Preetham J. Gowda and Karnataka HC
Preetham J. Gowda and Karnataka HC

ಹಾಸನ ಪೆನ್‌ಡ್ರೈವ್‌ ಹಂಚಿಕೆ ಪ್ರಕರಣ: ಬಿಜೆಪಿ ಮಾಜಿ ಶಾಸಕ ಪ್ರೀತಮ್‌ ಗೌಡ ಬಂಧಿಸದಂತೆ ಆದೇಶಿಸಿದ ಹೈಕೋರ್ಟ್‌

ಚಿತ್ರ/ವಿಡಿಯೊ ವೈರಲ್‌ ಮಾಡಿರುವುದೇ ಮಹಾನ್‌ ಅಪರಾಧ. ಅರ್ಜಿದಾರ ಪ್ರೀತಮ್‌ ಗೌಡ ಮಾಡಿಲ್ಲ ಎಂದರೆ ಕ್ರಮಕೈಗೊಳ್ಳಬೇಕು ಎಂದು ಸಂತ್ರಸ್ತೆ ಏಕೆ ಹೇಳುತ್ತಾರೆ? ಎಂದು ಹಿರಿಯ ವಕೀಲ ಸಿ ವಿ ನಾಗೇಶ್‌ ಅವರನ್ನು ಪ್ರಶ್ನಿಸಿದ ಪೀಠ.
Published on

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್‌ಗಳನ್ನು ಹಂಚಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಪ್ರೀತಮ್‌ ಗೌಡ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಬಾರದು. ಆದರೆ, ಪ್ರೀತಮ್‌ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಶುಕ್ರವಾರ ಆದೇಶಿಸಿದೆ.

ಪ್ರೀತಮ್‌ ಗೌಡರ ಅರ್ಜಿಯ ತುರ್ತು ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು “ಎಸ್‌ಐಟಿಯ ತನಿಖೆ ನಡೆಸಬಹುದು. ಆದರೆ, ಅರ್ಜಿದಾರ ಪ್ರೀತಮ್‌ ಗೌಡ ತನಿಖೆಗೆ ಸಹಕರಿಸದ ಹೊರತು ಅವರನ್ನು ಬಂಧಿಸಬಾರದು. ಈ ಆದೇಶವು ಯಾವುದೇ ತೆರನಾದ ದಾಖಲೆ ವಶಕ್ಕೆ ಪಡೆಯುವುದಕ್ಕೆ ವಿರುದ್ದ ಇರುವುದಿಲ್ಲ. ಅರ್ಜಿದಾರರು ಬೆಳಿಗ್ಗೆ 7 ರಿಂದ ರಾ.9ರವರೆಗೆ ತನಿಖಾಧಿಕಾರಿ ಸೂಚಿಸಿದಾಗ ವಿಚಾರಣೆಗೆ ಹಾಜರಾಗಬೇಕು” ಎಂದು ಆದೇಶಿಸಿದೆ.

“ಪೊಲೀಸರು ತನಿಖೆಯಲ್ಲಿ ಸ್ವಲ್ಪ ತಾಳ್ಮೆ ವಹಿಸಬೇಕು. ಆದರೆ, ಬಂಧಿಸಬಾರದು. ಬೆಳಿಗ್ಗೆಯಿಂದ ರಾ. 9 ಗಂಟೆ ತನಕ ಬೇಕಾದರೆ ವಿಚಾರಣೆಗೆ ಪ್ರೀತಮ್‌ ಅವರನ್ನು ಇಟ್ಟುಕೊಳ್ಳಬಹುದು. ಆದರೆ, ಎಲ್ಲರನ್ನೂ ಏಕೆ ಬಂಧಿಸುತ್ತೀರಿ? ಪೊಲೀಸ್‌ ರಾಜ್ಯ ಮಾಡಬೇಕು ಎಂದು ಕೊಂಡಿದ್ದೀರಾ?” ಎಂದು ಎಸ್‌ಐಟಿಯನ್ನು ಪೀಠವು ಮೌಖಿಕವಾಗಿ ಪ್ರಶ್ನಿಸಿತು.

ಈ ಮಧ್ಯೆ, ಎಸ್‌ಐಟಿ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು “ಪರಿಕರಗಳನ್ನು ವಶಕ್ಕೆ ಪಡೆಯಬೇಕಿದೆ. ತನಿಖೆಯಲ್ಲಿ ಪ್ರತಿಯೊಂದರಲ್ಲೂ ನೀವು (ನ್ಯಾಯಾಲಯ) ಮಧ್ಯಪ್ರವೇಶಿಸಿದರೆ ತನಿಖೆ ನಡೆಸುವುದಾದರೂ ಹೇಗೆ?” ಎಂದರು.

ಆಗ ಪೀಠವು “ಎಲ್ಲರನ್ನೂ ಜೈಲಿಗೆ ಹಾಕಲು ಒಪ್ಪಲಾಗದು. ಎಸ್‌ಪಿಪಿ ಅವರ ವೇದನೆಯನ್ನು ನ್ಯಾಯಾಲಯ ಪರಿಗಣಿಸಿದೆ” ಎಂದು ದಾಖಲಿಸಿದರು.

ಇದಕ್ಕೂ ಮುನ್ನ, ಅರ್ಜಿದಾರರ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಪ್ರೀತಮ್‌ ವಿಡಿಯೋ ಹಂಚಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ ಎಂದು ಪ್ರಕರಣ ದಾಖಲಿಸುವುದು ದುಷ್ಟ ಕ್ರಮ. ಪ್ರೀತಮ್‌ ಏನು ಮಾಡಿದ್ದಾರೆ. ಯಾವ ಆರೋಪದ ಮೇಲೆ ಪ್ರೀತಮ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ? ಐಪಿಸಿ ಸೆಕ್ಷನ್‌ಗಳಾದ 354ಎ, 354ಡಿ, 354ಸಿ ಮತ್ತು 506 ಅನ್ವಯಿಸಲಾಗಿದೆ. ಇಲ್ಲಿ ಅಪರಾಧವೇ ಇಲ್ಲ. ಎಲ್ಲವನ್ನು ತಿರುವು ಮುರುವು ಮಾಡಲಾಗಿದೆ.‌ ಪ್ರೀತಮ್‌ ಏನು ಮಾಡಿದ್ದಾರೆ ಎಂಬುದನ್ನು ಎಸ್‌ಐಟಿ ಹೇಳಬೇಕು” ಎಂದರು.

ಮುಂದುವರಿದು, “ಸರ್ಕಾರದವರೇ ಮೂರು ಲಕ್ಷ ಪೆನ್‌ಡ್ರೈವ್‌ಗಳನ್ನು ಹಾಸನ ಮತ್ತು ಮಂಡ್ಯ ಜಿಲ್ಲೆಯಲ್ಲಿ ಹಂಚಿಕೆ ಮಾಡಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸುತ್ತಾರೆಯೇ? ದೂರು ನೀಡಿದರೆ ಪ್ರಕರಣ ದಾಖಲಿಸುವರೇ? 354ಎ, 354ಡಿ, 354ಸಿ ಜಾಮೀನುರಹಿತ ಪ್ರಕರಣವಾಗಿದ್ದು, ಅದಕ್ಕೆ ರಕ್ಷಣೆ ನೀಡಬೇಕು. ಪ್ರೀತಮ್‌ ಅವರನ್ನು ವಿಚಾರಣೆಗೆ ಕರೆದರೆ ಹೋಗುತ್ತಾರೆ. ಅದಕ್ಕೆ ಬೇಕಿದ್ದರೆ ಷರತ್ತು ವಿಧಿಸಿಬಹುದು. ಇದು ರಾಜಕೀಯ ಪ್ರತೀಕಾರದ ಕ್ರಮ” ಎಂದು ಆಕ್ಷೇಪಿಸಿದು.

ರಾಜ್ಯ ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮ ಕುಮಾರ್‌ ಅವರು “ನಮಗೆ ಈಗ ನೋಟಿಸ್‌ ನೀಡಲಾಗಿದೆ. ಈಗ ಅರ್ಜಿ ಸಲ್ಲಿಸಿ, ಪ್ರತಿ ಕೊಡಲಾಗಿದೆ. 20 ದಿನಗಳ ಹಿಂದೆ ಎಫ್‌ಐಆರ್‌ ದಾಖಲಿಸಲಾಗಿದೆ. ನಮಗೆ ಯಾವುದೇ ಸೂಚನೆ ಇಲ್ಲ. ನ್ಯಾಯಾಲಯವು ಏಕಪಕ್ಷೀಯ ಆದೇಶ ಮಾಡಬೇಕು ಎಂದಾದರೆ ಅದನ್ನು ಮಾಡಬಹುದು. ಅರ್ಜಿದಾರರ ನಡತೆಯನ್ನು ನೋಡಿ. ವಿಡಿಯೋ ಹಂಚಿಕೆಯಾಗಿದೆ ಎಂಬ ವಿಚಾರವನ್ನು ನ್ಯಾಯಾಲಯ ಪರಿಗಣಿಸಬೇಕು. ವಿಡಿಯೊ ಹಂಚಿಕೆ ಮಾಡುವುದೇ ಹೀನಕೃತ್ಯ. ಸಂತ್ರಸ್ತೆ ಮತ್ತು ಇತರರ ಬದುಕು ನಾಶ ಮಾಡಬೇಕೆಂದೇ ಕಿರಣ್‌, ಶರತ್‌ ಮತ್ತು ಪ್ರೀತಂಗೌಡ ಅವರು ನಗ್ನ ಫೋಟೊ ಮತ್ತು ವಿಡಿಯೊಗಳನ್ನು ವೈರಲ್‌ ಮಾಡಿ ಅಪರಾಧ ಎಸಗಿದ್ದಾರೆ. ಕುಟುಂಬದ ಮಾನ ಹರಾಜಿಗೆ ಕಾರಣರಾಗಿದ್ದಾರೆ. ಇದು ಐಟಿ ಕಾಯಿದೆ ಅಡಿ ಅಪರಾಧವಾಗಿದೆ. ಗಂಭೀರವಾದ ನೇರ ಆರೋಪ ಮಾಡಲಾಗಿದೆ. ಪ್ರಮುಖ ಆರೋಪಿ ಪ್ರಜ್ವಲ್‌ ರೇವಣ್ಣ ಕಸ್ಟಡಿಯಲ್ಲಿದ್ದಾರೆ. ರಾಜಕೀಯ ದುರುದ್ದೇಶವೇ ಆಗಿದ್ದರೆ ಮತದಾನವಾಗುವರೆಗೆ ಕಾಯುತ್ತಿರಲಿಲ್ಲ. ಪ್ರಜ್ವಲ್‌ ರೇವಣ್ಣ ದೇಶ ಬಿಡುವರೆಗೆ ಸುಮ್ಮನೆ ಇರುತ್ತಿರಲಿಲ್ಲ. ಆರೋಪ ಮಾಡುವುದಕ್ಕೂ ಒಂದು ಮಿತಿಯಿದೆ” ಎಂದು ತಿರುಗೇಟು ನೀಡಿದರು.

Also Read
ಪ್ರಜ್ವಲ್‌ ಲೈಂಗಿಕ ಹಗರಣ: ಕಾರ್ತಿಕ್‌ ಸೇರಿ ನಾಲ್ವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹಾಸನ ನ್ಯಾಯಾಲಯ

ಈ ಮಧ್ಯೆ, ಪೀಠವು “ಪ್ರೀತಮ್‌ ವಿರುದ್ಧ ದುರುದ್ದೇಶದ ಕ್ರಮಕೈಗೊಳ್ಳಬೇಡಿ. ನಾವು ಪತ್ರಿಕಾ ವರದಿಗಳ ಪ್ರಕಾರ ಅಥವಾ ಜನರು ಏನು ಹೇಳುತ್ತಾರೆ ಎನ್ನುವುದರ ಮೇಲೆ ಹೋಗುವುದಿಲ್ಲ. ದಾಖಲೆ ಆಧರಿಸಿ ಪ್ರಕರಣ ನಿರ್ಧರಿಸಬೇಕಾಗುತ್ತದೆ. ಇಲ್ಲವಾದಲ್ಲಿ ನಾಳೆ ಯಾರ ಸ್ವಾತಂತ್ರ್ಯವೂ ರಕ್ಷಣೆಯಾಗುವುದಿಲ್ಲ. ಭಾವನೆಗಳಿಂದ ಪ್ರಕರಣ ನಿರ್ಧರಿಸಲಾಗದು. ಏನೇ ಆದರೂ ಇದರ ತನಿಖೆ ಅಗತ್ಯವಾಗಿದೆ. ಈ ದೇಶದಲ್ಲಿ ಯಾವ ಮಹಿಳೆ ತನಗೆ ಹೀಗಾಗಿದೆ ಎಂದು ಹೇಳಿಕೊಳ್ಳುತ್ತಾರೆ? ಚಿತ್ರ/ವಿಡಿಯೊ ವೈರಲ್‌ ಮಾಡಿರುವುದೇ ಮಹಾನ್‌ ಅಪರಾಧ. ಅರ್ಜಿದಾರರು ಮಾಡಿಲ್ಲ ಎಂದರೆ ಕ್ರಮಕೈಗೊಳ್ಳಬೇಕು ಎಂದು ಸಂತ್ರಸ್ತೆ ಏಕೆ ಹೇಳುತ್ತಾರೆ?” ಎಂದಿತು.

ಅಲ್ಲದೇ, “ಎಫ್‌ಐಆರ್‌ ಎಂಬುದು ಮೂಳೆಗಳ ದಾಖಲೆ. ಅದಕ್ಕೆ ತನಿಖೆಯ ಮೂಲಕ ರಕ್ತ ಮತ್ತು ಮಾಂಸ ಖಂಡ ಸೇರಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕೊಲೆ ಪ್ರಕರಣವಾದರೂ ಜಾಮೀನು ನೀಡಬಹುದಿತ್ತು. ಇದು ನಮ್ಮ ಮಹಿಳೆಯರ, ಮಾನ, ಮರ್ಯಾದೆ ಮತ್ತು ಜೀವಕ್ಕೆ ಸಂಬಂಧಿಸಿದ ವಿಷಯ. ಹಾಗಾದರೆ ಸಂತ್ರಸ್ತ ಮಹಿಳೆ ಸುಳ್ಳು ಏಕೆ ಹೇಳುತ್ತಾರೆ? ಇದು ಜಾಮೀನಿಗೆ ಹೇಳಿ ಮಾಡಿಸಿದ ಪ್ರಕರಣ. ಆದರೆ, ತಡೆ ನೀಡಲಾಗದು” ಎಂದು ಮೌಖಿಕವಾಗಿ ನ್ಯಾಯಾಲಯ ಹೇಳಿತು.

Kannada Bar & Bench
kannada.barandbench.com