ಅರೆನಗ್ನ ಪ್ರಕರಣ: ಬೇಷರತ್‌ ಕ್ಷಮೆ ಯಾಚಿಸಿದ ಶ್ರೀಧರ್‌ ಭಟ್‌; ಎಚ್ಚರಿಕೆ ನೀಡಿ ದೂರು ವಿಲೇವಾರಿ ಮಾಡಿದ ಹೈಕೋರ್ಟ್‌

ಶ್ರೀಧರ್‌ ಭಟ್‌ 2022ರ ಜನವರಿ 1ರಂದು ಪ್ರಮಾಣ ಪತ್ರ ಸಲ್ಲಿಸಿದ್ದು, ಅದರಲ್ಲಿ ಬೇಷರತ್‌ ಕ್ಷಮೆ ಕೋರಿದ್ದು, ತನ್ನ ನಡತೆಯು ಉದ್ದೇಶಪೂರ್ವಕವಾಗಿರಲಿಲ್ಲ. ಎಲ್ಲರಲ್ಲೂ ವಿನಯಪೂರ್ವಕವಾಗಿ ಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.
Virtual hearing

Virtual hearing

Published on

ಕಳೆದ ವರ್ಷದ ನವೆಂಬರ್‌ 30ರಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ ಡಿ ಪ್ರಕರಣದ ವರ್ಚುವಲ್‌ ವಿಚಾರಣೆಯ ಸಂದರ್ಭದಲ್ಲಿ ಅರೆನಗ್ನವಾಗಿ ಪರದೆಯಲ್ಲಿ ಕಾಣಿಸಿಕೊಂಡಿದ್ದ ಶ್ರೀಧರ್‌ ಎನ್‌. ಭಟ್‌ ಅವರು ಬೇಷರತ್‌ ಕ್ಷಮೆ ಒಳಗೊಂಡ ಪ್ರಮಾಣ ಪತ್ರ ಸಲ್ಲಿಸಿರುವುದನ್ನು ಪರಿಗಣಿಸಿ, ಅವರಿಗೆ ಎಚ್ಚರಿಕೆ ವಹಿಸುವಂತೆ ನಿರ್ದೇಶಿಸಿರುವ ಕರ್ನಾಟಕ ಹೈಕೋರ್ಟ್‌ ಗುರುವಾರ ಪ್ರಕರಣವನ್ನು ಇತ್ಯರ್ಥಪಡಿಸಿತು.

ಜಾರಕಿಹೊಳಿ ಸಿ ಡಿ ಪ್ರಕರಣದ ವಿಚಾರಣೆ ಮುಗಿದ ಬಳಿಕ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ವಿಚಾರವನ್ನು ದೂರುದಾರೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರಿಗೆ ಗಮನಕ್ಕೆ ತಂದರು. “ಆರೋಪಿಗೆ ನೋಟಿಸ್‌ ಜಾರಿ ಮಾಡಿದ್ದು, ಅವರು ಬೇಷರತ್‌ ಕ್ಷಮೆ ಕೋರಿದ್ದಾರೆ. ಶ್ರೀಧರ್‌ ಭಟ್‌ ವಿರುದ್ಧ ಪ್ರಕ್ರಿಯೆ ಮುಂದುವರಿಸಬೇಕೆ” ಎಂದು ಜೈಸಿಂಗ್‌ ಅವರನ್ನು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು.

ಇದಕ್ಕೆ ಇಂದಿರಾ ಜೈಸಿಂಗ್‌ ಅವರು “ಶ್ರೀಧರ್‌ ಭಟ್‌ ಕ್ಷಮೆ ಕೋರಿರುವುದಕ್ಕೆ ನನ್ನ ಆಕ್ಷೇಪಣೆ ಏನೂ ಇಲ್ಲ. ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರೆ ಅದನ್ನು ಮುಂದುವರಿಸಲು ನನಗೆ ಇಷ್ಟವಿಲ್ಲ. ನ್ಯಾಯಾಲಯವು ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದು” ಎಂದರು.

ಇದನ್ನು ಪರಿಗಣಿಸಿದ ಪೀಠವು “ವಸ್ತ್ರ ಧರಿಸಿದೇ ಅಸಭ್ಯವಾಗಿ ಶ್ರೀಧರ್‌ ಭಟ್‌ ವರ್ಚುವಲ್‌ ವಿಚಾರಣೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಶ್ರೀಧರ್‌ ಭಟ್‌ 2022ರ ಜನವರಿ 1ರಂದು ಪ್ರಮಾಣ ಪತ್ರ ಸಲ್ಲಿಸಿದ್ದು, ಅದರಲ್ಲಿ ಬೇಷರತ್‌ ಕ್ಷಮೆ ಕೋರಿದ್ದಾರೆ. ತನ್ನ ನಡತೆಯು ಉದ್ದೇಶಪೂರ್ವಕವಾಗಿರಲಿಲ್ಲ. ಅಂದು ವಿಚಾರಣೆಯಲ್ಲಿ ಭಾಗಿಯಾಗಿದ್ದ ಎಲ್ಲರಲ್ಲೂ ವಿನಯಪೂರ್ವಕವಾಗಿ ಕ್ಷಮೆ ಕೋರುತ್ತೇನೆ” ಎಂದು ತಿಳಿಸಿದ್ದಾರೆ.

“ಶ್ರೀಧರ್‌ ಭಟ್‌ ಅವರಿಗೆ ತಮ್ಮ ತಪ್ಪಿನ ಅರಿವಾಗಿದ್ದು, ಇಂಥ ತಪ್ಪು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಭಟ್‌ ಅವರು ಬೇಷರತ್‌ ಕ್ಷಮೆ ಕೋರಿರುವುದನ್ನು ಪರಿಗಣಿಸಿ, ಅವರ ವಿರುದ್ಧದ ಪ್ರಕ್ರಿಯೆಯನ್ನು ಇಲ್ಲಿಗೆ ನಿಲ್ಲಿಸಲಾಗುತ್ತಿದೆ. ಭಟ್‌ ಅವರು ಮುಂದೆ ಎಚ್ಚರಿಕೆಯಿಂದ ಇರಬೇಕು” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

ವರ್ಚುವಲ್‌ ವಿಚಾರಣೆಯ ವೇಳೆ ಶ್ರೀಧರ್‌ ಭಟ್‌ ಎಸ್‌ಡಿಎಂಸಿ ಉಜಿರೆ ಹೆಸರಿನಲ್ಲಿ ಲಾಗಿನ್‌ ಆಗಿದ್ದ ವ್ಯಕ್ತಿಯೊಬ್ಬರು ಅರೆನಗ್ನವಾಗಿ ಕಾಣಿಸಿಕೊಂಡಿದ್ದ ಸಂಬಂಧ ಇಂದಿರಾ ಜೈಸಿಂಗ್‌ ಅವರು ತಕರಾರರು ಎತ್ತಿದ್ದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್‌ ಜಾರಿಗೆ ಹೈಕೋರ್ಟ್‌ ನಿರ್ದೇಶಿಸಿತ್ತು.

ವ್ಯಕ್ತಿಯೊಬ್ಬರು ಸುಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ವರ್ಚುವಲ್‌ ವಿಚಾರಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ನಾನು ಮಹಿಳಾ ವಕೀಲೆಯಾಗಿದ್ದು, ಅದನ್ನು ನೋಡಿಕೊಂಡು ನನಗೆ ಸರಿಯಾಗಿ ವಾದಿಸಲು ಸಮಸ್ಯೆಯಾಯಿತು. ಹಲವು ತಿಂಗಳುಗಳಿಂದ ನಾನು ವರ್ಚುವಲ್‌ ವಿಚಾರಣೆಯಲ್ಲಿ ಭಾಗಿಯಾಗಿದ್ದೇನೆ. ಈ ರೀತಿ ಎಂದಿಗೂ ಆಗಿಲ್ಲ. ಹೈಕೋರ್ಟ್‌ ವಿಚಾರಣೆಯ ಸಂದರ್ಭದಲ್ಲಿ ಹೀಗಾಗುತ್ತದೆ ಎಂದರೆ ಹೇಗೆ? ಹೈಕೋರ್ಟ್‌ ಘನತೆ ಏನಾಗಬೇಕು? ಅರೆ ನಗ್ನವಾಗಿ ಕಾಣಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ನನ್ನ ಬಳಿ ದಾಖಲೆ ಇದೆ. ಅದನ್ನು ಕಳುಹಿಸಿಕೊಡುತ್ತೇನೆ. ಇದು ನ್ಯಾಯಾಂಗ ನಿಂದನೆಯಾಗಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಘಟನೆ ನಡೆದ ದಿನ ಇಂದಿರಾ ಜೈಸಿಂಗ್ ಮನವಿ ಮಾಡಿದ್ದರು.

Also Read
ವರ್ಚುವಲ್‌ ವಿಚಾರಣೆಯಲ್ಲಿ ಅರೆನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿ: ಜೈಸಿಂಗ್‌ ಆಕ್ಷೇಪ; ನೋಟಿಸ್‌ ನೀಡಲು ಆದೇಶಿಸಿದ ಪೀಠ

ಇದನ್ನು ಪರಿಗಣಿಸಿದ ಪೀಠವು “ಅರೆ ನಗ್ನವಾಗಿ ಕಾಣಿಸಿಕೊಂಡಿದ್ದನ್ನು ನಾವು ನೋಡಿಲ್ಲ. ಆದರೂ ಆ ವ್ಯಕ್ತಿಯ ಮಾಹಿತಿಯನ್ನು ದತ್ತಾಂಶದಲ್ಲಿ ಪರಿಶೀಲಿಸಿ ಅವರಿಗೆ ನೋಟಿಸ್‌ ನೀಡಬೇಕು” ಎಂದು ನ್ಯಾಯಾಲಯದ ಅಧಿಕಾರಿಗಳಿಗೆ ಆದೇಶ ಮಾಡಿತ್ತು.

ಇದಕ್ಕೂ ಮುನ್ನ ಅಂದಿನ ವಿಚಾರಣೆ ವೇಳೆ ಹಲವು ಬಾರಿ ಇಂದಿರಾ ಜೈಸಿಂಗ್‌ ಅವರು, ವ್ಯಕ್ತಿಯೊಬ್ಬ ಆಗಷ್ಟೇ ಸ್ನಾನ ಮಾಡಿಕೊಂಡು ಬಂದು ಟವೆಲ್‌ನಲ್ಲಿ ಮೈ ಒರೆಸಿಕೊಳ್ಳುತ್ತಾ ಅತ್ತಿಂದಿತ್ತ ಓಡಾಡುತ್ತಿರುವುದು ಪರದೆಯಲ್ಲಿ ಕಾಣಿಸುತ್ತಿರುವ ಬಗ್ಗೆ ಗಮನಸೆಳೆದಿದ್ದರು. “ಹೈಕೋರ್ಟ್‌ ವಿಚಾರಣೆಯ ಸಂದರ್ಭದಲ್ಲಿ ಏನಾಗುತ್ತಿದೆ. ಅರೆನಗ್ನ ವ್ಯಕ್ತಿಯೊಬ್ಬರು ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ನನಗೆ ಸಮಸ್ಯೆಯಾಗುತ್ತಿದೆ” ಎಂದು ಪ್ರತಿಭಟನೆ ದಾಖಲಿಸಿದ್ದರು. ಆದರೆ, ಪೀಠವು ಪ್ರಕರಣದಲ್ಲಿ ತಲ್ಲೀನವಾಗಿದ್ದರಿಂದ ಅದರತ್ತ ಗಮನಹರಿಸಲಿಲ್ಲ. ಈ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಶ್ರೀಧರ್‌ ಭಟ್‌ ಎಸ್‌ಡಿಎಂಸಿ ಉಜಿರೆ ಎಂದು ಲಾಗಿನ್‌ ಆಗಿದ್ದ ವ್ಯಕ್ತಿ ವರ್ಚುವಲ್‌ ವಿಚಾರಣೆಯಿಂದ ನಿರ್ಗಮಿಸಿದ್ದರು. ಇಂದಿರಾ ಜೈಸಿಂಗ್‌ ಅವರ ಆಕ್ಷೇಪಕ್ಕೆ ವಕೀಲ ಎಸ್‌ ಎ ಅಹ್ಮದ್‌ ಅವರು ಧ್ವನಿಗೂಡಿಸಿದ್ದರು.

Kannada Bar & Bench
kannada.barandbench.com