ರಸ್ತೆ ಗುಂಡಿ ಸಮಸ್ಯೆ: ಪರಿಹಾರ ಕಾರ್ಯವಿಧಾನದ ಮಾಹಿತಿ ತಿಳಿಸಲು ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ

ರಸ್ತೆ ಗುಂಡಿಗಳನ್ನು ಮುಚ್ಚುವುದು ಮತ್ತು ರಾಜಕಾಲುವೆ ಒತ್ತುವರಿ ತೆರವಿಗೆ ನಿರ್ದೇಶನ ಕೋರಿ ವಿಜಯ್‌ ಮೆನನ್‌ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ನಡೆಸಿತು.
BBMP and Karnataka HC
BBMP and Karnataka HC
Published on

ಬೆಂಗಳೂರು ನಗರದಲ್ಲಿ ಪ್ರತಿ ವರ್ಷ ಎದುರಾಗುವ ರಸ್ತೆ ಗುಂಡಿಗಳ ಸಮಸ್ಯೆ ಪರಿಹರಿಸುವುದು ಮತ್ತು ಸುಗಮ ಪಾದಚಾರಿ ಮಾರ್ಗ ಹಾಗೂ ವಾಹನ ಸಂಚಾರಕ್ಕೆ ಸೌಲಭ್ಯ ಒದಗಿಸುವುದಕ್ಕೆ ಸಂಬಂಧಿಸಿದಂತೆ ಅಳವಡಿಸಿಕೊಂಡಿರುವ ಕಾರ್ಯವಿಧಾನ ಕುರಿತು ಸವಿವರವಾದ ಅಫಿಡವಿಟ್‌ ಸಲ್ಲಿಸುವಂತೆ  ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ರಸ್ತೆ ಗುಂಡಿಗಳನ್ನು ಮುಚ್ಚುವುದು ಮತ್ತು ರಾಜಕಾಲುವೆ ಒತ್ತುವರಿ ತೆರವಿಗೆ ನಿರ್ದೇಶನ ಕೋರಿ ವಿಜಯ್‌ ಮೆನನ್‌ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್‌ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠ ನಡೆಸಿತು.

2015ರಲ್ಲಿ ಪಿಐಎಲ್‌ ಸಲ್ಲಿಕೆಯಾಗಿದೆ. 2024ರ ಸೆಪ್ಟೆಂಬರ್ 21ರ ಆದೇಶದಂತೆ ಸವಿವರವಾದ ಅಫಿಡವಿಟ್‌ ಸಲ್ಲಿಸಲು ನಿರ್ದೇಶಿಸಲಾಗಿತ್ತು. ಆ ಆದೇಶದಂತೆ ಬಿಬಿಎಂಪಿ ಸಲ್ಲಿಸಿರುವ ವರದಿಯಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ನಿಭಾಯಿಸುವುದಕ್ಕಾಗಿ ಇತ್ತೀಚೆಗೆ ಕೈಗೊಂಡ ಕಾರ್ಯವಿಧಾನಗಳ ಕುರಿತು ವಿವರಣೆ ನೀಡಿಲ್ಲ. ಹೀಗಾಗಿ, ಇತ್ತೀಚಿನ ಕಾರ್ಯವಿಧಾನಗಳ ಕುರಿತು ಅಫಿಡವಿಟ್‌ ಸಲ್ಲಿಸಬೇಕು ಎಂದು ಪೀಠ ನಿರ್ದೇಶಿಸಿತು.

ಅಫಿಡವಿಟ್‌ನಲ್ಲಿ ಬಿಬಿಎಂಪಿ ಪ್ರತಿವರ್ಷ, ಪ್ರತಿ ಅವಧಿಯಲ್ಲಿ ಗುಂಡಿಗಳ ಸಮಸ್ಯೆ ನಿಭಾಯಿಸುವುದು. ಸುಗಮ ಪಾದಚಾರಿಗಳು ಮತ್ತು ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲು ಯಾವ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂಬುದರ ಕುರಿತು ವಿವರಣೆ ಇರಬೇಕು. ವಿಶೇಷವಾಗಿ ಈ ಮಳೆಗಾಲದ ಸಂದರ್ಭಗಳಲ್ಲಿ ರಸ್ತೆ ಮತ್ತು ಗುಂಡಿ ದುರಸ್ತಿಗೆ ತೆಗೆದುಕೊಂಡ ಕ್ರಮಗಳ ಕುರಿತಂತೆ ವಾಸ್ತವದ ಅಂಶಗಳನ್ನು ಹೊಂದಿರಬೇಕು ಎಂದು ಪೀಠ ನಿರ್ದೇಶಿಸಿದೆ.

Also Read
[ರಸ್ತೆ ಗುಂಡಿ] ಬಿಬಿಎಂಪಿ ಮುಖ್ಯ ಆಯುಕ್ತ, ಎಂಜಿನಿಯರ್‌ಗಳ ಅಮಾನತಿಗೆ ನಿರ್ದೇಶಿಸಬೇಕಾದೀತು: ಹೈಕೋರ್ಟ್‌ ಆಕ್ರೋಶ

ಗುಂಡಿಗಳಿಂದ ರಸ್ತೆ ಅಪಘಾತಕ್ಕೆ ಒಳಗಾಗುವ ಸಂತ್ರಸ್ತರಿಗೆ ಪರಿಹಾರ ವಿತರಿಸಿರುವುದು ಹಾಗೂ ಪರಿಹಾರ ಪಾವತಿಗೆ ಸಂಬಂಧದ ಕಾರ್ಯ ವಿಧಾನಗಳ ಕುರಿತು ಅರ್ಜಿಯಲ್ಲಿ ಒಂದು ಮನವಿ ಇದೆ. ಅದಕ್ಕೂ ಸೂಕ್ತ ರೀತಿಯ ಪ್ರತ್ಯುತ್ತರವಾಗಿ ಬಿಬಿಎಂಪಿ ಪ್ರತಿಕ್ರಿಯೆ ನೀಡಬೇಕು ಎಂದು ಪೀಠ ನಿರ್ದೇಶಿಸಿದೆ.

ಅರ್ಜಿದಾರರ ಪರ ವಕೀಲರು, 2015ರಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ನ್ಯಾಯಾಲಯ ಮೇಲ್ವಿಚಾರಣೆ ನಡೆಸುತ್ತಿದೆ. ಬಿಬಿಎಂಪಿಯು ನಗರದ ಸಮಸ್ಯೆಗಳ ಪಾಲಿಸಲು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ ಸಂಬಂಧ ಕಡತಗಳಲ್ಲಿ ತಿಳಿಸುತ್ತಿದೆ. ಆದರೆ, ಯಾವುದೇ ವೈಜ್ಞಾನಿಕ ವಿಧಾನಗಳನ್ನೂ ಅನುಷ್ಠಾನಗೊಳಿಸುತ್ತಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಬಿಬಿಎಂಪಿ ವಕೀಲರು, ರಸ್ತೆ ಗುಂಡಿಗಳು ಹಾಗೂ ಪಾದಚಾರಿ ಮಾರ್ಗಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹೊಸದಾಗಿ ಅಫಿಡವಿಟ್‌ ಸಲ್ಲಿಸಬೇಕಾಗಿದ್ದು, ಅದಕ್ಕೆ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಈ ಅಂಶ ದಾಖಲಿಸಿಕೊಂಡ ಪೀಠ ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com