ನಗದು, ವಜ್ರಾಭರಣ ಬಿಡುಗಡೆ ಕೋರಿಕೆ: ಮಾಜಿ ಸಿಎಂ ಜಯಲಲಿತಾ ಸೋದರ ಸಂಬಂಧಿಗಳ ಅರ್ಜಿ ವಜಾ ಮಾಡಿದ ವಿಶೇಷ ನ್ಯಾಯಾಲಯ

“ಎಲ್ಲಾ ಆಸ್ತಿಗಳನ್ನು ಅಕ್ರಮವಾಗಿ ಸಂಪಾದಿಸಲಾಗಿದೆ. ಹೀಗಾಗಿ, ಅವುಗಳನ್ನು ವಶಪಡಿಸಿಕೊಳ್ಳಲು ಆದೇಶಿಸಲಾಗಿದೆ. ಹೀಗಾಗಿ, ಈ ಆಸ್ತಿಗಳು ಸರ್ಕಾರಕ್ಕೆ ಮಾತ್ರ ಸೇರುತ್ತವೆಯೇ ವಿನಾ ಅರ್ಜಿದಾರರಿಗೆ ಅಲ್ಲ” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.
Tamilnadu former CM J. Jayalalithaa
Tamilnadu former CM J. Jayalalithaa
Published on

ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾದ ನೂರಾರು ಕೋಟಿ ಮೌಲ್ಯದ ಚಿನ್ನಾಭರಣ ಸೇರಿ ಇತರೆ ವಸ್ತುಗಳನ್ನು ಕಾನೂನಾತ್ಮಕ ವಾರಸುದಾರರಾದ ತಮಗೆ ಬಿಡುಗಡೆ ಮಾಡಬೇಕು ಎಂದು ಜಯಲಲಿತಾ ಅವರ ಸಹೋದರನ ಮಕ್ಕಳಿಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯವು ಬುಧವಾರ ವಜಾ ಮಾಡಿದೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿದ್ದ ಜಯಲಲಿತಾ ಅವರ ಸಹೋದರ ಜಯಕುಮಾರ್‌ ಮಕ್ಕಳಾದ ಜೆ ದೀಪಕ್‌ ಮತ್ತು ಜೆ ದೀಪಾ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಚ್‌ ಎ ಮೋಹನ್‌ ಅವರು ವಜಾ ಮಾಡಿದ್ದಾರೆ.

“ಎಲ್ಲಾ ಆಸ್ತಿಗಳನ್ನು ಅಕ್ರಮವಾಗಿ ಸಂಪಾದಿಸಲಾಗಿದೆ. ಹೀಗಾಗಿ, ಅವುಗಳನ್ನು ವಶಪಡಿಸಿಕೊಳ್ಳಲು ಆದೇಶಿಸಲಾಗಿದೆ. ಹೀಗಾಗಿ, ಈ ಆಸ್ತಿಗಳು ಸರ್ಕಾರಕ್ಕೆ ಮಾತ್ರ ಸೇರುತ್ತವೆಯೇ ವಿನಾ ಅರ್ಜಿದಾರರಿಗೆ ಅಲ್ಲ” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಮುಂದುವರಿದು, “ಅರ್ಜಿದಾರರು ಕಾನೂನಾತ್ಮಕವಾಗಿ ಜಯಲಲಿತಾ ಅವರ ವಾರಸುದಾರರೇ ಆಗಿದ್ದರೂ ವಾಸ್ತವಿಕ ಪರಿಸ್ಥಿತಿ ಮತ್ತು ವಿಚಾರಗಳ ಹಿನ್ನೆಲೆಯಲ್ಲಿ ಜಯಲಲಿತಾ ಅವರಿಂದ ರಾಜ್ಯ ಸರ್ಕಾರವು ವಶಪಡಿಸಿಕೊಂಡಿರುವ ಮತ್ತು ಜಪ್ತಿ ಮಾಡಿರುವ ವಸ್ತುಗಳನ್ನು ಪಡೆಯಲು ಅರ್ಹರು ಎಂದು ಹೇಳಲಾಗದು. ಇದು ಮಾತ್ರವಲ್ಲದೇ, ಜಯಲಲಿತಾ ಮತ್ತು ಇತರೆ ಆರೋಪಿಗಳಾದ ವಿ ಕೆ ಶಶಿಕಲಾ ನಟರಾಜನ್, ವಿ ಎನ್‌ ಸುಧಾಕರನ್‌ ಮತ್ತು‌ ಜೆ ಇಳವರಸಿ ಅವರಿಗೆ ಸೇರಿದ ಆಸ್ತಿಗಳನ್ನು ಪ್ರತ್ಯೇಕಿಸಲಾಗಿಲ್ಲ. ಎಲ್ಲಾ ಆರೋಪಿಗಳು ಒಟ್ಟಿಗೆ ಸೇರಿ ಬೋಗಸ್‌ ಕಂಪೆನಿಗಳನ್ನು ಆರಂಭಿಸಿ ಅಕ್ರಮ ಹಣವನ್ನು ಅವುಗಳಲ್ಲಿ ಹೂಡಿಕೆ ಮಾಡಿ ಅಕ್ರಮ ಆಸ್ತಿ ಗಳಿಸಿದ್ದರು ಎಂದು ಹೇಳಲಾಗಿದೆ. ಹೀಗಿರುವಾಗ, ಜಯಲಲಿತಾ ಸಾವಿನ ಹಿನ್ನೆಲೆಯಲ್ಲಿ ಅವರ ವಿರುದ್ಧದ ಆರೋಪ ಕೈಬಿಟ್ಟರೂ ಅಕ್ರಮ ಮಾರ್ಗದ ಮೂಲಕ ಸಂಪಾದಿಸಿರುವ ಆಸ್ತಿಯನ್ನು ಜಯಲಲಿತಾ ಅವರ ಕಾನೂನಾತ್ಮಕ ವಾರಸುದಾರರಿಗೆ ನೀಡಲಾಗದು” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

“ಜಯಲಲಿತಾ ವಿಧಿವಶರಾಗಿದ್ದರಿಂದ ಅವರ ವಿರುದ್ಧದ ಶಿಕ್ಷೆ ಕೈಬಿಟ್ಟು ಸುಪ್ರೀಂ ಕೋರ್ಟ್‌ ಆದೇಶಿಸಿದೆಯೇ ವಿನಾ ವಶಪಡಿಸಿಕೊಂಡಿರುವ ಮತ್ತು ಜಪ್ತಿ ಮಾಡಲಾದ ವಸ್ತುಗಳಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶ ಅನ್ವಯಿಸದು. ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಕ್ಕೆ ವಿರುದ್ಧವಾದ ಅರ್ಥವನ್ನು ಈ ನ್ಯಾಯಾಲಯ ನೀಡಲಾಗದು. ಜಯಲಲಿತಾ ಅವರ ಕಾನೂನತ್ಮಾಕ ಸಂಬಂಧಿಗಳ ಕುರಿತು ವ್ಯಾಖ್ಯಾನ ಮಾಡಲು ಈ ನ್ಯಾಯಾಲಯ ವ್ಯಾಪ್ತಿ ಹೊಂದಿಲ್ಲ. ಅರ್ಜಿದಾರರ ಕೋರಿಕೆ ರೀತಿಯಲ್ಲಿ ಈ ನ್ಯಾಯಾಲಯವು ಸುಪ್ರೀಂ ಕೋರ್ಟ್‌ ಆದೇಶವನ್ನು ವ್ಯಾಖ್ಯಾನಿಸುವ ಸಮರ್ಥತೆತೆ ಹೊಂದಿಲ್ಲ” ಎಂದು ಆದೇಶದಲ್ಲಿ ಸ್ಪಷ್ಟನೆ ನೀಡಲಾಗಿದೆ.

ಅರ್ಜಿದಾರರ ಪರ ವಕೀಲರಾದ ಎಸ್‌ ಎಲ್‌ ಸುದರ್ಶನಂ ಮತ್ತು ಡಾ. ಎಂ ಸತ್ಯಕುಮಾರ್‌ ಅವರು “ವಿಶೇಷ ಸಿಬಿಐ ನ್ಯಾಯಾಲಯವು ಜಯಲಲಿತಾ ಅವರನ್ನು ದೋಷಿ ಎಂದು ಘೋಷಿಸಿದ್ದರೂ ಕರ್ನಾಟಕ ಹೈಕೋರ್ಟ್‌ ಆದೇಶದಲ್ಲಿ ಜಯಲಲಿತಾ ಖುಲಾಸೆಯಾಗಿದ್ದು, ಸುಪ್ರೀಂ ಕೋರ್ಟ್‌ ಆದೇಶ ಬರುವವರೆಗೆ ಅವರು ವಿಧಿವಶರಾಗಿದ್ದರು. ಆನಂತರ ಸರ್ವೋಚ್ಚ ನ್ಯಾಯಾಲಯವು ಜಯಲಲಿತಾ ಅವರ ವಿರುದ್ಧದ ಆರೋಪ ಕೈಬಿಟ್ಟಿರುವುದು ಕ್ಲೀನ್‌ಚಿಟ್‌ ನೀಡಿದಂತೆ. ಜಯಲಲಿತಾ ಅವರು ವಿವಾಹವಾಗದೇ ಇರುವುದರಿಂದ ಅರ್ಜಿದಾರರು ಕಾನೂನಾತ್ಮಕವಾಗಿ ಅವರ ಸಂಬಂಧಿಗಳಾಗಿದ್ದು, ಜಯಲಲಿತಾ ಅವರಿಗೆ ಸೇರಿದ ವಸ್ತುಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಅಲ್ಲದೇ, ಜಯಲಲಿತಾ ಅವರ ವಿರುದ್ಧದ ಶಿಕ್ಷೆಯು ಅಂತಿಮ ಹಂತಕ್ಕೆ ತಲುಪದಿರುವ ಹಿನ್ನೆಲೆಯಲ್ಲಿ ಅವರನ್ನು ದೋಷಿ ಎಂದು ಹೇಳುವ ಯಾವುದೇ ಪ್ರಯತ್ನವು ಮಾನಹಾನಿಗೆ ಸಮನಾಗುತ್ತದೆ” ಎಂದು ವಾದಿಸಿದ್ದರು.

ವಿಶೇಷ ಸರ್ಕಾರಿ ಅಭಿಯೋಜಕರಾದ ಕಿರಣ್‌ ಎಸ್‌. ಜವಳಿ ಅವರು “ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಹೀಗಾಗಿ, ದೀಪಕ್‌ ಮತ್ತು ದೀಪಾ ಅವರು ಸಲ್ಲಿಸಿರುವ ಅರ್ಜಿಯು ಸುಪ್ರೀಂ ಕೋರ್ಟ್‌ ಆದೇಶಕ್ಕೆ ಒಳಪಡುತ್ತದೆ. ಅರ್ಜಿದಾರರು ಈ ನ್ಯಾಯಾಲಯದಲ್ಲಿ ಪರಿಹಾರ ಕೇಳಲು ಅವಕಾಶವಿಲ್ಲ. ಹೀಗಾಗಿ, ಅದು ಕಾನೂನಿನ ಅಡಿ ಊರ್ಜಿತವಾಗುವುದಿಲ್ಲ” ಎಂದು ವಾದಿಸಿದ್ದರು.

ಮುಂದುವರಿದು, “ಅರ್ಜಿದಾರರು ಸುಪ್ರೀಂ ಕೋರ್ಟ್‌ ಆದೇಶವನ್ನು ಪೂರ್ತಿಯಾಗಿ ಓದಿಲ್ಲ. 2, 3 ಮತ್ತು 4ನೇ ಆರೋಪಿಗಳ ವಿರುದ್ಧ ನಿಗದಿ ಮಾಡಿದ್ದ ಆರೋಪಗಳು ರುಜುವಾತಾಗಿವೆ. ಹೀಗಾಗಿ, ಆರೋಪಿಗಳ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ಮಾಡಿದ್ದ ದೋಷಿ ಮತ್ತು ಶಿಕ್ಷೆ ಆದೇಶ ಚಾಲ್ತಿಗೆ ಬಂದಿದೆ. ಈ ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಆದೇಶವನ್ನು ಈ ನ್ಯಾಯಾಲಯವು (ವಿಚಾರಣಾಧೀನ) ವ್ಯಾಖ್ಯಾನಿಸಲಾಗದು” ಎಂದು ಆಕ್ಷೇಪಿಸಿದ್ದರು.

Also Read
ಮಾಜಿ ಸಿಎಂ ಜಯಲಲಿತಾರಿಂದ ವಶಪಡಿಸಿಕೊಂಡ ಸೀರೆ, ಬೆಳ್ಳಿ-ಬಂಗಾರ ಹರಾಜು ಹಾಕಲು ಸಿಜೆಐಗೆ ಪತ್ರ

ಪ್ರಕರಣದ ಹಿನ್ನೆಲೆ: 1996ರಲ್ಲಿ ತಮಿಳುನಾಡು ಸರ್ಕಾರವು ಜಯಲಲಿತಾ, ಅವರ ಸ್ನೇಹಿತೆ ವಿ ಕೆ ಶಶಿಕಲಾ ನಟರಾಜನ್‌, ಸುಧಾಕರನ್‌ ಮತ್ತು ಜೆ ಇಳವರಸಿ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿತ್ತು. ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆದು, 2014ರ ಸೆಪ್ಟೆಂಬರ್‌ 27ರಂದು ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 13(1) (ಇ) ಜೊತೆಗೆ ಸೆಕ್ಷನ್‌ 13(2) ಅಡಿ ಜಯಲಲಿತಾ ಅವರಿಗೆ ನಾಲ್ಕು ವರ್ಷ ಸಜೆ ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿಲಾಗಿತ್ತು. ಎರಡನೇ ಆರೋಪಿ ಶಶಿಕಲಾ, ಸುಧಾಕರನ್‌ ಮತ್ತು ನಾಲ್ಕನೇ ಆರೋಪಿ ಜೆ ಇಳವರಸಿಗೆ ತಲಾ ನಾಲ್ಕು ವರ್ಷ ಶಿಕ್ಷೆ ಹಾಗೂ ತಲಾ 10 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು.

Also Read
ಜಯಲಲಿತಾರಿಂದ ಜಪ್ತಿ ಮಾಡಿದ ವಸ್ತುಗಳ ವಿಲೇವಾರಿಗೆ ಎಸ್‌ಪಿಪಿ ನೇಮಿಸಲು ಗೃಹ ಇಲಾಖೆಗೆ ವಿಶೇಷ ನ್ಯಾಯಾಲಯದ ಪತ್ರ

ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜಯಲಲಿತಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳನ್ನು 2015ರ ಮೇ 11ರಂದು ಕರ್ನಾಟಕ ಹೈಕೋರ್ಟ್‌ ಪುರಸ್ಕರಿಸಿ, ಶಿಕ್ಷೆಯನ್ನು ಬದಿಗೆ ಸರಿಸಿತ್ತು. ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯವು 2017ರ ಫೆಬ್ರವರಿ 14ರಂದು ಹೈಕೋರ್ಟ್‌ ಆದೇಶವನ್ನು ಬದಿಗೆ ಸರಿಸಿ, ವಿಚಾರಣಾಧೀನ ನ್ಯಾಯಾಲಯವು ಎರಡರಿಂದ ನಾಲ್ಕನೇ ಆರೋಪಿಗಳಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. 2016ರ ಡಿಸೆಂಬರ್‌ 5ರ ವೇಳೆಗೆ ಜಯಲಲಿತಾ ಅವರು ಸಾವನ್ನಪ್ಪಿದ್ದರ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಕೈಬಿಟ್ಟಿತ್ತು.

Also Read
ಜಯಲಲಿತಾ ವಸ್ತುಗಳ ವಿಲೇವಾರಿ: ವಿಶೇಷ ಸರ್ಕಾರಿ ಅಭಿಯೋಜಕರಾಗಿ ಕಿರಣ್ ಜವಳಿ ನೇಮಕ

ಜಯಲಲಿತಾ ಅವರಿಂದ 7,040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರ ಖಚಿತ ಆಭರಣಗಳು, 700 ಕೆ ಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜೆರೇಟರ್, 10 ಟಿ ವಿ ಸೆಟ್, 8 ವಿಸಿಆರ್, 1 ವಿಡಿಯೊ ಕ್ಯಾಮೆರಾ, 4 ಸಿ ಡಿ ಪ್ಲೇಯರ್, 2 ಆಡಿಯೊ ಡೆಕ್, 24 ಟೂ-ಇನ್ ಒನ್ ಟೇಪ್‌ ರೇಕಾರ್ಡರ್, 1,040 ವಿಡಿಯೊ ಕ್ಯಾಸೆಟ್, 3 ಐರನ್ ಲಾಕರ್, 1,93,202 ರೂಪಾಯಿ ನಗದು ಸೇರಿದಂತೆ ಹಲವು ವಸ್ತುಗಳು ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿತ್ತು ಎನ್ನಲಾಗಿದೆ.

Kannada Bar & Bench
kannada.barandbench.com