'ಮಲ ಹೊರುವ ಪದ್ಧತಿ ನಿಂತಿದೆಯೇ?' ಬೆಂಗಳೂರು ಸಹಿತ ಆರು ಮೆಟ್ರೋ ನಗರಗಳಿಗೆ ವರದಿ ಸಲ್ಲಿಸಲು ಆದೇಶಿಸಿದ ಸುಪ್ರೀಂ

ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಮಲ ಹೊರುವುದು ಮತ್ತು ಮನುಷ್ಯರು ಚರಂಡಿಗಳನ್ನು ಸ್ವಚ್ಛಗೊಳಿಸುವಂತಹ ಪ್ರವೃತ್ತಿಯನ್ನು ನಿಲ್ಲಿಸುವ ಉದ್ದೇಶವನ್ನು ನ್ಯಾಯಾಲಯ ಹೊಂದಿದೆ ಎಂದ ಸುಪ್ರೀಂ ಕೋರ್ಟ್.‌
Manual Scavenging
Manual Scavenging
Published on

ಬೆಂಗಳೂರು ಸೇರಿದಂತೆ ದೇಶದ ಆರು ಪ್ರಮುಖ ಮೆಟ್ರೊಪಾಲಿಟನ್‌ ನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಮತ್ತು ಹೈದರಾಬಾದ್‌ಗಳಲ್ಲಿ ಮಲ ಹೊರುವ ಪದ್ಧತಿ ಮತ್ತು ಮನುಷ್ಯರು ಮಲದ ಗುಂಡಿ, ಚರಂಡಿಗಳನ್ನು ಸ್ವಚ್ಛಗೊಳಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ಉದ್ದೇಶವನ್ನು ತಾನು ಹೊಂದಿರುವುದಾಗಿ ಸುಪ್ರೀಂ ಕೋರ್ಟ್‌ ಈಚೆಗೆ ಹೇಳಿದೆ.

ಯಾವಾಗ ಮತ್ತು ಹೇಗೆ ಮಲ ಹೊರುವ ಮತ್ತು ಮನುಷ್ಯರು ಚರಂಡಿ, ಮಲದ ಗುಂಡಿ ಸ್ವಚ್ಛಗೊಳಿಸುವುದನ್ನು ನಿರ್ಮೂಲನೆ ಮಾಡಲಾಗುತ್ತದೆ ಎಂಬುದನ್ನು ವಿಸ್ತೃತವಾಗಿ ವಿವರಿಸಿ ಫೆಬ್ರವರಿ 13ರ ಒಳಗೆ ಅಫಿಡವಿಟ್‌ ಸಲ್ಲಿಸಬೇಕು. ಇದರ ಪ್ರತಿಯನ್ನು ಕೇಂದ್ರ ಸರ್ಕಾರ ಮತ್ತು ಅಮಿಕಸ್‌ ಕ್ಯೂರಿಗೂ ಹಂಚಬೇಕು ಎಂದು ಆರು ಮೆಟ್ರೊ ನಗರಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅರವಿಂದ್‌ ಕುಮಾರ್‌ ವಿಭಾಗೀಯ ಪೀಠ ನಿರ್ದೇಶಿಸಿದೆ.

ಭಾರತದಲ್ಲಿ ಮಲ ಹೊರುವ ಪದ್ಧತಿ ತೊಲಗಿಸುವ ಸಂಬಂಧ ಸುಪ್ರೀಂ ಕೋರ್ಟ್‌ 2023ರ ಅಕ್ಟೋಬರ್‌ನಲ್ಲಿ 14 ನಿರ್ದೇಶನಗಳನ್ನು ನೀಡಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಲ ಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ತೊಲಗಿಸುವ ಕೆಲಸ ಮಾಡಬೇಕು ಎಂದೂ ನ್ಯಾಯಾಲಯ ಹೇಳಿತ್ತು.

2024ರ ಡಿಸೆಂಬರ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಎಷ್ಟರಮಟ್ಟಿಗೆ ಮಲ ಹೊರುವ ಮತ್ತು ಮನುಷ್ಯರೇ ಚರಂಡಿ, ಮಲದ ಗುಂಡಿ ಸ್ವಚ್ಛಗೊಳಿಸುವ ಪದ್ಧತಿಯನ್ನು ನಿಷೇಧಿಸಲಾಗಿದೆ ಎಂಬುದರ ಸಂಬಂಧ ವರದಿ ಪಡೆಯಲು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು ಪ್ರತಿ ರಾಜ್ಯದ ಮಾಹಿತಿ ಉಲ್ಲೇಖಿಸಿ ಅಫಿಡವಿಟ್‌ ಸಲ್ಲಿಸುವಂತೆ ಭಾರತ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು.

Also Read
ಮಲ ಹೊರುವ ಪದ್ಧತಿ ಜೀವಂತ: "ಇಂತಹ ಪ್ರಕರಣದಲ್ಲಿ ಯಾರೊಬ್ಬರಿಗೂ ಶಿಕ್ಷೆ ಆಗಿಲ್ಲ ಏಕೆ?" ಹೈಕೋರ್ಟ್‌ ಕಿಡಿ

ದೇಶಾದ್ಯಂತ 775 ಜಿಲ್ಲೆಗಳ ಪೈಕಿ 456 ಜಿಲ್ಲೆಗಳಲ್ಲಿ ಮಲ ಹೊರುವುದು ಮತ್ತು ಮನುಷ್ಯರು ಮಲದ ಗುಂಡಿ ಸ್ವಚ್ಛತೆ ನಡೆಸುತ್ತಿಲ್ಲ ಎಂದು ವಿಸ್ತೃತ ಅನುಪಾಲನಾ ವರದಿಯಲ್ಲಿ ಕೇಂದ್ರ ಸರ್ಕಾರ ವಿವರಿಸಿದೆ. ಜನವರಿ 29ರಂದು ಅರ್ಜಿ ವಿಚಾರಣೆ ನಡೆಸಿದ ಪೀಠವು ಮೆಟ್ರೊಪಾಲಿಟನ್‌ ನಗರಗಳಲ್ಲಿ ಮಲದ ಗುಂಡಿ ಸ್ವಚ್ಛತೆ ಸಂಪೂರ್ಣವಾಗಿ ತೊಲಗಿಸಲಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಹೇಳಿದೆ.

ಈ ನೆಲೆಯಲ್ಲಿ ದೇಶದ ಆರು ಮೆಟ್ರೊಪಾಲಿಟನ್‌ ನಗರಗಳಲ್ಲಿ ಮನುಷ್ಯರು ಮಲದ ಗುಂಡಿ ಸ್ವಚ್ಛತೆ ಮಾಡುವುದನ್ನು ನಿಲ್ಲಿಸುವ ಉದ್ದೇಶ ಹೊಂದಿರುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ. “ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ ನಗರಗಳಲ್ಲಿ ಮಲ ಹೊರುವುದು ಮತ್ತು ಮನುಷ್ಯರು ಮಲದ ಗುಂಡಿ, ಚರಂಡಿ ಸ್ವಚ್ಛಗೊಳಿಸುವುದನ್ನು ನಿಲ್ಲಿಸುವ ಉದ್ದೇಶವನ್ನು ನ್ಯಾಯಾಲಯ ಹೊಂದಿದೆ. ಮನುಷ್ಯರನ್ನು ಬಳಕೆ ಮಾಡದೇ ಆಧುನಿಕ ವೈಜ್ಞಾನಿಕ ಯಂತ್ರ ಮತ್ತು ಸಾಧನಗಳನ್ನು ಬಳಸಿ ಮಲದ ಗುಂಡಿ ಸ್ವಚ್ಛಗೊಳಿಸಬಹುದಾಗಿದೆ ಎಂದು ವಾದಿಸಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.  

Kannada Bar & Bench
kannada.barandbench.com