ಧಾರ್ಮಿಕ ಕಟ್ಟಡಗಳ ರಕ್ಷಣಾ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನೆ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ

“ಈಗಾಗಲೇ ನೋಟಿಸ್‌ ಜಾರಿಗೊಳಿಸಲಾಗಿದ್ದು, ಪ್ರಕರಣದ ಗಂಭೀರತೆ ಮತ್ತು ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಆಕ್ಷೇಪಣೆ ಸಲ್ಲಿಸಬೇಕು” ಎಂದಿರುವ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್‌ 3ಕ್ಕೆ ಮುಂದೂಡಿತು.
ಧಾರ್ಮಿಕ ಕಟ್ಟಡಗಳ ರಕ್ಷಣಾ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನೆ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಕಾಲಾವಕಾಶ
Published on

ಅಕ್ರಮ ಧಾರ್ಮಿಕ ಕಟ್ಟಡಗಳನ್ನು ಸಂರಕ್ಷಿಸುವ ಉದ್ದೇಶದಿಂದ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಧಾರ್ಮಿಕ ಕಟ್ಟಡಗಳ (ರಕ್ಷಣಾ) ಕಾಯಿದೆ 2021 ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ಒಂದು ತಿಂಗಳ ಕಾಲಾವಕಾಶ ನೀಡಿದೆ.

ಬೆಂಗಳೂರಿನ ಡಿ ಕೇಶವಮೂರ್ತಿ ಅವರು ಕಾಯಿದೆ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ವಿಭಾಗೀಯ ಪೀಠ ನಡೆಸಿತು.

“ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಎತ್ತಿರುವ ವಿಚಾರವು ಮಹತ್ವದ್ದಾಗಿದ್ದು, ಸಾಂವಿಧಾನಿಕ ಕಾನೂನಿನ ಕಾರ್ಯಾಚರಣೆಯಲ್ಲಿ ದೂರಗಾಮಿ ಆಯಾಮಗಳನ್ನು ಹೊಂದಿದೆ. ಸುಪ್ರೀಂ ಕೋರ್ಟ್‌ ಆದೇಶವು ನೆಲದ ಕಾನೂನಾಗಿದ್ದು, ಅದನ್ನು ಶಾಸನಸಭೆಗಳೂ ಸೇರಿದಂತೆ ಎಲ್ಲರೂ ಪಾಲಿಸಬೇಕು” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಮನು ಕುಲಕರ್ಣಿ ಅವರು “ಕಾನೂನಿನ ಅನ್ವಯ ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ದೇವಾಲಯಗಳು, ಚರ್ಚ್‌, ಮಸೀದಿ, ಗುರುದ್ವಾರ, ಬೋಧಿ ವಿಹಾರ ಇತ್ಯಾದಿಗಳನ್ನು ರಕ್ಷಿಸುವ ಉದ್ದೇಶದಿಂದ ಆಕ್ಷೇಪಾರ್ಹ ಕಾಯಿದೆ ಜಾರಿಗೊಳಿಸಲಾಗಿದೆ” ಎಂದು ಆಕ್ಷೇಪಿಸಿದರು.

ಭಾರತ ಸರ್ಕಾರ ವರ್ಸಸ್‌ ಗುಜರಾತ್‌ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಈ ವಿಚಾರದ ಸಂಬಂಧ ಈಗಾಗಲೇ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಸ್ವಯಂಪ್ರೇರಿತ ಪ್ರಕ್ರಿಯೆ ಆರಂಭಿಸಿದೆ. ಅದಾಗ್ಯೂ, ರಾಜ್ಯ ಸರ್ಕಾರ ಕಾನೂನು ರೂಪಿಸಿದ್ದು, ಅದನ್ನು ಪಿಐಎಲ್‌ನಲ್ಲಿ ಪ್ರಶ್ನಿಸಲಾಗಿದೆ” ಎಂದರು.

Also Read
ಧಾರ್ಮಿಕ ಕಟ್ಟಡಗಳ ಸಂರಕ್ಷಣಾ ಕಾಯಿದೆ ಸಾಂವಿಧಾನಿಕ ಸಿಂಧುತ್ವ ಪ್ರಶ್ನೆ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಸರ್ಕಾರಿ ವಕೀಲೆ ನಿಲೋಫರ್‌ ಅಕ್ಬರ್‌ ಅವರು "ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು.

“ಈಗಾಗಲೇ ನೋಟಿಸ್‌ ಜಾರಿಗೊಳಿಸಲಾಗಿದ್ದು, ಪ್ರಕರಣದ ಗಂಭೀರತೆ ಮತ್ತು ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಆಕ್ಷೇಪಣೆ ಸಲ್ಲಿಸಬೇಕು” ಎಂದಿರುವ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್‌ 3ಕ್ಕೆ ಮುಂದೂಡಿತು.

ಭಾರತ ಸರ್ಕಾರ ವರ್ಸಸ್‌ ಗುಜರಾತ್‌ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸಾರ್ವಜನಿಕ ಜಾಗದಲ್ಲಿರುವ ಯಾವುದೇ ಅನಧಿಕೃತ ಧಾರ್ಮಿಕ ಕಟ್ಟಡವನ್ನು ತೆರವುಗೊಳಿಸುವಂತೆ ತೀರ್ಪು ನೀಡಿತ್ತು.

Kannada Bar & Bench
kannada.barandbench.com