ಸಂವಿಧಾನ ಮೂಲ ರಚನಾ ಸಿದ್ಧಾಂತ ದೇಶಕ್ಕೆ ಒಳಿತು ಮಾಡಿದೆಯೇ ಎನ್ನುವ ಕುರಿತು ಕಾನೂನು ಲೋಕದ ದಿಗ್ಗಜರು ಹೇಳುವುದೇನು?
ಸುಪ್ರೀಂ ಕೋರ್ಟ್ ನ್ಯಾಯವಾದಿ ರಾಮ್ ಜೇಠ್ಮಲಾನಿ ಜನ್ಮ ಶತಮಾನೋತ್ಸವದ ಅಂಗವಾಗಿ ಶುಕ್ರವಾರ ನಡೆದ “ಮೂಲರಚನಾ ಸಿದ್ಧಾಂತ ದೇಶಕ್ಕೆ ಒಳಿತು ಮಾಡಿದೆಯೇ?” ಎಂಬ ಉಪನ್ಯಾಸ ಸರಣಿಯು ಮೂಲರಚನಾ ಸಿದ್ಧಾಂತ ಕುರಿತು ಕಾನೂನು ದಿಗ್ಗಜರ ಮತ್ತು ವ್ಯಾಖ್ಯಾನಕಾರರ ಹಲವು ಒಳನೋಟಗಳನ್ನು ನೀಡಿತು.
ಮೂಲ ರಚನಾ ಸಿದ್ಧಾಂತ ರಾಷ್ಟ್ರಕ್ಕೆ ಒಳಿತು ಮಾಡಿದೆಯೇ ಎನ್ನುವ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನಿವೃತ್ತ ಸಿಜೆಐ ದೀಪಕ್ ಮಿಶ್ರಾ,, ಹಿರಿಯ ನ್ಯಾಯವಾದಿಗಳಾದ ಫಾಲಿ ನಾರಿಮನ್, ಶ್ಯಾಮ್ ದಿವಾನ್ ಹಾಗೂ ಪತ್ರಕರ್ತ ಎಸ್ ಗುರುಮೂರ್ತಿ ಅವರು ಮಾತನಾಡಿದರು. ಅವರು ನೀಡಿರುವ ಹೇಳಿಕೆಗಳ ಸಂಕ್ಷಿಪ್ತ ರೂಪ ಇಲ್ಲಿದೆ.
ಸಿಜೆಐ ಡಿವೈ ಚಂದ್ರಚೂಡ್
"ಮೂಲರಚನೆ ಸಿದ್ಧಾಂತದ ಬಗ್ಗೆ ನಾನು ನನ್ನ ತೀರ್ಪಿನ ಮೂಲಕ ಮಾತುನಾಡುತ್ತೇನೆ. ಇಲ್ಲಲ್ಲ..." ಎಂದಷ್ಟೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.
ಫಾಲಿ ನಾರಿಮನ್ ಮಾತನಾಡಿ ಮೂಲರಚನಾ ಸಿದ್ಧಾಂತ ಶಾಶ್ವತವಾಗಿ ಉಳಿಯಲಿದೆ ಎಂದರು. ಈ ಸಿದ್ಧಾಂತವು ಸಂವಿಧಾನದ 368ನೇ ತಿದ್ದುಪಡಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದು ಸಂವಿಧಾನಕ್ಕೆ ಮಾಡುವ ಗಣನೀಯ ತಿದ್ದುಪಡಿಗಳ ಕುರಿತು ಮಾತನಾಡುವ ಏಕೈಕ ವಿಧಿಯಾಗಿದೆ ಎಂದು ಸಮರ್ಥಿಸಿಕೊಂಡರು.
ಸಂವಿಧಾನಕ್ಕೆ ಅನಗತ್ಯ ತಿದ್ದುಪಡಿ ಮಾಡುವುದನ್ನು ತಳ್ಳಿಹಾಕಲು ಮೂಲಭೂತ ರಚನೆಯ ಸಿದ್ಧಾಂತವನ್ನು ಸುಪ್ರೀಂ ಕೋರ್ಟ್ ಅತ್ಯಂತ ಮಿತವಾಗಿ ಬಳಸಿದೆ. ಅದನ್ನು ಸಾಮಾನ್ಯೀಕರಿಸಲಾಗದು. ಉನ್ನತ ನ್ಯಾಯಾಂಗದಲ್ಲಿ ನಂಬಿಕೆ ಇರಿಸಿಕೊಳ್ಳಬೇಕು ಎಂಥದ್ದೇ ತೀರ್ಪು ಬಂದರೂ ಚಿಂತಿಸಬಾರದು ಎಂದು ತಿಳಿಸಿದರು.
ಕೇಶವಾನಂದ ಭಾರತಿ ಪ್ರಕರಣದ ನಂತರ ಕಳೆದ ಐವತ್ತು ವರ್ಷಗಳಲ್ಲಿ ತಿದ್ದುಪಡಿಗಳನ್ನು ಪ್ರಶ್ನಿಸಿ ಮೂಲರಚನಾ ಸಿದ್ಧಾಂತದಡಿ 22 ವರದಿಯಾದ ಪ್ರಕರಣಗಳಿವೆ. ಇವುಗಳಲ್ಲಿ 7 ಪ್ರಕರಣಗಳಲ್ಲಿ ಮಾತ್ರವೇ ಪ್ರಶ್ನಿಸಲಾದ ತಿದ್ದುಪಡಿಗಳನ್ನು ರದ್ದುಪಡಿಸಲಾಗಿದ್ದು, ಉಳಿದ 15 ಪ್ರಕರಣಗಳಲ್ಲಿ ತಿದ್ದುಪಡಿಗಳನ್ನು ಎತ್ತಿಹಿಡಿಯಲಾಗಿದೆ ಎಂದು ಅಂಕಿಅಂಶ ನೀಡಿದರು.
ಸಂಸತ್ತಿನಿಂದಲೇ ಆರಂಭವಾಗಿರುವುದರಿಂದ ಮೂಲಭೂತ ರಚನೆಯ ಸಿದ್ಧಾಂತವು ಸಾಂವಿಧಾನಿಕ ತೀರ್ಪಿನಲ್ಲಿ ದೃಢವಾಗಿ ಸ್ಥಾಪಿತವಾಗಿದೆ ಎಂದರು.
ಮಾಜಿ ಸಿಜೆಐ ದೀಪಕ್ ಮಿಶ್ರಾ ಅವರು ಸಿದ್ಧಾಂತ ದೇಶಕ್ಕೆ ಒಳಿತು ಮಾಡಿದೆ. ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಉಳಿಸಿ ಸ್ಥಿರವಾಗಿರಿಸಿದೆ ಎಂದರು. ಸಂವಿಧಾನದ ಮೂಲರಚನಾ ಸಿದ್ಧಾಂತದ ಸೂಕ್ತತೆಯ ಬಗ್ಗೆ ನಿವೃತ್ತ ಸಿಜೆಐ ಗೊಗೊಯ್ ಪ್ರಶ್ನೆ ಎತ್ತಿದ್ದ ಹಿನ್ನೆಲೆಯಲ್ಲಿ ಇಂತಹ ಆಲೋಚನೆ ದೋಷಪೂರಿತ ಎಂದರು.
ಸಿದ್ಧಾಂತದ ಮೂಲವು ಲೋಪರಹಿತವಾಗಿದೆ ಮತ್ತು ಯಾವುದೇ ವಕೀಲರು ಅದನ್ನು ಅಸ್ಪಷ್ಟ ಎಂದು ಕರೆಯುವುದಿಲ್ಲ ಎಂದು ಹೇಳಿದರು.
ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಮೂಲರಚನಾ ಸಿದ್ಧಾಂತ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದಾಗಿದೆ. ಕ್ರಿಮಿನಲ್ ನ್ಯಾಯಾಡಳಿತ ರಾಷ್ಟ್ರೀಯ ಸಂಸ್ಥೆಯ ರಚನೆಯಾಗಬೇಕು. ದುರ್ಬಲ ವರ್ಗಗಳಿಗೆ ನ್ಯಾಯ ಸಿಗದಿದ್ದರೆ ಆ ನ್ಯಾಯ ತನ್ನ ಅರ್ಥ ಕಳೆದುಕೊಳ್ಳುತ್ತದೆ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಪ್ರತಿಪಾದಿಸಿದರು.
ಶ್ಯಾಮ್ ದಿವಾನ್ ಮಾತನಾಡಿ, ಸಂವಿಧಾನದಲ್ಲಿನ ಕೆಲವು ವಿಷಯಗಳನ್ನು ಬದಲಾಯಿಸಲಾಗುವುದಿಲ್ಲ ಅಥವಾ ಅವು ಬದಲಾಗುವುದಿಲ್ಲ. ನಮ್ಮ ಪ್ರಜಾಪ್ರಭುತ್ವವನ್ನು ಸಂರಕ್ಷಿಸಬೇಕಾದರೆ ಮೂಲಭೂತ ರಚನಾ ಸಿದ್ಧಾಂತ ಉಳಿಯಬೇಕು. ಬಾಂಗ್ಲಾದೇಶ, ಕೀನ್ಯಾ, ಉಗಾಂಡಾ, ಮಲೇಷ್ಯಾ ಮತ್ತು ಪಾಕಿಸ್ತಾನದಂತಹ ಅನೇಕ ವಿದೇಶಗಳಲ್ಲಿ ಈ ಸಿದ್ಧಾಂತವು ಅನುರಣನವನ್ನು ಕಂಡುಕೊಂಡಿದೆ ಎಂದು ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್ ತಿಳಿಸಿದರು.
“ಹಾಸ್ಯ ಕಲಾವಿದರಿಗೆ, ಪತ್ರಕರ್ತರಿಗೆ, , ವ್ಯಂಗ್ಯಚಿತ್ರಕಾರರಿಗೆ, ವಿದ್ವಾಂಸರಿಗೆ ಜಾಗವಿಲ್ಲ ಎಂಬ ಸ್ಥಿತಿ ಸಹಿಸಲಸಾಧ್ಯ. ಆದ್ದರಿಂದ ಮೂಲಭೂತ ರಚನಾ ಸಿದ್ಧಾಂತ ಸ್ವಲ್ಪ ಸಮಯದವರೆಗಾದರೂ ಪ್ರಜಾಪ್ರಭುತ್ವದ ರಕ್ಷಣೆಗೆ ಭರವಸೆ ನೀಡಿದ್ದು ಅದರ ಸ್ಥಳಾವಕಾಶ ಕುಗ್ಗದಂತೆ ನೋಡಿಕೊಳ್ಳಬೇಕು” ಎಂದು ಅವರು ಹೇಳಿದರು.
ಎಸ್ ಗುರುಮೂರ್ತಿ
ಮೂಲರಚನಾ ಸಿದ್ಧಾಂತದ ಕುರಿತು ತಮ್ಮ ನಿಲುವು ಭಿನ್ನವಾಗಿದ್ದು ಸಿದ್ಧಾಂತವನ್ನು ಮರುಪರಿಶೀಲಿಸಬೇಕು ಎಂದು ತುಘ್ಲಕ್ ವಾರಪತ್ರಿಕೆಯ ಸಂಪಾದಕ ಗುರುಮೂರ್ತಿ ಹೇಳಿದರು. ಸಂವಿಧಾನದ ಭಾಗ-III ಅನ್ನು ತಿದ್ದುಪಡಿ ಮಾಡಲಾಗದೇ ಇರುವ ಪೆಡಸುತನದಿಂದಾಗಿ ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಲಾಗದ ಸ್ಥಿತಿ ತಲುಪಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಅವರು ಮಾತನಾಡಿ, ಸಿದ್ಧಾಂತದ ಬಗ್ಗೆ ಚರ್ಚೆಯಾಗಬೇಕು ಎಂದರು. ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಉಪಸ್ಥಿತರಿದ್ದರು. ಕಾನೂನು ಪತ್ರಿಕೋದ್ಯಮಕ್ಕೆʼಬಾರ್ & ಬೆಂಚ್ʼ ಜಾಲತಾಣ ನೀಡಿದ ಕೊಡುಗೆ ಪರಿಗಣಿಸಿ ಸಮಾರಂಭದಲ್ಲಿ ಜಾಲತಾಣಕ್ಕೆ ರಾಮ್ ಜೇಠ್ಮಲಾನಿ ಪ್ರಶಸ್ತಿ ನೀಡಲಾಯಿತು.