ಮಲ ಹೊರುವ ಪದ್ಧತಿ ಜೀವಂತ: "ಇಂತಹ ಪ್ರಕರಣದಲ್ಲಿ ಯಾರೊಬ್ಬರಿಗೂ ಶಿಕ್ಷೆ ಆಗಿಲ್ಲ ಏಕೆ?" ಹೈಕೋರ್ಟ್‌ ಕಿಡಿ

“ಇದೆಂಥಾ ನ್ಯಾಯದ ವಿಡಂಬನೆ. ನಾವು ಪರಿಹಾರದ ವಿಚಾರ ಮಾತನಾಡುತ್ತಿಲ್ಲ. ಇದುವರೆಗೂ ಒಂದೇ ಒಂದು ಪ್ರಕರಣದಲ್ಲಿ ಶಿಕ್ಷೆ ಆಗಿಲ್ಲವೇಕೆ?” ಎಂದು ಪ್ರಶ್ನಿಸಿದ ಪೀಠ.
Chief Justice P B Varale and Justice Krishna Dixit
Chief Justice P B Varale and Justice Krishna Dixit
Published on

"ಮಲ ಹೊರುವ ಪದ್ಧತಿಯನ್ನು ಜೀವಂತವಾಗಿಟ್ಟಿದ್ದರೂ ಯಾರೊಬ್ಬರಿಗೂ ಶಿಕ್ಷೆಯಾಗಿಲ್ಲ ಏಕೆ? ಇದೊಂದು ರೀತಿಯಲ್ಲಿ ನ್ಯಾಯದ ವಿಡಂಬನೆ" ಎಂದು ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ ಕಿಡಿಕಾರಿತು.

ಮಲ ಹೊರುವುದಕ್ಕೆ ನಿಷೇಧ ಇದ್ದರೂ ಅದನ್ನು ಚಾಲ್ತಿಯಲ್ಲಿಟ್ಟಿರುವ ಕುರಿತು ಮಾಧ್ಯಮ ವರದಿಯ ಆಧರಿಸಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಮೂರ್ತಿ ದೀಕ್ಷಿತ್‌ ಅವರು “ಮಲ ಹೊರುವ ಪದ್ಧತಿ ನಿಷೇಧಿಸಿ 2013ರಲ್ಲಿ ಕಾಯಿದೆ ತಂದರೂ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳದ ಸರ್ಕಾರದ ವಕೀಲರು, ಸರ್ಕಾರಿ ಅಭಿಯೋಜಕರ ವಿರುದ್ದ ಯಾವ ಕ್ರಮಕೈಗೊಂಡಿದ್ದೀರಿ? ಮಹತ್ವ ಇಲ್ಲದ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತದೆ. ಇಂಥ ಪ್ರಕರಣದಲ್ಲಿ ಕ್ರಮ ಎಲ್ಲಿದೆ? ಇಂಥ ಪ್ರಕರಣ ನಡೆಸಿದ ಕಳಪೆ ಸರ್ಕಾರಿ ಅಭಿಯೋಜಕರ ವಿರುದ್ದ ಯಾವ ಕ್ರಮಕೈಗೊಳ್ಳಲಾಗಿದೆ? ಇಲ್ಲಿ ಶೂನ್ಯ ಶಿಕ್ಷೆ ಪ್ರಮಾಣ ಹೇಗೆ?.. ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ ಏಕೆ? ಇದಕ್ಕೆ ಪರಿಹಾರ ಏನು? ಏನು ಕ್ರಮವಾಗಿದೆ?.. ಇದೆಂಥ ನ್ಯಾಯದ ವಿಡಂಬನೆ… ನಾವು ಪರಿಹಾರದ ಬಗ್ಗೆ ಮಾತನಾಡುತ್ತಿಲ್ಲ. ಒಂದೇ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ ಏಕೆ? ನಿಮ್ಮ ಚೌಕಟ್ಟು ಹೇಗಿದೆ? ಇದೆಲ್ಲವನ್ನೂ ನೀವು (ಸರ್ಕಾರ) ಹೇಗೆ ಮಾಡುತ್ತೀರಿ? ನಾವು ಮಾಡುತ್ತಿರುವುದನ್ನು ನೋಡಿದರೆ ಸಂವಿಧಾನದ ನಿರ್ಮಾತೃಗಳು ಗೋರಿಗಳಲ್ಲಿಯೇ ನಡುಗುತ್ತಿರಬಹುದು” ಎಂದು ಮಾರ್ಮಿಕವಾಗಿ ನುಡಿದರು.

ಮುಂದುವರಿದು, “ಎಲ್ಲದಕ್ಕೂ ನ್ಯಾಯಾಲಯವೇ ಏಕೆ ಮುಂದಾಗಬೇಕು? ನ್ಯಾಯಾಲಯ ಸ್ಥಾಪನೆಯ ಉದ್ದೇಶ ಇದಲ್ಲ. ಇದನ್ನು ನಾವು ಮಾಡಿದರೆ ನ್ಯಾಯಾಲಯ ಅಂಕೆ ಮೀರಿದೆ ಎನ್ನುತ್ತೀರಿ… ನಾವು ನಿರ್ದೇಶನವನ್ನು ಏಕೆ ನೀಡಬೇಕು? ಇದು ನಿಮ್ಮಿಂದ (ಸರ್ಕಾರ) ಏಕೆ ಆಗುವುದಿಲ್ಲ?” ಎಂದು ಕಿಡಿಕಾರಿದರು. “ಸರ್ಕಾರದ ಕಾರ್ಯದರ್ಶಿಗೆ ಶಿಕ್ಷೆ ವಿಧಿಸದಿದ್ದರೆ ಏನೂ ಸುಧಾರಣೆಯಾಗುವುದಿಲ್ಲ” ಎಂದು ಅತೃಪ್ತಿ ದಾಖಲಿಸಿದರು.

ಮಲ ಹೊರುವುದಕ್ಕೆ ಪರಿಶಿಷ್ಟ ಜಾತಿಯ ಜನರನ್ನು ಬಳಕೆ ಮಾಡಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಅವಕಾಶವಿದ್ದರೂ ಅದನ್ನು ಬಳಕೆ ಮಾಡದಿರುವುದಕ್ಕೆ ನ್ಯಾಯಾಲಯ ಆಕ್ಷೇಪಿಸಿತು. ಈ ವಿಚಾರದ ಕುರಿತು ಅಮಿಕಸ್‌ ಕ್ಯೂರಿ ಶ್ರೀಧರ್‌ ಪ್ರಭು ನ್ಯಾಯಾಲಯದ ಗಮನಸೆಳೆದರು.

2023ರ ಡಿಸೆಂಬರ್‌ 23ರಂದು ಮಲಗುಂಡಿ ಸ್ವಚ್ಛಗೊಳಿಸುವಾಗ ಕಾರ್ಮಿಕರು ಮೃತಪಟ್ಟ ಪ್ರಕರಣದಲ್ಲಿ ಆರೋಪಿತರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯಿದೆಯ ಸೆಕ್ಷನ್‌ 3(ಜೆ) ಅನ್ವಯಿಸಲಾಗಿಲ್ಲ. ಈ ವಿಚಾರದ ಕುರಿತು ಸಂಬಂಧಪಟ್ಟವರು ಗಮನಹರಿಸಬೇಕು ಎಂದು ನ್ಯಾಯಾಲಯ ಹೇಳಿತು.

ಅಮಿಕಸ್‌ ಶ್ರೀಧರ್‌ ಪ್ರಭು ಅವರು ಮಲ ಹೊರುವ ಪದ್ಧತಿಯಲ್ಲಿ ತೊಡಗಿರುವವರಿಗೆ ಪುನರ್ವಸತಿ ಕಲ್ಪಿಸುವುದರ ಜೊತೆಗೆ ಸರ್ಕಾರವು ಮಲ ಸ್ವಚ್ಛತೆ/ಹೊರುವುದಕ್ಕೆ ತಂತ್ರಜ್ಞಾನ ಬಳಕೆ ಮಾಡಬೇಕು ಎಂದರು.

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಂತಹಂತವಾಗಿ ಮಲ ಸ್ವಚ್ಛತೆಗೆ ಯಂತ್ರಗಳ ಖರೀದಿ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ” ಎಂದರು.

Also Read
ಕಾರ್ಮಿಕರಿಂದ ಮಲಗುಂಡಿ ಸ್ವಚ್ಛತೆ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ಹೈಕೋರ್ಟ್‌ ನಿರ್ದೇಶನ

ಆಗ ಸಿಜೆ ಅವರು “ಇದಕ್ಕೆ ದೊಡ್ಡ ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ನಿಧಿ ಬಳಕೆ ಮಾಡಬಹುದು. ಯಾಂತ್ರಿಕ ವ್ಯವಸ್ಥೆಗೆ ಜೋತು ಬೀಳುವ ಅಥವಾ ಸರ್ಕಾರಿ ಆಡಳಿತದಲ್ಲಿನ ಮಂದಗತಿಗೆ ಆಸ್ಪದ ನೀಡಬಾರದು” ಎಂದಿದೆ.

ರಾಜ್ಯದ ಕೆಲವು ಕಡೆ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯನ್ನು ಇದೇ ಪ್ರಕರಣದ ಜೊತೆ ಸೇರ್ಪಡೆ ಮಾಡಲು ನ್ಯಾಯಾಲಯ ಆದೇಶಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿಸ್ತೃತ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದೆ. ವಿಚಾರಣೆಯನ್ನು ಜನವರಿ 30ಕ್ಕೆ ಮುಂದೂಡಲಾಗಿದೆ.

Kannada Bar & Bench
kannada.barandbench.com