ಡಿ ಕೆ ಶಿವಕುಮಾರ್ ಅಕ್ರಮ ಆಸ್ತಿ ಪ್ರಕರಣ: ಸಿಬಿಐ ತನಿಖೆ ಶಿಫಾರಸ್ಸಿಗೆ ಆಕ್ಷೇಪ, ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ದೆಹಲಿ ಪೊಲೀಸ್‌ ಸ್ಥಾಪನಾ ಕಾಯಿದೆ–1947ರ ಸೆಕ್ಷನ್‌ 6ರ ಅಡಿಯಲ್ಲಿ ತನಿಖೆಗೆ ನೀಡಲಾದ ಒಪ್ಪಿಗೆಯ ಕಾರಣಗಳನ್ನು ಸಿಬಿಐ ವಿವರಿಸುವ ಅಗತ್ಯವೇ ಇಲ್ಲ ಎಂದು ವಾದಿಸಿದ ಸಿಬಿಐ ಪರ ವಕೀಲರು.
D K Shivakumar, CBI and Karnataka HC
D K Shivakumar, CBI and Karnataka HC

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಶಿಫಾರಸ್ಸು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಸೋಮವಾರ ಆದೇಶ ಕಾಯ್ದಿರಿಸಿದೆ.

ಡಿ ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಸಿಬಿಐ ಪರ ವಕೀಲ ಪಿ ಪ್ರಸನ್ನಕುಮಾರ್ ಅವರು ಇಂಥದ್ದೇ ತನಿಖಾ ಸಂಸ್ಥೆ ತನಿಖೆ ನಡೆಸಬೇಕು ಎಂದು ಹೇಳುವುದು ಅಥವಾ ಇಂಥದ್ದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸುವ ಹಕ್ಕನ್ನು ಆರೋಪಿ ಹೊಂದಿಲ್ಲ. ವಿಶೇಷ ಅಧಿನಿಯಮವಾದ, ದೆಹಲಿ ಪೊಲೀಸ್‌ ಸ್ಥಾಪನಾ ಕಾಯಿದೆ–1947ರ ಸೆಕ್ಷನ್‌ 6ರ ಅಡಿಯಲ್ಲಿ ತನಿಖೆಗೆ ನೀಡಲಾದ ಒಪ್ಪಿಗೆಯ ಕಾರಣಗಳನ್ನು ಸಿಬಿಐ ವಿವರಿಸುವ ಅಗತ್ಯವೇ ಇಲ್ಲ ಎಂದರು.

ಈಗಾಗಲೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಇಂತಹುದೇ ಮೇಲ್ಮನವಿಯನ್ನು ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠವು 2020ರಲ್ಲೇ ವಜಾಗೊಳಿಸಿದೆ. ಈ ಅರ್ಜಿಯನ್ನು 2020ರಲ್ಲೇ ಸಲ್ಲಿಸಿದ್ದರೂ ಇದಕ್ಕೆ ತಡೆ ಸಿಕ್ಕಿಲ್ಲ. ಆದಕಾರಣ ಕಾನೂನು ರೀತ್ಯಾ ಶಿವಕುಮಾರ್‌ ಅವರ ಈ ಅರ್ಜಿ ಊರ್ಜಿತವಾಗುವುದಿಲ್ಲ ಎಂದು ವಿವರಿಸಿದರು.

ಎರಡೂವರೆ ವರ್ಷಗಳಲ್ಲಿ ಸಿಬಿಐ ಈಗಾಗಲೇ ಶೇ 90ರಷ್ಟು ತನಿಖೆ ಪೂರ್ಣಗೊಳಿಸಿದೆ. ಈ ಕುರಿತಂತೆ ತನಿಖೆಯ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೂ ಸಲ್ಲಿಸಲಾಗಿದೆ. ಇಷ್ಟೆಲ್ಲಾ ಸಮಯ ಕಳೆದ ಮೇಲೆ ಅರ್ಜಿದಾರರು ಅಧಿಸೂಚನೆ ಪ್ರಶ್ನಿಸುವುದಾಗಲೀ ಅಥವಾ ರದ್ದುಗೊಳಿಸಿ ಎಂದು ಕೋರುವುದಾಗಲಿ ಕಾನೂನು ಪ್ರಕಾರ ಸಾಧ್ಯವಿಲ್ಲ. ಇದು ಆದಾಯ ತೆರಿಗೆ ಕಾನೂನುಗಳ ಪ್ರಕಾರ ದಾಖಲಾಗಿಸಿರುವ ವಿಶೇಷ ಕ್ರಿಮಿನಲ್‌ ಪ್ರಕರಣ. ಹೀಗಾಗಿ, ಡಿ ಕೆ ಶಿವಕುಮಾರ್ ಸಿಬಿಐ ಮುಂದೆ ಹಾಜರಾಗಿ ಕೋಟ್ಯಂತರ ರೂಪಾಯಿಗಳನ್ನು ಎಲ್ಲಿಂದ, ಹೇಗೆ ಸಂಪಾದಿಸಿದರು ಎಂಬುದನ್ನು ವಿವರಿಸಲೇಬೇಕಿದೆ ಎಂದು ಪ್ರತಿಪಾದಿಸಿದರು.

Also Read
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ: ಡಿ ಕೆ ಶಿವಕುಮಾರ್‌ ವಿರುದ್ದದ ತನಿಖೆ; ಮಧ್ಯಂತರ ತಡೆ ವಿಸ್ತರಿಸಿದ ಹೈಕೋರ್ಟ್‌

ಇದನ್ನು ಅಲ್ಲಗಳೆದ ಶಿವಕುಮಾರ್ ಪರ ಹಿರಿಯ ವಕೀಲ ಉದಯ ಹೊಳ್ಳ ಅವರು ಈ ಪ್ರಕರಣವನ್ನು ದಾಖಲಿಸಿರುವ ಹಿಂದೆ ರಾಜಕೀಯ ಪಿತೂರಿ ಅಡಗಿದೆ. ಈಗಾಗಲೇ ಆದಾಯ ತೆರಿಗೆಗೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ಶಿವಕುಮಾರ್ ಗೆದ್ದಿದ್ದಾರೆ. ಇದು ನಾಲ್ಕನೇ ಎಫ್‌ಐಆರ್. ಜನಪ್ರತಿನಿಧಿಗಳ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ದಾಖಲಿಸುವ ಮುನ್ನ ವಿಧಾನಸಭೆಯ ಅಧ್ಯಕ್ಷರ ಅನುಮತಿ ಪಡೆಯಬೇಕಿತ್ತು. ಅಂತೆಯೇ, ತನಿಖೆಗೆ ನೀಡಲಾಗಿರುವ ಆಡಳಿತಾತ್ಮಕ ನಿರ್ಧಾರಕ್ಕೆ ಸಕಾರಣವೂ ಇಲ್ಲ. ಹೀಗಾಗಿ, ತನಿಖೆಗೆ ಶಿಫಾರಸ್ಸು ಮಾಡಲಾದ ಕ್ರಮವನ್ನು ರದ್ದುಗೊಳಿಸಬೇಕು ಎಂದು ಕೋರಿದರು.

Related Stories

No stories found.
Kannada Bar & Bench
kannada.barandbench.com