ಹರ್ಷ ಹತ್ಯೆ ಪ್ರಕರಣ: ಹತ್ತನೇ ಆರೋಪಿ ಜಾಫರ್‌ ಸಾದಿಕ್‌ಗೆ ಜಾಮೀನು ಮಂಜೂರು ಮಾಡಿದ ಎನ್‌ಐಎ ವಿಶೇಷ ನ್ಯಾಯಾಲಯ

ಆರೋಪಿ ಸಾದಿಕ್‌ ವಿರುದ್ಧದ ಕೆಟ್ಟ ಪೂರ್ವ ನಿದರ್ಶನಗಳನ್ನು ಪ್ರಾಸಿಕ್ಯೂಷನ್‌ ನ್ಯಾಯಾಲಯದ ಮುಂದೆ ಇಟ್ಟಿಲ್ಲ. ಅಲ್ಲದೇ, ಆರೋಪಿಯು ಯಾವುದೇ ತೆರನಾದ ಕಸ್ಟಡಿ ವಿಚಾರಣೆಗೆ ಬೇಕಾಗಿಲ್ಲ ಎಂದು ನ್ಯಾಯಾಲಯವು ಜಾಮೀನು ಆದೇಶದಲ್ಲಿ ಹೇಳಿದೆ.
Harsha
Harsha

ಶಿವಮೊಗ್ಗದಲ್ಲಿನ ಬಜರಂಗದಳದ ಕಾರ್ಯಕರ್ತ ಹರ್ಷ ಅಲಿಯಾಸ್‌ ಹಿಂದೂ ಹರ್ಷನ ಕೊಲೆ ಪ್ರಕರಣದಲ್ಲಿ ಪುತ್ರನನ್ನು ಬಂಧನದಿಂದ ತಪ್ಪಿಸಿಕೊಳ್ಳಲು ನೆರವು ನೀಡಿದ ಆರೋಪದಲ್ಲಿ ಬಂಧಿತರಾಗಿರುವ 10ನೇ ಆರೋಪಿ ಜಾಫರ್‌ ಸಾದಿಕ್‌ ಅವರಿಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ಈಚೆಗೆ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಪ್ರಕರಣದಲ್ಲಿ ಮೊದಲ ಜಾಮೀನು ದೊರೆತಂತಾಗಿದೆ.

ಆರೋಪಿ ಸಾದಿಕ್‌ ವಿರುದ್ಧದ ಕೆಟ್ಟ ಪೂರ್ವ ನಿದರ್ಶನಗಳನ್ನು ಪ್ರಾಸಿಕ್ಯೂಷನ್‌ ನ್ಯಾಯಾಲಯದ ಮುಂದೆ ಇಟ್ಟಿಲ್ಲ. ಅಲ್ಲದೇ, ಆರೋಪಿಯು ಯಾವುದೇ ತೆರನಾದ ಕಸ್ಟಡಿ ವಿಚಾರಣೆಗೆ ಬೇಕಾಗಿಲ್ಲ ಎಂದು ವಿಶೇಷ ನ್ಯಾಯಾಧೀಶರಾದ ಸಿ ಎಂ ಗಂಗಾಧರ ಅವರು ಜಾಮೀನು ಆದೇಶದಲ್ಲಿ ಹೇಳಿದ್ದಾರೆ.

ಆರೋಪಿ ಸಾದಿಕ್‌ ಅವರು 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್‌, ಒಬ್ಬರ ಭದ್ರತೆ ನೀಡಬೇಕು. ನ್ಯಾಯಾಲಯದ ವಿನಾಯಿತಿ ನೀಡದ ಹೊರತು ಅವರು ಪ್ರಕರಣ ವಿಚಾರಣೆಯ ಎಲ್ಲ ದಿನಗಳು ನ್ಯಾಯಾಲಯದ ಮುಂದೆ ಹಾಜರಾಗಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿ ತಿರುಚುವುದು ಅಥವಾ ಅದಕ್ಕೆ ಬೆದರಿಕೆ ಹಾಕುವಂತಿಲ್ಲ. ಭವಿಷ್ಯದಲ್ಲಿ ಆರೋಪಿಯು ಯಾವುದೇ ತೆರನಾದ ಕ್ರಿಮಿನಲ್‌ ಚಟುವಟಿಕೆಯಲ್ಲಿ ಭಾಗಿಯಾಗಬಾರದು ಎಂದು ನ್ಯಾಯಾಲಯವು ಷರತ್ತುಗಳನ್ನು ವಿಧಿಸಿದೆ.

Also Read
ಹಿಂದೂ-ಮುಸ್ಲಿಮರಲ್ಲಿ ದ್ವೇಷ ಸೃಷ್ಟಿಸಿ, ಸೌಹಾರ್ದ ಕೆಡಿಸಲು ಆರೋಪಿಗಳಿಂದ ಪ್ರಯತ್ನ: ಎನ್‌ಐಎ ಆರೋಪಪಟ್ಟಿಯಲ್ಲಿ ಉಲ್ಲೇಖ

ಆರೋಪಿ ಸಾದಿಕ್‌ ಅವರು ಪ್ರಕರಣದಲ್ಲಿ ಆರೋಪಿಯಾಗಿರುವ ಪುತ್ರನನ್ನು ಬೆಂಗಳೂರಿನಲ್ಲಿ ಗೆಳೆಯನ ಮನೆಯಲ್ಲಿ ಆಶ್ರಯ ಪಡೆಯಲು ನೆರವು ನೀಡುವ ಮೂಲಕ ಐಪಿಸಿ ಸೆಕ್ಷನ್‌ 212ರ ಅಡಿ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆಯು ಪೂರ್ಣಗೊಂಡಿದ್ದು, ಎನ್‌ಐಎ ಆರೋಪ ಪಟ್ಟಿ ಸಲ್ಲಿಸಿದೆ. 52 ವರ್ಷದ ಸಾದಿಕ್‌ ಅವರು ಈಗಾಗಲೇ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದಾರೆ. ಪ್ರಕರಣದ ವಾಸ್ತವಿಕ ಸಂಗತಿಗಳು ಮತ್ತು ಪರಿಸ್ಥಿತಿಯು ಆರೋಪಿಯನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕು ಎನ್ನುವ ರೀತಿಯಲ್ಲಿಲ್ಲ ಎಂದು ಪೀಠವು ಆದೇಶದಲ್ಲಿ ಹೇಳಿದೆ.

Related Stories

No stories found.
Kannada Bar & Bench
kannada.barandbench.com