ಹಜ್ ಯಾತ್ರೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಸಂವಿಧಾನ ರಕ್ಷಣೆ ಒದಗಿಸಿರುವ ಧಾರ್ಮಿಕ ಆಚರಣೆಯ ವ್ಯಾಪ್ತಿಗೆ ಬರುತ್ತವೆ ಎಂದು ದೆಹಲಿ ಹೈಕೋರ್ಟ್ ಈಚೆಗೆ ಹೇಳಿದೆ.
ಸಂವಿಧಾನದ 25ನೇ ವಿಧಿಯು ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಎಲ್ಲಾ ನಾಗರಿಕರಿಗೆ ತಮ್ಮಿಚ್ಛೆಯ ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ ಹಾಗೂ ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಒದಗಿಸಿದೆ. ಈ ಸ್ವಾತಂತ್ರ್ಯ ಪಾಲಿಸಲೇಬೇಕಾದ ಹಕ್ಕುಗಳಲ್ಲಿ ಒಂದಾಗಿದೆ ಎಂದು ನ್ಯಾ. ಚಂದ್ರಧಾರಿ ಸಿಂಗ್ ತಿಳಿಸಿದರು.
“ಹಜ್ ಯಾತ್ರೆ ಮತ್ತು ಅದು ಒಳಗೊಂಡಿರುವ ಸಮಾರಂಭಗಳು ಸಂವಿಧಾನ ರಕ್ಷಿಸಿರುವ ಧಾರ್ಮಿಕ ಆಚರಣೆಯ ವ್ಯಾಪ್ತಿಗೆ ಬರುತ್ತವೆ. ಧಾರ್ಮಿಕ ಸ್ವಾತಂತ್ರ್ಯ ಎಂಬುದು ಆಧುನಿಕ ಭಾರತ ಗಣರಾಜ್ಯದ ಸ್ಥಾಪಕ ಪಿತಾಮಹರ ದೃಷ್ಟಿಗೆ ಅನುಗುಣವಾಗಿ ಸಂವಿಧಾನದಡಿ ಒದಗಿಸಿದ ಮತ್ತು ಅಡಕಗೊಳಿಸಲಾದ ಕಾಪಿಟ್ಟುಕೊಳ್ಳಲಾದ ಹಕ್ಕುಗಳಲ್ಲಿ ಒಂದಾಗಿದೆ” ಎಂದು ನ್ಯಾಯಾಲಯ ವಿವರಿಸಿದೆ.
ಈ ಹಿನ್ನೆಲೆಯಲ್ಲಿ ಹಜ್ ಸಮೂಹ ಸಂಘಟಕರ (ಎಚ್‌ಜಿಒ) ನೋಂದಣಿ ಅಮಾನತುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ತಮ್ಮ ನೋಂದಣಿ ಮತ್ತು ಕೋಟಾ ಅಮಾನತುಗೊಳಿಸಿರುವುದನ್ನು ಹಾಗೂ ಕಳೆದ ತಿಂಗಳು ಕೇಂದ್ರ ಸರ್ಕಾರ ತಮಗೆ ಶೋಕಾಸ್ ನೋಟಿಸ್ ನೀಡಿರುವುದನ್ನು ಪ್ರಶ್ನಿಸಿ ವಿವಿಧ ಹಜ್ ಸಮೂಹ ಸಂಘಟಕರು ಸಲ್ಲಿಸಿದ್ದ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದರು.