ಈ ಹಿಂದೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೊಹರು ಮಾಡಿದ ಪ್ರದೇಶವನ್ನು (ವುಜುಖಾನಾ) ಹೊರತುಪಡಿಸಿ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಅವಕಾಶ ನೀಡಿದ ವಾರಾಣಸಿ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಂಗಳವಾರ ಅಲಾಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ವಾರಾಣಸಿ ನ್ಯಾಯಾಲಯದ ಆದೇಶಕ್ಕೆ ಜುಲೈ 26 ರವರೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಒಂದು ದಿನ ಬಳಿಕ ಅಂದರೆ ಮಂಗಳವಾರ ಮುಸ್ಲಿಂ ಪಕ್ಷಕಾರರಿಂದ ಈ ಮನವಿ ಸಲ್ಲಿಕೆಯಾಗಿದೆ.
ಜುಲೈ 22ರಂದು ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ ಕೆ ವಿಶ್ವೇಶ ಅವರು ಎಎಸ್‌ಐ ಸಮೀಕ್ಷೆಗೆ ಅನುಮತಿ ನೀಡಿದ್ದರು. ಇದನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಪರಿಣಾಮ ಬುಧವಾರ (ಜುಲೈ 26), ಸಂಜೆ 5 ಗಂಟೆಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಸಮೀಕ್ಷೆಗೆ ಅನುಮತಿ ನೀಡುವ ಜಿಲ್ಲಾ ನ್ಯಾಯಾಧೀಶರ ಆದೇಶ ಶುಕ್ರವಾರ ಸಂಜೆ ಪ್ರಕಟವಾಗಿತ್ತು ಎಂಬುದನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಗಮನಿಸಿತ್ತು.
ಹೀಗಾಗಿ ಸಮೀಕ್ಷೆ ಆದೇಶ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗಲು ಮುಸ್ಲಿಂ ಪಕ್ಷಕಾರರಿಗೆ ಸೂಕ್ತ ಸಮಯಾವಕಾಶ ನೀಡುವ ಸಲುವಾಗಿ ಜುಲೈ 26 ರವರೆಗೆ ಜಿಲ್ಲಾ ನ್ಯಾಯಾಲಯದ ಆದೇಶ ಜಾರಿಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.