ್ಪುವಂತಹದ್ದಲ್ಲ. ಇದರಿಂದ ಕಾನೂನಾತ್ಮಕ ಆಡಳಿತ ವಿಫಲವಾಗಿರುವುದು ಸ್ಪಷ್ಟವಾಗುತ್ತದೆ,” ಎಂದು ಸಿಜೆಐ ಸೂರ್ಯಕಾಂತ್ ಹೇಳಿದರು. ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ಎನ್ ವಿ ಅಂಜಾರಿಯಾ ಕೂಡ ತ್ರಿಸದಸ್ಯ ಪೀಠದ ಭಾಗವಾಗಿದ್ದರು.
ಫೆಬ್ರವರಿ 7ರಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಹರ್ಜಿತ್ ಸಿಂಗ್ ಪಾಲ್ ಅವರ ನ್ಯಾಯಾಲಯದಲ್ಲಿ, ಆರೋಪಿಯ ಪರವಾಗಿ ಹಾಜರಾಗಿದ್ದ ವಕೀಲರ ಮೇಲೆ ದೂರುದಾರರ ಪರ ವಕೀಲರು ಕೆಲ ಗೂಂಡಾಗಳೊಂದಿಗೆ ಸೇರಿ ದಾಳಿ ನಡೆಸಿದ್ದಾರೆ ಎಂದು ಸಂಬಂಧಪಟ್ಟ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ಅಳಲು ತೋಡಿಕೊಂಡರು. ದಾಳಿ ನಡೆದಾಗ ನ್ಯಾಯಾಧೀಶರು ಹಾಗೂ ನ್ಯಾಯಾಂಗದ ಉಳಿದ ಸದಸ್ಯರು ಇದ್ದರು ಎಂದು ಕೂಡ ಅವರು ತಿಳಿಸಿದರು.
ಘಟನೆಗೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರ ಗಮನಕ್ಕೆ ತರಲಾಗಿದೆಯೇ ಎಂದು ಸಿಜೆಐ ಅವರು ವಿಚಾರಿಸಿದಾಗ, ಅದಕ್ಕೆ ಸ್ಪಷ್ಟ ಉತ್ತರ ದೊರೆಯಲಿಲ್ಲ.
ಹೀಗಾಗಿ ನಡೆದಿದೆ ಎನ್ನಲಾದ ಘಟನೆಯ ಕುರಿತು ಆಡಳಿತಾತ್ಮಕ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆಯಲು ಸಂಬಂಧಪಟ್ಟ ವಕೀಲರಿಗೆ ನ್ಯಾಯಾಲಯ ನಿರ್ದೇಶನ ನೀಡಿತು. ನಿಗದಿತ ಪ್ರಕ್ರಿಯೆಯನ್ನು ಅನುಸರಿಸಿ ಮುಂದಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವಂತೆ ಅದು ವಕೀಲರಿಗೆ ಸೂಚಿಸಿತು.