ಪೋಕ್ಸೊ ಪ್ರಕರಣಗಳ ಆರೋಪಿಗಳು ಜಾಮೀನು ಕೋರಿ ನ್ಯಾಯಾಲಯಗಳಿಗೆ ಸಲ್ಲಿಸುವ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸುವ ಮುನ್ನ ಕಡ್ಡಾಯವಾಗಿ ಸಂತ್ರಸ್ತರಿಗೆ ನೋಟಿಸ್ ನೀಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ಬಿ ಬಿ ಆಯೆಷಾ ಖಾನುಂ, ದಿವ್ಯಾ ಕ್ರಿಸ್ಟೈನ್ ಹಾಗೂ ಪೆಂಚಿಲಮ್ಮ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ನಡೆಸಿತು.
ಕೇಂದ್ರ ಕಾನೂನು ಸಚಿವಾಲಯ, ರಾಜ್ಯ ಗೃಹ ಇಲಾಖೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ರೋಹನ್ ಕೊಠಾರಿ ಅವರು ಪೋಕ್ಸೊ ಪ್ರಕರಣಗಳಲ್ಲಿ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ಕಡ್ಡಾಯವಾಗಿ ಸಂತ್ರಸ್ತರಿಗೂ ನೋಟಿಸ್ ನೀಡಿ, ಅವರ ವಾದವನ್ನೂ ಆಲಿಸಬೇಕು ಎಂದು ದೆಹಲಿ, ಬಾಂಬೆ ಹಾಗೂ ಅಲಾಹಾಬಾದ್ ಹೈಕೋರ್ಟ್‌ಗಳು ತೀರ್ಪು ನೀಡಿವೆ. ಇಂಥದೇ ಆದೇಶವನ್ನು ರಾಜ್ಯದಲ್ಲೂ ಹೊರಡಿಸಬೇಕು ಎಂದು ಕೋರಿದರು.
ಸರ್ಕಾರದ ಪರ ವಕೀಲರು “ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಪ್ರತಿ ಪೋಕ್ಸೊ ಪ್ರಕರಣದಲ್ಲೂ ಆರೋಪಿ ಜಾಮೀನು ಅರ್ಜಿ ಸಲ್ಲಿಸಿದಾಗ ಸಂತ್ರಸ್ತ ಮಗುವಿನ ಪಾಲಕರಿಗೆ ನೋಟಿಸ್ ನೀಡಲಾಗುತ್ತಿದೆ. ಪೋಕ್ಸೊ ಕಾಯಿದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಪೋಕ್ಸೊ ಕಾಯಿದೆಯಡಿಯ ಪ್ರಕರಣಗಳಲ್ಲಿ ಆರೋಪಿಗಳು ಸಿಆರ್‌ಪಿಸಿ ಸೆಕ್ಷನ್ 438ರ ಅನುಸಾರ ನೀರಿಕ್ಷಣಾ ಜಾಮೀನು ಅರ್ಜಿ ಅಥವಾ ಸೆಕ್ಷನ್ 439ರ ಅನುಸಾರ ಜಾಮೀನು ಅರ್ಜಿ ಸಲ್ಲಿಸಿದರೆ ಸಂತ್ರಸ್ತರ ಪಾಲಕರಿಗೆ ಕಡ್ಡಾಯವಾಗಿ ನೋಟಿಸ್ ಜಾರಿಗೊಳಿಸಬೇಕು ಎಂದು ಆದೇಶ ಹೊರಡಿಸಿ ಅರ್ಜಿ ಇತ್ಯರ್ಥಪಡಿಸಬಹುದು ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಆ ಆದೇಶವನ್ನು ಪ್ರತಿ ಜಿಲ್ಲೆಯ ಪ್ರಧಾನ ನ್ಯಾಯಾಧೀಶರ ಮುಂದಿಟ್ಟು, ಅವರಿಂದ ಎಲ್ಲ ನ್ಯಾಯಾಲಯಗಳಿಗೆ ರವಾನಿಸಿ, ಹೈಕೋರ್ಟ್ ಆದೇಶ ಪಾಲನೆಯಾಗುವಂತೆ ನೋಡಿಕೊಳ್ಳಬಹುದು ಎಂದು ಹೇಳಿತು.
ಅರ್ಜಿದಾರರ ಪರ ವಕೀಲರು, ಸಂತ್ರಸ್ತರ ಪಾಲಕರಿಗೆ ನೋಟಿಸ್ ಜಾರಿಗೊಳಿಸುವುದರ ಜತೆಗೆ, ಕುಟುಂಬ ಸದಸ್ಯರೇ ಆರೋಪಿಗಳಾಗಿರುವ ಪೋಕ್ಸೊ ಪ್ರಕರಣಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿಗಳಿಗೆ (ಸಿಡಬ್ಲುಸಿ) ನೋಟಿಸ್ ಜಾರಿಗೊಳಿಸಬೇಕಾಗುತ್ತದೆ ಎಂದು ತಿಳಿಸಿದರು. ಆದೇಶ ನೀಡುವಾಗ ಈ ಎಲ್ಲ ಅಂಶಗಳನ್ನು ಪರಿಗಣಿಸುವುದಾಗಿ ತಿಳಿಸಿದ ಪೀಠ, ವಿಚಾರಣೆ ಮುಂದೂಡಿತು.