

“ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಕಾನೂನಿಗೆ ವಿರುದ್ಧವಾಗಿ ಮದುವೆ ಮಾಡಿಸುವ ಮತ್ತು ಅದಕ್ಕೆ ಕುಮ್ಮಕ್ಕು ಕೊಡುವ ಪೋಷಕರ ನಡೆ ಆತಂಕಕಾರಿ” ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.
ಪಶ್ಚಿಮ ಬಂಗಾಳದವನಾದ ಆರೋಪಿ ಹಬೀಬರ್ ಅಲಿಯಾಸ್ ಹಬೀಬ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು “ಸಂತ್ರಸ್ತೆ ಮತ್ತು ಆರೋಪಿ ಇಬ್ಬರೂ ಈಗಾಗಲೇ ಮದುವೆಯಾಗಿದ್ದಾರೆ. ಮದುವೆಯಾದಾಗ ಸಂತ್ರಸ್ತೆ ವಯಸ್ಸು 17 ವರ್ಷ 10 ತಿಂಗಳಾಗಿತ್ತು. ದೂರುದಾರಳೂ ಆದ ಪತ್ನಿ ಈಗ ಗರ್ಭಿಣಿ ಇದ್ದಾಳೆ. ಅಂತಿಮವಾಗಿ ಪರಸ್ಪರ ಒಪ್ಪಂದದ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲು ಆಕೆ ಇಚ್ಛಿಸಿದ್ದು ಯುವಕನನ್ನು ಪೋಕ್ಸೊದಿಂದ ಮುಕ್ತಿಗೊಳಿಸಬೇಕು” ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ಅವರು “ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳುತ್ತೇವೆ ಎಂಬ ಅರ್ಜಿದಾರರ ವಾದ ಒಪ್ಪತಕ್ಕದ್ದಲ್ಲ. ಈ ಪ್ರಕರಣದಲ್ಲಿ ಪೋಷಕರೇ ಮುಂದಾಗಿ ಮದುವೆ ಮಾಡಿಸಿದ್ದು, ಅವರ ವಿರುದ್ಧದ ಬಾಲ್ಯ ವಿವಾಹ ನಿಷೇಧ ಕಾಯಿದೆ-2006ರ ಸೆಕ್ಷನ್ 9, 10 ಮತ್ತು 11ರ ಅಡಿಯಲ್ಲಿ ಕಠಿಣ ಕ್ರಮಕ್ಕೆ ಆದೇಶಿಸಬೇಕು” ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು “ಸಂತ್ರಸ್ತೆಯೇ ಸಂಧಾನ ಮಾಡಿಕೊಳ್ಳುತ್ತೇವೆ ಎಂದು ಹೇಳುವುದು ಎಷ್ಟು ಸರಿ? ಈ ರೀತಿಯ ಪ್ರಕರಣಗಳಲ್ಲಿ ಪೋಷಕರನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಆಡಳಿತಾಂಗ ಯಾವುದೇ ರಿಯಾಯತಿ ತೋರಬಾರದು” ಎಂದು ಹೇಳಿತು.
“ಇಂತಹ ಪ್ರಕರಣಗಳಲ್ಲಿ ಸಲುಗೆ ತೋರುವುದು ತರವಲ್ಲ. ಈ ರೀತಿ ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ಮಾಡಿಸಿದರೆ ಅಸ್ತಿತ್ವದಲ್ಲಿರುವ ಬಾಲ್ಯ ವಿವಾಹ ನಿಷೇಧ ಕಾಯಿದೆಗೆ ಬೆಲೆಯೇನು” ಎಂದು ಪ್ರಶ್ನಿಸಿದ ನ್ಯಾಯಾಲಯವು ಸೂಕ್ತ ತೀರ್ಪು ಪ್ರಕಟಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಸಂತ್ರಸ್ತ ಬಾಲಕಿ ’ಹೊಟ್ಟೆ ನೋವು’ ಎಂದು ಸ್ಥಳೀಯ ಆಸ್ಪತ್ರೆಗೆ ಹೋದಾಗ ವೈದ್ಯರು ಆಕೆ ಗರ್ಭಿಣಿ ಎಂಬುದನ್ನು ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಯುವಕನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ–2023ರ ಸೆಕ್ಷನ್ 64, ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಕಾಯಿದೆಯ ಸೆಕ್ಷನ್ 5(ಜೆ) (ii) ಮತ್ತು 6 ಹಾಗೂ ಬಾಲ್ಯ ವಿವಾಹ ನಿಷೇಧ ಕಾಯಿದೆ ಅಡಿಯಲ್ಲಿನ ಶಿಕ್ಷಾರ್ಹ ಅಪರಾಧಗಳಿಗಾಗಿ ಬೆಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಕುರಿತಂತೆ ನಗರದ ಶೀಘ್ರ ವಿಲೇವಾರಿ ವಿಶೇಷ ನ್ಯಾಯಾಲಯದಲ್ಲಿನ ನ್ಯಾಯಿಕ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಆರೋಪಿ ಅರ್ಜಿ ಸಲ್ಲಿಸಿದ್ದಾರೆ.