ಹರ್ಷ ಕೊಲೆ: ಸಚಿವ ಈಶ್ವರಪ್ಪ, ಪಾಲಿಕೆ ಸದಸ್ಯ ಚನ್ನಬಸಪ್ಪ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ನ್ಯಾಯಾಲಯದ ಆದೇಶ

ಮುಸಲ್ಮಾನ ಗೂಂಡಾಗಳು ಹರ್ಷ ಎಂಬ ಯುವಕನನ್ನು ಕೊಲೆ ಮಾಡಿದ್ದು, ಈ ಹಿಂದೆ ಮುಸಲ್ಮಾನರು ಶಿವಮೊಗ್ಗದಲ್ಲಿ ಎಂದೂ ಕೂಡ ಈ ರೀತಿ ಬಾಲ ಬಿಚ್ಚಿರಲಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದರು ಎಂದು ದೂರುದಾರರು ಆಕ್ಷೇಪಿಸಿದ್ದಾರೆ.
Rural Development and Panchayat Raj Minister K S Eshwarappa
Rural Development and Panchayat Raj Minister K S EshwarappaTwittter

ಕಳೆದ ತಿಂಗಳು ಶಿವಮೊಗ್ಗದಲ್ಲಿ ನಡೆದಿದ್ದ ಭಜರಂಗ ದಳದ ಕಾರ್ಯಕರ್ತ ಹರ್ಷ ಕೊಲೆಗೆ ಮುಸ್ಲಿಮ್‌ ಗೂಂಡಾಗಳೇ ಕಾರಣ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ ಎಸ್‌ ಈಶ್ವರಪ್ಪ ಹಾಗೂ ಪೊಲೀಸ್‌ ಇಲಾಖೆಯ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಎಸ್‌ ಎನ್‌ ಚನ್ನಬಸಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬುಧವಾರ ಶಿವಮೊಗ್ಗದ ದೊಡ್ಡಪೇಟೆ ಪೊಲೀಸರಿಗೆ ನಿರ್ದೇಶಿಸಿದೆ.

ಶಿವಮೊಗ್ಗ ನಿವಾಸಿ ರಿಯಾಜ್‌ ಅಹ್ಮದ್‌ ಅವರ ಖಾಸಗಿ ದೂರನ್ನು ಪರಿಗಣಿಸಿರುವ 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಹಾಗೂ ಹಾಲಿ ಮತ್ತು ಮಾಜಿ ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತ್‌ ಜೆ ಅವರು ಕ್ರಿಮಿನಲ್‌ ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 156(3) ಅಡಿ ಪೊಲೀಸರಿಗೆ ಆದೇಶ ಮಾಡಿದ್ದು, ಪ್ರಕರಣವನ್ನು ಮೇ 5ಕ್ಕೆ ಮುಂದೂಡಿದ್ದಾರೆ.

ಫೆಬ್ರವರಿ 20ರಂದು ರಾತ್ರಿ 9 ಗಂಟೆ ಸುಮಾರಿಗೆ ಭಜರಂಗ ದಳ ಕಾರ್ಯಕರ್ತ ಹರ್ಷನ ಕೊಲೆಯಾಗಿತ್ತು. ಮಾರನೇಯ ದಿನ ಸಚಿವ ಈಶ್ವರಪ್ಪ ಅವರು “ಮುಸಲ್ಮಾನ ಗೂಂಡಾಗಳು ಹರ್ಷ ಎಂಬ ಯುವಕನನ್ನು ಕೊಲೆ ಮಾಡಿದ್ದು, ಈ ಹಿಂದೆ ಮುಸಲ್ಮಾನರು ಶಿವಮೊಗ್ಗದಲ್ಲಿ ಎಂದೂ ಕೂಡ ಈ ರೀತಿ ಬಾಲ ಬಿಚ್ಚಿರಲಿಲ್ಲ. ರಾಜಕೀಯ ಲಾಭ ಪಡೆಯುವುದಕ್ಕೆ ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್‌ ನಾಯಕ ಡಿ ಕೆ ಶಿವಕುಮಾರ್‌ ಕುಮ್ಮಕ್ಕು ಸಿಗುತ್ತಿದೆ. ಈ ಮುಸಲ್ಮಾನ್‌ ಗೂಂಡಾಗಿರಿಯನ್ನು ನಮ್ಮ ಶಿವಮೊಗ್ಗದಲ್ಲಿ ನಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅದನ್ನು ನಾನು ದಮನ ಮಾಡುತ್ತೇನೆ” ಎಂದು ಹೇಳಿಕೆ ನೀಡಿದ್ದರು.

ಪಾಲಿಕೆ ಸದಸ್ಯ ಚನ್ನಬಸಪ್ಪ ಅವರು “ಪೊಲೀಸರಿಗೆ ಈ ಜನ್ಮದಲ್ಲಿ ಬುದ್ದಿ ಬರುವುದಿಲ್ಲ. ಪೊಲೀಸ್‌ ಹೆಣ ಬಿದ್ದಾಗ ನೆಟ್ಟಗೆ ಆಗುತ್ತಾರೆ. ಪೊಲೀಸರ ಹೆಣ ಬೀಳಬೇಕು. ಪ್ರತಿ ಸಲವೂ ಅವರನ್ನು ಕಳಕೋ, ಇವರನ್ನು ಕಳಕೋ ಎಂಬಂತಾಗಿದೆ. ನಾವು ಯಾವತ್ತೂ ಹಿಂದೂಗಳನ್ನೇ ಕಳೆದುಕೊಂಡಿರುವುದು. ಪೊಲೀಸ್‌ ನಾಮರ್ದ ಇಲಾಖೆ. ಇಲ್ಲಿ ಆರಕ್ಷಕ ಇಲಾಖೆಯ ವೈಫಲ್ಯ, ದೌರ್ಬಲ್ಯ ಇದೆ. ಆರಕ್ಷಕರು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ಆರಕ್ಷಕ ಇಲಾಖೆ ಬದುಕಿದೆಯೋ, ಸತ್ತಿದೆಯೋ ಎಂದು ತಿಳಿದುಕೊಳ್ಳಬೇಕಾ? ಮುಸಲ್ಮಾನ ಗೂಂಡಾಗಳು ಈ ಥರ ಚಟುವಟಿಕೆಗಳಲ್ಲಿ ಬಹಳಷ್ಟು ತೊಡಗಿಕೊಂಡಿದ್ದಾರೆ. ಪೊಲೀಸ್‌ ಇಲಾಖೆಗೆ ಮಾನ-ಮರ್ಯಾದೆ ಇಲ್ಲ. ಶಿವಮೊಗ್ಗ‌ ಜಿಲ್ಲೆಯ ನಾಮರ್ದ ಪೊಲೀಸರು, ನಾಮರ್ದ ಪೊಲೀಸ್‌ ಇಲಾಖೆಗೆ ಏನು ಮಾಡಬೇಕು ಎಂಬುದು ಗೊತ್ತಿದೆ. ಮೆರವಣಿಗೆ ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ಪರೋಕ್ಷವಾಗಿ ಮುಸ್ಲಿಮರ ಮಂಗಳ ಹಾಡುವ ಪರಿಸ್ಥಿತಿ ಬಂದಿದೆ. ಮಂಗಳ ಹಾಡುತ್ತೇವೆ” ಎಂದು ನೀಡಿದ್ದ ಹೇಳಿಕೆ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಉಭಯ ನಾಯಕರ ಪ್ರಚೋದನಾಕಾರಿ ಹೇಳಿಕೆಯ ಬೆನ್ನಲ್ಲೇ ಮುಸ್ಲಿಮ್‌ ಸಮುದಾಯದವರ ಮನೆ, ಅಂಗಡಿಗಳ ಮೇಲೆ ದಾಳಿ ನಡೆದಿತ್ತು. ಘಟನೆಯಲ್ಲಿ ಹಲವು ಮಹಿಳೆಯರು ಮತ್ತು ಮಕ್ಕಳು ಗಾಯಗೊಂಡಿದ್ದಾರೆ. ನಗರದ ಸೀಗೆಹಟ್ಟಿ ಬಡಾವಣೆ, ರವಿವರ್ಮ ಬೀದಿ, ಮುಂತಾದ ಕಡೆಗಳಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ನಿಷೇಧಾಜ್ಞೆ ಸಹ ಜಾರಿಯಾಗಿತ್ತು. ಜನಪ್ರತಿನಿಧಿಗಳಾಗಿದ್ದುಕೊಂಡು ಪ್ರಚೋದನಾಕಾರಿಯಾಗಿ ಮಾತನಾಡಿದ ಉಭಯ ನಾಯಕರ ವಿರುದ್ದ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದರೂ ಅವರು ಪ್ರಕರಣ ದಾಖಲಿಸಿಲ್ಲ. ಪೊಲೀಸ್‌ ವರಿಷ್ಠಾಧಿಕಾರಿಯೂ ದೂರಿಗೆ ಪ್ರತಿಕ್ರಿಯಿಸಿಲ್ಲ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.

Also Read
[ಅಕ್ರಮ ಅದಿರು ಮಾರಾಟ] ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತಿತರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಆದೇಶ

ಹರ್ಷನ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸುವುದಕ್ಕೂ ಮುನ್ನವೇ ಆರೋಪಿಗಳು ಕೊಲೆಗೆ ಮುಸ್ಲಿಮ್‌ ಸಮುದಾಯ ಕಾರಣ ಎಂದು ಆರೋಪಿಸಿದ್ದರು. ಇದು ತನಿಖಾಧಿಕಾರಿಗಳ ಮೇಲೆ ಒತ್ತಡ ಉಂಟು ಮಾಡಿದೆ. ಅಲ್ಲದೇ, ಸಂವಿಧಾನ ಬದ್ಧವಾಗಿ ಸಚಿವರಾಗಿರುವ ಈಶ್ವರಪ್ಪನವರ ಹೇಳಿಕೆಯೂ ಕಾನೂನುಬಾಹಿರವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಹೀಗಾಗಿ, ಆರೋಪಿಗಳಾದ ಈಶ್ವರಪ್ಪ ಮತ್ತು ಚೆನ್ನಬಸಪ್ಪ ಅವರ ವಿರುದ್ದ ಭಾರತೀಯ ದಂಡ ಸಂಹಿತೆ ಸೆಕ್ಷನ್‌ 124(ಎ), 153(ಎ), 153(ಬಿ), 295(ಎ), 295(ಬಿ), 505(2) ಮತ್ತು 504 ಜೊತೆಗೆ ಸೆಕ್ಷನ್‌ 34ರ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲು ದೊಡ್ಡಪೇಟೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಮಾರ್ಚ್‌ 24ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಖಾಸಗಿ ದೂರಿನಲ್ಲಿ ರಿಯಾಜ್‌ ಅಹ್ಮದ್‌ ಮನವಿ ಮಾಡಿದ್ದರು. ವಕೀಲ ಹರಿರಾಮ್‌ ಅವರು ದೂರುದಾರರನ್ನು ಪ್ರತಿನಿಧಿಸಿದ್ದರು.

Attachment
PDF
Riyaz Ahmed Vs. K S Eshwarappa.pdf
Preview

Related Stories

No stories found.
Kannada Bar & Bench
kannada.barandbench.com