

ಸ್ವ-ಪ್ರತಿಷ್ಠೆಗೆ ಅಂಟಿಕೊಳ್ಳದೆ, ಪರಸ್ಪರ ಚರ್ಚಿಸುವ ಮೂಲಕ ಕರ್ನಾಟಕ ಲೋಕಾಯುಕ್ತ ವಿಶೇಷ ಪೊಲೀಸ್ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಎಂ ಚಂದ್ರಶೇಖರ್‌ಗೆ ಬೆದರಿಕೆ ಹಾಕಿದ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಮತ್ತು ಚಂದ್ರಶೇಖರ್‌ಗೆ ಕರ್ನಾಟಕ ಹೈಕೋರ್ಟ್ ಗುರುವಾರ ಸಲಹೆ ನೀಡಿದೆ.
ಕೇಂದ್ರ ಸಚಿವ ಕುಮಾರಸ್ವಾಮಿ ತಮ್ಮ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಲು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಚಂದ್ರಶೇಖರ್ ಅವರು ಸಂಜಯನಗರ ಠಾಣೆಯಲ್ಲಿ 2024ರಲ್ಲಿ ದೂರು ದಾಖಲಿಸಿದ್ದರು. ಅದನ್ನು ಆಧರಿಸಿ ಬಿಎನ್‌ಎಸ್ ಸೆಕ್ಷನ್ 224 ಆರೋಪದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣವನ್ನು ಬೆಂಗಳೂರಿನ 42ನೇ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಇದರಿಂದ ಎಫ್‌ಐಆರ್ ಮತ್ತು ಎಸಿಜೆಎಂ ನ್ಯಾಯಾಲಯ ವಿಚಾರಣೆ ರದ್ದುಪಡಿಸುವಂತೆ ಕೋರಿ ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನೀಲ್ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕುಮಾರಸ್ವಾಮಿ ಪರ ಹಿರಿಯ ವಕೀಲ ಹಸ್ಮತ್ ಪಾಷಾ ಅವರು “ಪ್ರಕರಣದಲ್ಲಿ ದೂರುದಾರರಾದ ಚಂದ್ರಶೇಖರ್‌ಗೆ ಕುಮಾರಸ್ವಾಮಿ ಅವರು ಬೆದರಿಕೆ ಒಡ್ಡಿಲ್ಲ. ಅವರಿಬ್ಬರ ನಡುವೆ ಯಾವುದೇ ಸಂಭಾಷಣೆ ನಡೆದಿಲ್ಲ. ಕುಮಾರಸ್ವಾಮಿ ಅವರು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದನ್ನು ಆಧರಿಸಿ ಚಂದ್ರಶೇಖರ್ ಅವರು ದೂರು ದಾಖಲಿಸಿದ್ದಾರೆ ಎಂದು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಬೆಳವಣಿಗೆಗಳನ್ನು ಪೀಠಕ್ಕೆ ವಿವರಿಸಿದರು.
ಆಗ ಪೀಠವು “ಅರ್ಜಿದಾರರು ಮತ್ತು ದೂರುದಾರರ ಹಿತದೃಷ್ಟಿಯಿಂದ ಒಂದು ಸಲಹೆ ನೀಡುತ್ತೇನೆ. ಕುಮಾರಸ್ವಾಮಿ ಮತ್ತು ಚಂದ್ರಶೇಖರ್ ಅವರು ಸಾರ್ವಜನಿಕ ವ್ಯವಸ್ಥೆಯಲ್ಲಿ ಇರುವವರು. ಸಾರ್ವಜನಿಕ ಜೀವನದಲ್ಲಿ ಇಂತಹ ಪ್ರಕರಣಗಳು ಎದುರಾಗುವುದು ಸಹಜ. ಮುಂದೆ ಎಲ್ಲಿಯಾದರೂ ಈ ಇಬ್ಬರು ಮುಖಾಮುಖಿ ಭೇಟಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಹೀಗಾಗಿ, ಇಬ್ಬರು ಸ್ವ-ಪ್ರತಿಷ್ಠೆ ಕೈ ಬಿಟ್ಟು, ಪರಸ್ಪರ ಚರ್ಚಿಸಿ, ಸಂಧಾನ ಮಾಡಿಕೊಂಡು ಪ್ರಕರಣವನ್ನು ಹಿಂಪಡೆಯುವುದು ಸೂಕ್ತ” ಎಂದರು.
ಚರ್ಚೆ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವ ಬಗ್ಗೆ ದೂರುದಾರರು ಮತ್ತು ಅರ್ಜಿದಾರರು ಮುಕ್ತ ಮನಸ್ಸಿನಿಂದ ಮಾತನಾಡಲಿ. ಈ ಪ್ರಕರಣ ಮುಂದುವರಿಸುವುದರಿಂದ ಇಬ್ಬರಿಗೂ ಯಾವುದೇ ಲಾಭ ಆಗುವುದಿಲ್ಲ. ಕೇವಲ ಮಾಧ್ಯಮಗಳಿಗೆ ಸುದ್ದಿಯಾಗುತ್ತದೆ ಅಷ್ಟೇ ಎಂದರು.
ಅದಕ್ಕೆ, ಹಸ್ಮತ್ ಪಾಷಾ ಅವರು ಒಪ್ಪಿದರಲ್ಲದೆ, ಕುಮಾರಸ್ವಾಮಿ ಅವರಿಗೆ ನ್ಯಾಯಾಲಯದ ಸಲಹೆಯನ್ನು ತಿಳಿಸುವುದಾಗಿ ಭರವಸೆ ನೀಡಿದರು.
ನಂತರ ನ್ಯಾಯಾಲಯವು, "ಪ್ರಕರಣವನ್ನು ಕುಮಾರಸ್ವಾಮಿ ಮತ್ತು ಚಂದ್ರಶೇಖರ್ ಅವರು ಹಿಂಪಡೆಯುವ ಕುರಿತು ಚರ್ಚೆ ಮಾಡಿ ನ್ಯಾಯಾಲಯಕ್ಕೆ ತೀರ್ಮಾನ ತಿಳಿಸಬೇಕು. ಒಂದೊಮ್ಮೆ ಪ್ರಕರಣವನ್ನು ಮುಂದುವರಿಸುವ ತೀರ್ಮಾನ ಕೈಗೊಂಡರೆ ನ್ಯಾಯಾಲಯವು ಮೆರಿಟ್ ಆಧಾರದಲ್ಲಿ ಅರ್ಜಿಗಳ ವಿಚಾರಣೆ ಮುಂದುವರಿಸಿ ನಿರ್ಧಾರ ಕೈಗೊಳ್ಳಲಿದೆ" ಎಂದು ಅರ್ಜಿ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿತು.