ಜಯಲಲಿತಾ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ಮಾರ್ಚ್ 6 ಮತ್ತು 7ರಂದು ಜಯಲಲಿತಾ ಅವರ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ವಿಶೇಷ ಸಿಬಿಐ ನ್ಯಾಯಾಲಯದ ಪ್ರಕ್ರಿಯೆಗೆ ತಡೆಯಾಗಿದೆ.
Tamilnadu former CM J Jayalalithaa
Tamilnadu former CM J Jayalalithaa
Published on

ಬೆಂಗಳೂರಿನ ವಿಶೇಷ ನ್ಯಾಯಾಲಯದ ಸುಪರ್ದಿಯಲ್ಲಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ಚಿನ್ನಾಭರಣ ಮತ್ತು ಇತರ ಪರಿಕರಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ. ಹೀಗಾಗಿ, ಮಾರ್ಚ್‌ 6 ಮತ್ತು 7ರಂದು ಜಯಲಲಿತಾ ಅವರ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ವಿಶೇಷ ಸಿಬಿಐ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ಬಿದ್ದಂತಾಗಿದೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾದ ನೂರಾರು ಕೋಟಿ ಮೌಲ್ಯದ ಚಿನ್ನಾಭರಣ ಸೇರಿ ಇತರೆ ವಸ್ತುಗಳನ್ನು ಕಾನೂನಾತ್ಮಕ ವಾರಸುದಾರರಾದ ತಮಗೆ ಬಿಡುಗಡೆ ಮಾಡಬೇಕು ಎಂದು ಜಯಲಲಿತಾ ಅವರ ಸಹೋದರನ ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು 2023ರ ಜುಲೈ 12ರಂದು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರಲ್ಲಿ ಒಬ್ಬರಾದ ಜೆ ದೀಪಾ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Also Read
ಜಯಲಲಿತಾ ಚಿನ್ನಾಭರಣ ಪಡೆಯಲು ಆರು ದೊಡ್ಡ ಟ್ರಂಕ್‌ ಜೊತೆ ಬರಲು ತಮಿಳುನಾಡು ಸರ್ಕಾರಕ್ಕೆ ವಿಶೇಷ ನ್ಯಾಯಾಲಯದ ಆದೇಶ

ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್‌ 26ಕ್ಕೆ ಮುಂದೂಡಿದೆ.

Also Read
ನಗದು, ವಜ್ರಾಭರಣ ಬಿಡುಗಡೆ ಕೋರಿಕೆ: ಮಾಜಿ ಸಿಎಂ ಜಯಲಲಿತಾ ಸೋದರ ಸಂಬಂಧಿಗಳ ಅರ್ಜಿ ವಜಾ ಮಾಡಿದ ವಿಶೇಷ ನ್ಯಾಯಾಲಯ

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಜಯಲಲಿತಾ ವಿರುದ್ದದ ಭ್ರಷ್ಟಾಚಾರ ಆರೋಪ ಸಂಬಂಧ ಸುಪ್ರೀಂ ಕೋರ್ಟ್‌ನಿಂದ ತೀರ್ಪು ಬರುವ ಮುನ್ನವೇ ಅವರು ಮೃತರಾಗಿದ್ದರು. ಅರ್ಜಿದಾರರು ಜಯಲಲಿತಾ ಅವರ ಕಾನೂನುಬದ್ಧ ವಾರಸುದರಾಗಿದ್ದು, ಅವರ ಎಲ್ಲ ಚಿನ್ನಾಭರಣಗಳನ್ನು ಅರ್ಜಿದಾರರಿಗೆ ಹಸ್ತಾಂತರ ಮಾಡಬೇಕು ಎಂದು ಕೋರಿದರು.

ಈ ವಾದ ದಾಖಲಿಸಿಕೊಂಡ ಪೀಠವು ವಿಶೇಷ ಸಿಬಿಐ ನ್ಯಾಯಾಲಯದಿಂದ ತಮಿಳುನಾಡು ಸರ್ಕಾರಕ್ಕೆ ನಾಳೆಯಿಂದ ನಡೆಯಬೇಕಿದ್ದ ಚಿನ್ನಾಭರಣಗಳ ಹಸ್ತಾಂತರ ಪ್ರಕ್ರಿಯೆಗೆ ತಡೆ ನೀಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.

Kannada Bar & Bench
kannada.barandbench.com