[ಪೋಕ್ಸೊ ಪ್ರಕರಣ] ಸಂತ್ರಸ್ತರು ಪ್ರತಿಕೂಲ ಸಾಕ್ಷಿ ನುಡಿದರೆ ಅವರನ್ನೂ ಪಾಟಿ ಸವಾಲಿಗೆ ಒಳಪಡಿಸಬಹುದು: ಹೈಕೋರ್ಟ್‌

ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳುವಾಗ, ಸಂತ್ರಸ್ತೆ ಪ್ರತಿಕೂಲ ಸಾಕ್ಷಿ ನುಡಿದಿದ್ದಳು. ಇದರಿಂದ, ಸರ್ಕಾರ ಸಂತ್ರಸ್ತೆಯನ್ನು ಪಾಟಿ ಸವಾಲಿಗೆ ಗುರಿಪಡಿಸಲು ವಿಚಾರಣಾಧೀನ ನ್ಯಾಯಾಲಯದ ಅನುಮತಿ ಕೇಳಿತ್ತು. ಇದಕ್ಕೆ ಅನುಮತಿ ನಿರಾಕರಿಸಿಲಾಗಿತ್ತು.
Karnataka HC and POCSO
Karnataka HC and POCSO

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿ ದಾಖಲಾದ ಪ್ರಕರಣಗಳಲ್ಲಿ ಸಂತ್ರಸ್ತರು ಪ್ರತಿಕೂಲ ಸಾಕ್ಷಿ ನುಡಿದರೆ ಅವರನ್ನೂ ಪಾಟಿ ಸವಾಲಿಗೆ ಒಳಪಡಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಸ್ಪಷ್ಟಪಡಿಸಿದೆ (ಕರ್ನಾಟಕ ರಾಜ್ಯ ವರ್ಸಸ್‌ ಸೋಮಣ್ಣ).

ಪೋಕ್ಸೊ ಪ್ರಕರಣವೊಂದರಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದ ಸಂತ್ರಸ್ತೆಯನ್ನು ಪಾಟಿ ಸವಾಲಿಗೆ ಗುರಿಪಡಿಸಲು ಅನುಮತಿ ನಿರಾಕರಿಸಿದ್ದ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಮಾನ್ಯ ಮಾಡಿದೆ.

ಪೋಕ್ಸೊ ಕಾಯಿದೆ-2012ರ ಸೆಕ್ಷನ್ 33(2)ರ ಪ್ರಕಾರ ಅಪ್ರಾಪ್ತ ಸಂತ್ರಸ್ತರು ಪ್ರತಿಕೂಲ ಸಾಕ್ಷಿ ನುಡಿದ ಸಂದರ್ಭದಲ್ಲಿ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ಅವಕಾಶವಿದೆ. ಆದರೆ, ಪಾಟಿ ಸವಾಲಿನ ವೇಳೆ ಕೇಳುವ ಪ್ರಶ್ನೆಗಳನ್ನು ಸರ್ಕಾರಿ ಅಭಿಯೋಜಕರು ಅಥವಾ ಇತರ ಆರೋಪಿಗಳ ಪರ ವಕೀಲರು ವಿಶೇಷ ನ್ಯಾಯಾಲಯದ ಮುಂದಿಡಬೇಕು. ಅದೇ ಪ್ರಶ್ನೆಗಳನ್ನು ನ್ಯಾಯಾಲಯ ಸಂತ್ರಸ್ತರ ಮುಂದಿಟ್ಟು ಅವರಿಂದ ವಿವರಣೆ ಪಡೆಯಬೇಕು. ಸೆಕ್ಷನ್ 33(2) ಪ್ರಕಾರ ಇದು ಕಡ್ಡಾಯ ಪ್ರಕ್ರಿಯೆಯೂ ಆಗಿದೆ. ಆದ್ದರಿಂದ, ಪೋಕ್ಸೊ ಕಾಯಿದೆಯ ನಿಯಮಗಳ ಅನುಸಾರವೇ ಸಂತ್ರಸ್ತರ ಪಾಟಿ ಸವಾಲು ನಡೆಸಬೇಕು. ಈ ವೇಳೆ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರೂ ಸಾಕಷ್ಟು ಎಚ್ಚರ ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಪಾಟಿ ಸವಾಲು ನಡೆಸಲು ಸರ್ಕಾರಕ್ಕೆ ಅನುಮತಿ ನಿರಾಕರಿಸಿ ವಿಚಾರಣಾಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಪ್ರಕರಣವನ್ನು ಮತ್ತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಮರಳಿಸಿದೆ. ಪೋಕ್ಸೊ ಕಾಯಿದೆ ಸೆಕ್ಷನ್ 33(2) ಪ್ರಕಾರ ಸಂತ್ರಸ್ತೆಯನ್ನು ಪಾಟಿ ಸವಾಲಿಗೆ ಒಳಪಡಿಸಲು ಸರ್ಕಾರಿ ಅಭಿಯೋಜಕರಿಗೆ ಅನುಮತಿ ನೀಡುವಂತೆ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.

Also Read
[ಪೋಕ್ಸೊ ] ಜಾಮೀನು ಮನವಿ ಪರಿಗಣಿಸುವ ಮುನ್ನ ಸಂತ್ರಸ್ತೆಗೆ ನೋಟಿಸ್‌ ನೀಡಲು ಕೋರಿಕೆ; ಕೇಂದ್ರ, ರಾಜ್ಯಗಳಿಗೆ ನೋಟಿಸ್‌

ಪ್ರಕರಣದ ಹಿನ್ನೆಲೆ: 2018ರ ಡಿಸೆಂಬರ್‌ 2ರಂದು ಬಾಲಕಿಯೊಬ್ಬಳಿಗೆ ಮದುವೆ ಮಾಡಲಾಗಿತ್ತು. ಅಪ್ರಾಪ್ತೆಯೆಂದು ತಿಳಿದಿದ್ದರೂ ಆಕೆಯೊಂದಿಗೆ ಪತಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂಬ ಆರೋಪದಲ್ಲಿ 2109ರ ಏಪ್ರಿಲ್‌ 29ರಂದು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪೊಲೀಸರು ಭಾರತೀಯ ದಂಡ ಸಂಹಿತೆಯ 376(ಎನ್), ಪೋಕ್ಸೊ ಕಾಯಿದೆ ಹಾಗೂ ಬಾಲ್ಯ ವಿವಾಹ ತಡೆ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪ್ರಾಪ್ತೆಯ ಪತಿ ಮತ್ತು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ವಿಚಾರಣಾಧೀನ ನ್ಯಾಯಾಲಯದಲ್ಲಿ 2019ರ ಸೆಪ್ಟೆಂಬರ್‌ 16ರಂದು ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳುವಾಗ, ಸಂತ್ರಸ್ತೆ ಪ್ರತಿಕೂಲ ಸಾಕ್ಷ್ಯ ನುಡಿದಿದ್ದಳು. ಇದರಿಂದ, ಸರ್ಕಾರ ಸಂತ್ರಸ್ತೆಯನ್ನು ಪಾಟಿ ಸವಾಲಿಗೆ ಗುರಿಪಡಿಸಲು ವಿಚಾರಣಾಧೀನ ನ್ಯಾಯಾಲಯದ ಅನುಮತಿ ಕೇಳಿತ್ತು. ಆದರೆ, ವಿಚಾರಣಾಧೀನ ನ್ಯಾಯಾಲಯವು ಸರ್ಕಾರಕ್ಕೆ ಅನುಮತಿ ನಿರಾಕರಿಸಿತ್ತು.

Attachment
PDF
State of Karnataka V. Somanna and others.pdf
Preview

Related Stories

No stories found.
Kannada Bar & Bench
kannada.barandbench.com