ಜ್ಞಾನವಾಪಿ ಪ್ರಕರಣ: ಸಮೀಕ್ಷೆ ವೇಳೆ ಸಿಕ್ಕ ವಸ್ತುಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸಲು ನ್ಯಾಯಾಲಯದ ಆದೇಶ

ಸಮೀಕ್ಷೆ ಸಂದರ್ಭದಲ್ಲಿ ದೊರೆತ ವಸ್ತುಗಳ ಪಟ್ಟಿ ಸಿದ್ಧಪಡಿಸಿ, ಆ ಪಟ್ಟಿಯ ಒಂದು ಪ್ರತಿಯನ್ನು ನ್ಯಾಯಾಲಯಕ್ಕೆ ಮತ್ತೊಂದನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ಸಲ್ಲಿಸಲು ನ್ಯಾಯಾಧೀಶರಾದ ಎ ಕೆ ವಿಶ್ವೇಶ ಅವರು ಎಎಸ್‌ಐಗೆ ನಿರ್ದೇಶಿಸಿದ್ದಾರೆ.
Gyanvapi Mosque
Gyanvapi Mosque
Published on

ಜ್ಞಾನವಾಪಿ ಮಸೀದಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವೈಜ್ಞಾನಿಕ ಸಮೀಕ್ಷೆಯ ಸಂದರ್ಭದಲ್ಲಿ ದೊರೆತಿರುವ ಐತಿಹಾಸಿಕ ಮಹತ್ವ ಹೊಂದಿರುವ ಎಲ್ಲಾ ವಸ್ತುಗಳನ್ನು ಜಿಲ್ಲಾ ದಂಡಾಧಿಕಾರಿ (ಡಿಸ್ಟ್ರಿಕ್ಟ್‌ ಮ್ಯಾಜಿಸ್ಟ್ರೇಟ್‌) ಅವರಿಗೆ ಸಲ್ಲಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್‌ಐ) ಬುಧವಾರ ವಾರಾಣಸಿ ನ್ಯಾಯಾಲಯ ನಿರ್ದೇಶಿಸಿದೆ.

ಸಮೀಕ್ಷೆಯ ಸಂದರ್ಭದಲ್ಲಿ ದೊರೆತಿರುವ ವಸ್ತುಗಳ ಪಟ್ಟಿ ಸಿದ್ಧಪಡಿಸಿ, ಆ ಪಟ್ಟಿಯ ಒಂದು ಪ್ರತಿಯನ್ನು ನ್ಯಾಯಾಲಯಕ್ಕೆ ಮತ್ತೊಂದು ಪ್ರತಿಯನ್ನು ಜಿಲ್ಲಾ ದಂಡಾಧಿಕಾರಿಗೆ ಸಲ್ಲಿಸುವಂತೆ ಎಎಸ್‌ಐಗೆ ನ್ಯಾಯಾಧೀಶರಾದ ಎ ಕೆ ವಿಶ್ವೇಶ ಅವರು ನಿರ್ದೇಶಿಸಿದ್ದಾರೆ. ಜಿಲ್ಲಾಧಿಕಾರಿಯವರೇ ಜಿಲ್ಲಾ ದಂಡಾಧಿಕಾರಿಯಾಗಿರುತ್ತಾರೆ.

“ಆಕ್ಷೇಪಾರ್ಹವಾದ ಸ್ಥಳದಲ್ಲಿ ಎಎಸ್‌ಐ ಸಮೀಕ್ಷೆಯ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥವಾ ಹಿಂದೂ ಧರ್ಮ ಮತ್ತು ಪ್ರಾರ್ಥನಾ ವ್ಯವಸ್ಥೆ ಅಥವಾ ಈ ಪ್ರಕರಣದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ದೊರೆತಿರುವ ವಸ್ತುಗಳನ್ನು ಜಿಲ್ಲಾ ದಂಡಾಧಿಕಾರಿ ಅಥವಾ ಅವರು ಸೂಚಿಸಿದ ವ್ಯಕ್ತಿಗೆ ಎಎಸ್‌ಐ ಸಲ್ಲಿಸಬೇಕು. ಇದನ್ನು ಸುರಕ್ಷಿತವಾಗಿ ಇರಿಸಿ, ನ್ಯಾಯಾಲಯ ಕೇಳಿದ ಸಂದರ್ಭದಲ್ಲಿ ಅವುಗಳನ್ನು ಸಲ್ಲಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

Also Read
ಜ್ಞಾನವಾಪಿ ಮಸೀದಿ ಸಮೀಕ್ಷೆ: ಎಎಸ್‌ಐಗೆ ಅನುಮತಿಸಿದ ಸುಪ್ರೀಂ; ಮಧ್ಯಪ್ರವೇಶಿಸಲು ನಕಾರ

ಜುಲೈ 21ರ ವಾರಾಣಸಿ ಜಿಲ್ಲಾ ನ್ಯಾಯಾಲಯದ ನಿರ್ದೇಶನದಂತೆ ಜ್ಞಾನವಾಪಿ ಮಸೀದಿ ಸಮುಚ್ಚಯದಲ್ಲಿ ಎಎಸ್‌ಐ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿದೆ. ಈ ಸಮೀಕ್ಷೆಗೆ ಅಲಾಹಾಬಾದ್‌ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಸಮ್ಮತಿಸಿದ್ದವು.

ಫಿರ್ಯಾದಿ ರಾಖಿ ಸಿಂಗ್‌ ಸಲ್ಲಿಸಿರುವ ದಾವೆಯ ಭಾಗವಾಗಿ ಸಮೀಕ್ಷೆ ನಡೆಯುತ್ತಿದೆ. ರಾಖಿ ಸಿಂಗ್‌ ಅವರು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಸಾಕ್ಷಿ ನಾಶಪಡಿಸಿದರೆ ದಾವೆ ಮುನ್ನಡೆಸಲು ಸವಾಲು ಎದುರಾಗುತ್ತದೆ. ಅಲ್ಲದೇ, ಸೂಕ್ತ ನ್ಯಾಯಿಕ ಆದೇಶ ಮಾಡಲು ಕಷ್ಟವಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಿದ್ದರು.

Kannada Bar & Bench
kannada.barandbench.com