ದೇಶದ್ರೋಹ ಪ್ರಕರಣ: ಮುಂದೂಡಲು ಕೇಂದ್ರ ಮಾಡಿದ ಮನವಿಗೆ ಸುಪ್ರೀಂ ನಕಾರ; ವಿಚಾರಣೆ ನಡೆಸಲಿರುವ ಸಾಂವಿಧಾನಿಕ ಪೀಠ

ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ ಒಳಗೊಂಡ ಭಾರತೀಯ ದಂಡ ಸಂಹಿತೆ ಬದಲಿಗೆ ಹೊಸ ಸಂಹಿತೆ (ಭಾರತೀಯ ನ್ಯಾಯ ಸಂಹಿತೆ) ಜಾರಿ ಪ್ರಸ್ತಾವನೆ ಇರುವುದರಿಂದ ವಿಚಾರಣೆ ಮುಂದೂಡಬಹುದು ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಸಲಹೆ ನೀಡಿದರು.
ದೇಶದ್ರೋಹ ಪ್ರಕರಣ: ಮುಂದೂಡಲು ಕೇಂದ್ರ ಮಾಡಿದ ಮನವಿಗೆ ಸುಪ್ರೀಂ ನಕಾರ; ವಿಚಾರಣೆ ನಡೆಸಲಿರುವ ಸಾಂವಿಧಾನಿಕ ಪೀಠ

ದೇಶದ್ರೋಹವನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) 124 ಎ ಸೆಕ್ಷನ್‌ನ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ಮುಂದೂಡುವಂತೆ ಕೇಂದ್ರ ಸರ್ಕಾರ ಮಾಡಿದ ಮನವಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಅಸಮ್ಮತಿ ಸೂಚಿಸಿದೆ [ಎಸ್‌ಜಿ ವೊಂಬತ್ಕೆರೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಭಾರತೀಯ ದಂಡ ಸಂಹಿತೆಯ ಬದಲಿಗೆ ಭಾರತೀಯ ನ್ಯಾಯ ಸಂಹಿತೆ ಎಂಬ ನೂತನ ಸಂಹಿತೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಮುಂದೂಡುವಂತೆ ಕೇಂದ್ರದ ಅತ್ಯುನ್ನತ ಕಾನೂನು ಅಧಿಕಾರಿಯಾದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಮನವಿ ಮಾಡಿದರು.

Also Read
ಬೀದರ್‌ನ ಶಾಹೀನ್‌ ಶಾಲೆಯ ನಾಲ್ವರು ಆಡಳಿತ ಮಂಡಳಿ ಸದಸ್ಯರ ವಿರುದ್ಧದ ದೇಶದ್ರೋಹ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಆದರೆ ಮನವಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್,  ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ತಿರಸ್ಕರಿಸಿತು.

“ಅನೇಕ ಕಾರಣಗಳಿಗಾಗಿ ಸೆಕ್ಷನ್ 124 ಎ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ಮುಂದೂಡುವಂತೆ ಅಟಾರ್ನಿ ಜನರಲ್ ಮತ್ತು ಸಾಲಿಸಿಟರ್ ಜನರಲ್ ಅವರು ಮಾಡಿರುವ ವಿನಂತಿಯನ್ನು ನಾವು ನಿರಾಕರಿಸುತ್ತೇವೆ. 124ಎ ಸೆಕ್ಷನ್ ಕಾನೂನು ಪುಸ್ತಕದಲ್ಲಿ ಮುಂದುವರೆಯಲಿದ್ದು ದಂಡ ಸಂಹಿತೆಯ ಹೊಸ ಕಾನೂನು ಭವಿಷ್ಯದಲ್ಲಷ್ಟೇ ಪರಿಣಾಮ ಬೀರಲಿದೆ. ಸೆಕ್ಷನ್ 124ಎ ಈಗಲೂ ಅಸ್ತಿತ್ವದಲ್ಲಿರುವುದರಿಂದ ವಿಚಾರಣೆಯ ಸಿಂಧುತ್ವ ಕೂಡ ಉಳಿಯುತ್ತದೆ. ಹೀಗಾಗಿ ಸವಾಲನ್ನು ಪರಿಶೀಲನೆ ನಡೆಸಬೇಕಿದೆ” ಎಂದು ನ್ಯಾಯಾಲಯ ನುಡಿಯಿತು.

Also Read
[ದೇಶದ್ರೋಹ] ಐಪಿಸಿ ಸೆಕ್ಷನ್ 124ಎ ಮರುಪರಿಶೀಲನೆ ಪ್ರಕ್ರಿಯೆ ಮುಂದುವರಿದ ಹಂತದಲ್ಲಿದೆ: ಸುಪ್ರೀಂಗೆ ಕೇಂದ್ರದ ಮಾಹಿತಿ

ಇದೇ ವೇಳೆ ನ್ಯಾಯಾಲಯ, ಐವರು ನ್ಯಾಯಮೂರ್ತಿಗಳು ಅಥವಾ ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠ ದೇಶದ್ರೋಹದ ಸಿಂಧುತ್ವ ಪ್ರಶ್ನಿಸಿರುವ ಪ್ರಕರಣದ ವಿಚಾರಣೆ ನಡೆಸುತ್ತದೆ ಎಂದು ಹೇಳಿದೆ.

ಕೇದಾರನಾ್ಥ್‌ ಸಿಂಗ್‌ ಮತ್ತು ಬಿಹಾರ ಸರ್ಕಾರ ನಡುವಣ ಪ್ರಕರಣದಲ್ಲಿ ಐವರು ನ್ಯಾಯಮೂರ್ತಿಗಳ ಪೀಠ ನೀಡಿದ್ದ ತೀರ್ಪಿನ ಸೂಕ್ತತೆ ಕುರಿತಂತೆ ಮುಂದೆ ರಚನೆಯಾಗಲಿರುವ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಲಿದೆ. 1962ರಲ್ಲಿ ನೀಡಲಾದ ಈ ತೀರ್ಪು 124 ಎ ಸೆಕ್ಷನ್ನ ಸಿಂಧುತ್ವವನ್ನು ಎತ್ತಿಹಿಡಿದಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಿಜೆಐ ಅವರ ಮುಂದಿರಿಸುವಂತೆ ಇದೇ ವೇಳೆ ರಿಜಿಸ್ಟ್ರಿಗೆ ಪೀಠವು ಸೂಚಿಸಿತು. ಪ್ರಕರಣ ಆಲಿಸಲು ಎಷ್ಟು ಸಂಖ್ಯೆಯ ನ್ಯಾಯಮೂರ್ತಿಗಳ ಪೀಠ ರಚಿಸಬೇಕು ಎನ್ನುವ ಆಡಳಿತಾತ್ಮಕ ಬದಿಯ ನಿರ್ಣಯವನ್ನು ಸಿಜೆಐ ಕೈಗೊಳ್ಳಲಿದ್ದಾರೆ.

Related Stories

No stories found.
Kannada Bar & Bench
kannada.barandbench.com