ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಸಲ್ಲಿಸುವ ಹಕ್ಕು ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿರುವ ಅರ್ಜಿಯು ಊರ್ಜಿತ ಎಂದಿದ್ದ ವಾರಾಣಸಿ ನ್ಯಾಯಾಲಯದ ಆದೇಶವನ್ನು ಅಲಾಹಾಬಾದ್ ಹೈಕೋರ್ಟ್ ಈಚೆಗೆ ಎತ್ತಿ ಹಿಡಿದಿದೆ [ಅಂಜುಮಾನ್ ಇಂತೆಜಾಮಿಯಾ ಮಸೀದಿ ಆಡಳಿತ ಸಮಿತಿ, ವಾರಾಣಸಿ ವರ್ಸಸ್ ರಾಖಿ ಸಿಂಗ್].
ಪೂಜಾ ಸ್ಥಳಗಳ (ವಿಶೇಷ ನಿಬಂಧನೆ) ಕಾಯಿದೆ ದಾವೆಯಿಂದ ಯಾವುದೇ ಸಮಸ್ಯೆಯಿಲ್ಲ ಎಂದು ನ್ಯಾಯಮೂರ್ತಿ ಜೆ ಜೆ ಮುನೀರ್ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ. ಸ್ವಾತಂತ್ರ್ಯ ಬಂದ ದಿನದಂದು ಇದ್ದ ರೀತಿಯಲ್ಲಿಯೇ ಎಲ್ಲಾ ಧಾರ್ಮಿಕ ಕಟ್ಟಡಗಳನ್ನು ಉಳಿಸಿಕೊಳ್ಳಲು ಮತ್ತು ಈ ಸಂಬಂಧ ಹೇಳುವ ವಿಚಾರಗಳನ್ನು ನ್ಯಾಯಾಲಯ ಪರಿಗಣಿಸದಿರುವುದಕ್ಕೆ ಪೂಜಾ ಸ್ಥಳ ಕಾಯಿದೆ ಜಾರಿಗೊಳಿಸಲಾಗಿದೆ.
ಹಿಂದೂ ಪಕ್ಷಕಾರರಾಗಿರುವವರು ಅಥವಾ ಅವರ ರೀತಿಯ ಭಕ್ತರು ವರ್ಷಕ್ಕೊಮ್ಮೆ ಜ್ಞಾನವಾಪಿ ಮಸೀದಿಯಲ್ಲಿ ಪ್ರಾರ್ಥಿಸುವುದಾದರೆ ದಿನನಿತ್ಯ ಪ್ರಾರ್ಥನೆ ಮಾಡುವುದರಿಂದ ಮಸೀದಿಯ ಚಹರೆ ಬದಲಾಗದು ಎಂದು ಹೈಕೋರ್ಟ್ ಕಾರಣ ನೀಡಿದೆ.
1990ರವರೆಗೆ ವರ್ಷಪೂರ್ತಿ ಮತ್ತು 1993ರ ನಂತರ ವರ್ಷಕ್ಕೊಮ್ಮೆ ದಾವೆಯ ಭಾಗವಾಗಿರುವ ಆಸ್ತಿಯಲ್ಲಿ ಶೃಂಗಾರ ಗೌರಿ, ಗಣೇಶ, ಹನುಮಾನ್ ಮತ್ತಿತರ ದೇವರುಗಳ ದರ್ಶನ ಮತ್ತು ಪೂಜೆಯನ್ನು ಹಿಂದೂ ಪಕ್ಷಕಾರರು ಮಾಡುತ್ತಿದ್ದರು ಎಂಬುದನ್ನು ನ್ಯಾಯಾಲಯ ಅರಿತು ಈ ಆದೇಶ ಮಾಡಿದೆ.
ದಾವೆಯ ಭಾಗವಾಗಿರುವ ಆಸ್ತಿಯಲ್ಲಿ ಶೃಂಗಾರ ಗೌರಿ, ಗಣೇಶ ಮತ್ತು ಹನುಮಾನ್ ಮತ್ತು ಇತರೆ ದೇವರುಗಳಿಗೆ ಪೂಜೆ ಸಲ್ಲಿಸುವ ಹಕ್ಕು ಸ್ಥಾಪಿಸಲು ಕೋರುವುದು ಜ್ಞಾನವಾಪಿ ಮಸೀದಿಯ ಚಹರೆಯನ್ನು ದೇವಸ್ಥಾನವಾಗಿಸುವ ನಡೆಯಲ್ಲ ಎಂದು ನ್ಯಾ. ಮುನೀರ್ ಹೇಳಿದ್ದಾರೆ.
ವಿಚಾರಣಾಧೀನ ನ್ಯಾಯಾಲಯದ ಆದೇಶ ಪರಿಶೀಲಿಸುವಂತೆ ಕೋರಿ ಅಂಜುಮಾನ್ ಇಂತೆಜಾಮಿಯಾ ಮಸೀದಿ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ನ್ಯಾಯಾಲಯವು ನಿರಾಕರಿಸಿ, ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು. ಹಿಂದೂ ಪಕ್ಷಕಾರರ ಅರ್ಜಿಯ ಊರ್ಜಿತ್ವ ಪ್ರಶ್ನಿಸಿದ್ದ ಮುಸ್ಲಿಮ್ ಪಕ್ಷಕಾರರ ಮನವಿಯನ್ನು ಜಿಲ್ಲಾ ನ್ಯಾಯಾಧೀಶರಾದ ಡಾ. ಎ ಕೆ ವಿಶ್ವೇಶ ಅವರು 2022ರ ಸೆಪ್ಟೆಂಬರ್ 12ರಂದು ವಜಾ ಮಾಡಿದ್ದರು.