ಮುರುಘಾ ಮಠದ ಆಡಳಿತಾಧಿಕಾರಿಯನ್ನಾಗಿ ಚಿತ್ರದುರ್ಗದ ಪ್ರಧಾನ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಿದ ಹೈಕೋರ್ಟ್‌

ಮಠ ಮತ್ತು ವಿದ್ಯಾಪೀಠದ ಆಡಳಿತವನ್ನು ಮಂಗಳವಾರ ಬೆಳಿಗ್ಗೆ 11.30ರ ಒಳಗೆ ಚಿತ್ರದುರ್ಗದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ವಹಿಸಿಕೊಳ್ಳಬೇಕು. ಜಿಲ್ಲಾಧಿಕಾರಿಯು ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದಿರುವ ನ್ಯಾಯಾಲಯ.
Murugha Mutt
Murugha Mutt

ಚಿತ್ರದುರ್ಗದ ಮುರುಘಾ ಮಠ ಮತ್ತು ವಿದ್ಯಾಪೀಠಕ್ಕೆ ಆಡಳಿತಾಧಿಕಾರಿಯನ್ನಾಗಿ ತಾತ್ಕಾಲಿಕವಾಗಿ ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರನ್ನು ನೇಮಕ ಮಾಡಿ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ಚಿತ್ರದುರ್ಗದ ಎಚ್‌ ಏಕನಾಥಯ್ಯ ಅವರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ಪರವಾಗಿ ವಕಾಲತ್ತು ಹಾಕಿರುವ ವಕೀಲ ಆಕಾಶ್‌ ವಿ ಟಿ ಅವರ ಪರವಾಗಿ ವಕೀಲ ಸುಘೋಷ್‌ ಸುಬ್ರಮಣ್ಯಂ ಅವರು ರಾಜ್ಯ ಸರ್ಕಾರವು ಸಂವಿಧಾನದ 162ನೇ ವಿಧಿಯಡಿ ಈ ಹಿಂದೆ ಮಠಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ್‌ ಅವರನ್ನು ಆಡಳಿತಾಧಿಕಾರ ನೇಮಕ ಮಾಡಿದ್ದು ಸರಿಯಾದ ಕ್ರಮವಾಗಿತ್ತು. ಇದನ್ನು ಏಕಸದಸ್ಯ ಪೀಠವು ವಜಾ ಮಾಡಿರುವುದು ಸರಿಯಲ್ಲ. ಮಠದ ಮುಖ್ಯಸ್ಥರಾದ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಆಡಳಿತಾಧಿಕಾರಿ ನೇಮಕ ಮಾಡಬೇಕು. ಹೀಗಾಗಿ, ಏಕಸದಸ್ಯ ಪೀಠದ ಆದೇಶವನ್ನು ವಜಾ ಮಾಡಬೇಕು” ಎಂದು ಕೋರಿದರು.

ಮಠದ ಉಸ್ತುವಾರಿಯಾಗಿರುವ ಬಸವಪ್ರಭು ಸ್ವಾಮೀಜಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್‌ ಎಸ್‌. ಪಾಟೀಲ್‌ ಅವರು ಏಕಸದಸ್ಯ ಪೀಠವು ವಸ್ತ್ರದ್‌ ಅವರು ಆರು ವಾರಗಳ ಕಾಲ ಆಡಳಿತಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ಆದೇಶಿಸಿತ್ತು. ಈ ನೆಲೆಯಲ್ಲಿ ನಿನ್ನೆಗೆ ಆಡಳಿತಾಧಿಕಾರಿ ಅವಧಿ ಮುಗಿದಿರುವುದರಿಂದ ಬಸವಪ್ರಭು ಸ್ವಾಮೀಜಿ ಅಧಿಕಾರವಹಿಸಿಕೊಂಡಿದ್ದಾರೆ. ಯಾರಿಗೆ ಅಧಿಕಾರ ವಹಿಸಬೇಕು ಎಂದು ನ್ಯಾಯಾಲಯದ ಮುಂದೆ ಬರುವ ಹಕ್ಕು ಆಡಳಿತಾಧಿಕಾರಿಯಾಗಿದ್ದ ವಸ್ತ್ರದ್‌ ಅವರಿಗೆ ಇಲ್ಲ. ರಾಜ್ಯ ಸರ್ಕಾರದ ಆದೇಶ ಹಿನ್ನೆಲೆಯಲ್ಲಿ ಅವರು ಅಧಿಕಾರವಹಿಸಿಕೊಂಡಿದ್ದರಷ್ಟೆ. ವಸ್ತ್ರದ್‌ ಅವರಿಗೆ ಯಾರೂ ಅಧಿಕಾರವಹಿಸಿಕೊಟ್ಟಿರಲಿಲ್ಲ. ಹೀಗಾಗಿ, ಅವರು ಯಾರಿಗೂ ಅಧಿಕಾರವಹಿಸಿಕೊಡಬೇಕಾಗಿಲ್ಲ” ಎಂದು ವಾದಿಸಿದರು.

ವಸ್ತ್ರದ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಗುರುಮಠ ಅವರು ನಿರ್ದಿಷ್ಟ ವ್ಯಕ್ತಿಗೆ ಅಧಿಕಾರ ವರ್ಗಾವಣೆ ಮಾಡುವಂತೆ ಏಕಸದಸ್ಯ ಪೀಠವು ವಸ್ತ್ರದ್‌ ಅವರಿಗೆ ಆದೇಶಿಸಿಲ್ಲ. ಹೀಗಾಗಿ, ನ್ಯಾಯಾಲಯವು ಯಾರಿಗೆ ಅಧಿಕಾರ ವರ್ಗಾಯಿಸಬೇಕು ಎಂಬುದನ್ನು ನಿರ್ಧರಿಸಬೇಕು ಎಂದು ಕೋರಿದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ರಾಜ್ಯ ಸರ್ಕಾರವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಿದೆ ಎಂದು ಪೀಠಕ್ಕೆ ವಿವರಿಸಿದರು.

ಇದನ್ನು ಆಲಿಸಿದ ಪೀಠವು ಚಿತ್ರದುರ್ಗದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಮಠ ಮತ್ತು ವಿದ್ಯಾಪೀಠದ ಆಡಳಿತವನ್ನು ಮಂಗಳವಾರ ಬೆಳಿಗ್ಗೆ 11.30ರ ಒಳಗೆ ವಹಿಸಿಕೊಳ್ಳಬೇಕು. ಜಿಲ್ಲಾಧಿಕಾರಿಯು ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು. ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ಆಕ್ಷೇಪಣೆ ಸಲ್ಲಿಸಬೇಕು ಎಂದು ಆದೇಶಿಸಿದ್ದು, ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿತು.

Also Read
ಚಿತ್ರದುರ್ಗ ಮುರುಘಾ ಮಠದ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್‌ ಅಧಿಕಾರಿ ವಸ್ತ್ರದ್‌ ನೇಮಕ ರದ್ದುಪಡಿಸಿದ ಹೈಕೋರ್ಟ್‌

ಚಿತ್ರದುರ್ಗದ ಮುರುಘಾ ಮಠಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ ರಾಜ್ಯ ಸರ್ಕಾರವು ಡಿಸೆಂಬರ್‌ 13ರಂದು ನೇಮಕ ಮಾಡಿತ್ತು. ಸರ್ಕಾರದ ಈ ಆದೇಶ ಪ್ರಶ್ನಿಸಿ ಚಿತ್ರದುರ್ಗದ ಮಲ್ಲಿಕಾರ್ಜುನ್‌ ಮತ್ತಿತತರು ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಎರಡು ಅರ್ಜಿ ಸಲ್ಲಿಸಿದ್ದರು. 2023ರ ಮೇ 22ರಂದು ವಸ್ತ್ರದ್‌ ನೇಮಕಾತಿ ಆದೇಶವನ್ನು ನ್ಯಾ. ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿತ್ತು. ಇದನ್ನು ಬದಿಗೆ ಸರಿಸಬೇಕು ಎಂದು ಕೋರಿ ಚಿತ್ರದುರ್ಗದ ಏಕನಾಥಯ್ಯ ಅವರು ಮೇಲ್ಮನವಿ ಸಲ್ಲಿಸಿದ್ದಾರೆ.

Kannada Bar & Bench
kannada.barandbench.com