ಕಾಶಿ ವಿಶ್ವನಾಥ - ಜ್ಞಾನವಾಪಿ ಭೂ ಹಕ್ಕು ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು 2021ರಿಂದ ವಿಚಾರಣೆ ನಡೆಸುತ್ತಿದ್ದ ಏಕಸದಸ್ಯ ಪೀಠದಿಂದ ಹಿಂಪಡೆದಿರುವುದಕ್ಕೆ ಕಾರಣ ವಿವರಿಸುವ ಆದೇಶವನ್ನು ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರು ಈಚೆಗೆ ಹೊರಡಿಸಿದ್ದಾರೆ [ಅಂಜುಮನ್ ಇಂತಾಜಾಮಿಯಾ ಮಸಾಜಿದ್ ವಾರಣಾಸಿ ಪ್ರಥಮ ಎಡಿಜೆ ವಾರಾಣಸಿ ಇನ್ನಿತರರ ನಡುವಣ ಪ್ರಕರಣ].
ನ್ಯಾಯಾಂಗ ಔಚಿತ್ಯ, ನ್ಯಾಯಾಂಗ ಶಿಸ್ತು, ಪ್ರಕರಣ ಪಟ್ಟಿ ಮಾಡುವಿಕೆಯಲ್ಲಿ ತೋರಬೇಕಾದ ಪಾರದರ್ಶಕತೆಯ ಹಿತದೃಷ್ಟಿಯಿಂದ ನ್ಯಾಯಾಲಯದ ಆಡಳಿತಾತ್ಮಕ ವಿಭಾಗದ ವತಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಗಸ್ಟ್ 28ರಂದು ನೀಡಿದ ಆದೇಶದಲ್ಲಿ, ಮುಖ್ಯ ನ್ಯಾಯಮೂರ್ತಿ (ಸಿಜೆ) ಪ್ರೀತಿಂಕರ್ ದಿವಾಕರ್ ಅವರು ತಿಳಿಸಿದ್ದಾರೆ.
ರೋಸ್ಟರ್ ಪ್ರಕಾರ ಪ್ರಕರಣದ ವಿಚಾರಣೆ ನಡೆಸಲು ಅಧಿಕಾರ ಹೊಂದಿಲ್ಲದಿದ್ದರೂ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಪ್ರಕಾಶ್ ಪಾಡಿಯಾ ಅವರು ಎರಡು ವರ್ಷಗಳಿಗೂ ಹೆಚ್ಚು ಕಾಲ ವಿಚಾರಣೆ ಮುಂದುವರೆಸಿದರು ಎಂದು ಸಿಜೆ ಹೇಳಿದ್ದಾರೆ.
ವ್ಯಾಜ್ಯಕ್ಕೆ ಸಂಬಂಧಿಸಿದ ಕಕ್ಷಿದಾರರೊಬ್ಬರು ಜುಲೈ 27ರಂದು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಇಂತಹ ಅನುಚಿತತೆಯನ್ನು ಗಮನಿಸಲಾಯಿತು ಎಂದು ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.
ಜ್ಞಾನವಾಪಿ ಮಸೀದಿ ಇರುವ ಅಂಗಳ ಹಿಂದೂಗಳಿಗೆ ಸೇರಿದ್ದೆಂದು ಸಲ್ಲಿಸಲಾಗಿರುವ ಮೊಕದ್ದಮೆಯ ನಿರ್ವಹಿಸಲು ಇರುವ ಅರ್ಹತೆಯನ್ನು ಈ ಪ್ರಕರಣ ಪ್ರಶ್ನಿಸಿದೆ. ಸೆಪ್ಟೆಂಬರ್ 12 ರಿಂದ (ಇಂದಿನಿಂದ) ಹೊಸದಾಗಿ ಪ್ರಕರಣದ ವಿಚಾರಣೆ ನಡೆಯಲಿದೆ.
ಈ ಬೆಳವಣಿಗೆಗಳ ಬಗ್ಗೆ ಜ್ಞಾನವಾಪಿಯ ಪೌಳಿಗೆ ಹೊಂದಿಕೊಂಡಂತೆ ಇರುವ ಅಂಜುಮನ್ ಇಂತಜಾಮಿಯಾ ಮಸೀದಿಯ ವ್ಯವಸ್ಥಾಪಕ ಮಂಡಳಿಯು ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಆಡಳಿತಾತ್ಮಕ ನಿರ್ಧಾರವು ಅಸಮಂಜಸವಾಗಿದ್ದು ಅದನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.
ಆದರೆ, ಇದನ್ನು ತಿರಸ್ಕರಿಸಿರುವ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವು ನ್ಯಾಯಿಕ ಶಿಷ್ಟಾಚಾರಕ್ಕೆ ಎರವಾಗಿದ್ದು ನಿರ್ಧಾರದಿಂದ ಹಿಂದೆ ಸರಿಯಾಗಲದು ಎಂದು ಸ್ಪಷ್ಟಪಡಿಸಿದ್ದಾರೆ.