
ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ ಸಿ ವಿರೇಂದ್ರ ಅಲಿಯಾಸ್ ವೀರೇಂದ್ರ ಪಪ್ಪಿ ಅವರ ವಿರುದ್ಧದ ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ ಡಿ) ಅಧಿಕಾರಿಗಳು ತಮಗೆ ಜಾರಿಗೊಳಿಸಿರುವ ಸಮನ್ಸ್ ರದ್ದುಪಡಿಸುವಂತೆ ಕೋರಿ ವಕೀಲರೂ ಆಗಿರುವ ರಾಜರಾಜೇಶ್ವರಿ ನಗರದ ನಿವಾಸಿ ಎಚ್ ಅನಿಲ್ ಗೌಡ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಕುರಿತಂತೆ ಅರ್ಜಿ ಸಲ್ಲಿಸಿರುವ ಅನಿಲ್ ಗೌಡ ಅವರು ಇ ಡಿ ಸಮನ್ಸ್ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೆ ಇ ಡಿ ಸಮನ್ಸ್‌ಗೆ ತಡೆಯಾಜ್ಞೆ ನೀಡಬೇಕು ಹಾಗೂ ತಮ್ಮ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಇ ಡಿಗೆ ನಿರ್ದೇಶಿಸಬೇಕು ಎಂದು ಕೋರಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠವು ಸೆಪ್ಟೆಂಬರ್ 1ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅನಿಲ್ ಗೌಡ ಪರ ಹಿರಿಯ ವಕೀಲ ವಿಕಾಸ್ ಪಹ್ವಾ ಅವರು “ಅನಿಲ್ ಗೌಡ ವೃತ್ತಿಯಲ್ಲಿ ಓರ್ವ ವಕೀಲ. ಕೆ ಸಿ ವೀರೇಂದ್ರ ಅವರಿಗೆ ಕಾನೂನು ಸಲಹೆಗಾರರಾಗಿದ್ದಾರೆ. ವಕೀಲನಾಗಿ ವೀರೇಂದ್ರ ಅವರಿಗೆ ಸಲಹೆ ನೀಡಿದ್ದಾರೆ. ವೀರೇಂದ್ರ ಅವರ ಕಂಪೆನಿಗಳಲ್ಲಿ ಹೂಡಿಕೆ ಮಾತ್ರ ಮಾಡಿದ್ದಾರೆ ಹೊರತು ಕಂಪೆನಿಯ ದೈನಂದಿನ ವ್ಯವಹಾರದಲ್ಲಿ ಭಾಗಿಯಾಗಿಲ್ಲ. ಇನ್ನೂ ಇ ಡಿ ಅಧಿಕಾರ ವ್ಯಾಪ್ತಿ ಮೀರಿ, ರಾಜಕೀಯಪ್ರೇರಿತ ಮತ್ತು ದುರುದ್ದೇಶದಿಂದ ಅನಿಲ್ ಗೌಡಗೆ ಸಮನ್ಸ್ ಜಾರಿ ಮಾಡಿ ದಾಖಲೆಗಳನ್ನು ಕೇಳಿದೆ. ಇ ಡಿ ಅಧಿಕಾರಿಯ ವ್ಯಾಪ್ತಿಯು ಸುಪ್ರೀಂ ಕೋರ್ಟ್ ಪರಿಶೀಲನೆಯಲ್ಲಿದೆ. ವೀರೇಂದ್ರ ಅವರಿಗೆ ವಕೀಲನಾಗಿ ಸಲಹೆ ನೀಡಿರುವುದರಿಂದ ಅವರನ್ನು ವಿಚಾರಣೆಗೊಳಪಡಿಸದಂತೆ ಇ ಡಿಗೆ ನಿರ್ದೇಶಿಸಬೇಕು” ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಇಡಿ ಪರ ವಕೀಲ ಮಧುಕರ್ ದೇಶಪಾಂಡೆ ಅವರು “ಕೇವಲ ವೀರೇಂದ್ರ ಅವರ ವಕೀಲನಾಗಿರುವ ಕಾರಣಕ್ಕೆ ಅನಿಲ್ ಗೌಡಗೆ ಇ ಡಿ ಸಮನ್ಸ್ ನೀಡಿಲ್ಲ. ಅವರು ಕೆ ಸಿ ವೀರೇಂದ್ರ ಕಂಪನಿಗಳಲ್ಲಿ ಪಾಲುದಾರರಾಗಿದ್ದಾರೆ. ವಕೀಲನಾಗುವ ಮುನ್ನವೂ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ವಕೀಲನಾಗಿ ವಾಣಿಜ್ಯ ಕಂಪನಿಗಳ ಪಾಲುದಾರರಾಗುವಂತಿಲ್ಲ. ವೀರೇಂದ್ರ ಕಂಪನಿಗಳಿಗೆ ಸಂಬಂಧಿಸಿದ ಅಪ್ಲಿಕೇಶನ್‌ಗಳಲ್ಲಿ ಹಲವು ಜನ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದಾರೆ. ಅಕ್ರಮದ ಹಣ ಹೂಡಿಕೆಯ ಬಗ್ಗೆ ಗಂಭೀರ ಆರೋಪವಿದೆ. ಇದರಿಂದಲೇ ಹೂಡಿಕೆ, ಲ್ಯಾಪ್ ಟಾಪ್, ಮೊಬೈಲ್ ವಿವರ ಮತ್ತು ದಾಖಲೆಗಳನ್ನು ಕೇಳಲಾಗಿದ್ದು, ವಕೀಲ ವೃತ್ತಿಗೆ ಸಂಬಂಧಿಸಿದ ಪ್ರಶ್ನೆ ಕೇಳುವುದಿಲ್ಲ. ವಕೀಲ ವೃತ್ತಿ ಹೆಸರಿನಲ್ಲಿ ಅಪರಾಧ ಪ್ರಕರಣಗಳನ್ನು ಎಸಗಿ ರಕ್ಷಣೆ ಪಡೆಯಲಾಗದು” ಎಂದರು.
“ಆಗಸ್ಟ್ 26ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿತ್ತು. ಇದಕ್ಕೆ ಅನಿಲ್ ಸ್ಪಂದಿಸದೇ ಇರುವುದರಿಂದ ಅದು ಅನೂರ್ಜಿತಗೊಂಡಿದೆ. ಸೋಮವಾರ ನ್ಯಾಯಾಲಯದ ವಿಚಾರಣೆಯ ಬಳಿಕ ಹೊಸದಾಗಿ ಸಮನ್ಸ್ ಜಾರಿ ಮಾಡಲಾಗುವುದು. ಜನ ಸಾಮಾನ್ಯರು ಹಣ ಕಳೆದುಕೊಂಡು ದಿವಾಳಿಯಾಗಿರುವ ಪ್ರಕರಣ ಇದಾಗಿರುವುದರಿಂದ ಯಾವುದೇ ರೀತಿಯ ರಕ್ಷಣೆ ನೀಡಬಾರದು” ಎಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠವು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು.
ಜಾರಿ ನಿರ್ದೇಶನಾಲಯ ಅಧಿಕಾರಿಗಳು ಆಗಸ್ಟ್ 22 ಮತ್ತು 23ರಂದು ಅನಿಲ್ ಗೌಡ ಮನೆ ಶೋಧಿಸಿದ್ದರು. ಆಗಸ್ಟ್ 24ರಂದು ಸಮನ್ಸ್ ಜಾರಿ ಮಾಡಿ ಎರಡು ದಿನಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಹಾಜರುಪಡಿಸಬೇಕು ಎಂದು ಸೂಚಿಸಿದ್ದರು. ಆಗಸ್ಟ್ 25ರಂದು ಸಮನ್ಸ್‌ಗೆ ಉತ್ತರಿಸಿದ್ದ ಅನಿಲ್ ಗೌಡ, ಹಲವು ವರ್ಷಗಳಿಗೆ ಸಂಬಂಧಿಸಿದಂತೆ ಅಗಾಧ ಪ್ರಮಾಣದಲ್ಲಿ ದಾಖಲೆಗಳಿವೆ. ಅವುಗಳನ್ನು ಸಂಗ್ರಹಿಸಿ ಒದಗಿಸಲು ಕಾಲಾವಕಾಶ ನೀಡಬೇಕು. ತಾವು ವಕೀಲರಾಗಿದ್ದು, ಸಂವಿಧಾನದ 20(3)ನೇ ವಿಧಿ ವಕೀಲರಿಗೆ ತನಿಖಾ ಸಂಸ್ಥೆಗಳ ಎದುರು ಸ್ವಯಂ ಹೇಳಿಕೆ ದಾಖಲಿಸುವುದರಿಂದ ರಕ್ಷಣೆಯಿದೆ. ದುರುದ್ದೇಶದಿಂದ ಮತ್ತು ರಾಜಕೀಯ ಪ್ರೇರಿತವಾಗಿ ಸಮನ್ಸ್ ನೀಡಿದ್ದು, ಅದನ್ನು ರದ್ದುಪಡಿಸಬೇಕು. ತಮ್ಮ ವಿರುದ್ಧ ಬಲವಂತದ ಕ್ರಮ ಜರುಗಿಸದಿರಲು ಇ ಡಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು.