ಕೆಎಸ್‌ಸಿಎ ಚುನಾವಣೆ: ಶಾಂತಕುಮಾರ್‌ ನಾಮಪತ್ರ ಸಿಂಧು ಆದೇಶ ಎತ್ತಿ ಹಿಡಿದ ಹೈಕೋರ್ಟ್‌; ಡಿಸೆಂಬರ್‌ 7ಕ್ಕೆ ಚುನಾವಣೆ

ಪ್ರಜಾವಾಣಿ-ಡೆಕ್ಕನ್‌ ಹೆರಾಲ್ಡ್‌ ಕ್ರೀಡಾ ಕ್ಲಬ್‌ ₹200 ಚಂದಾ ಪಾವತಿಸಿಲ್ಲ ಎಂದು ನಾಮಪತ್ರ ತಿರಸ್ಕರಿಸಿದ್ದ ಕ್ರಮ ಪ್ರಶ್ನಿಸಿ ಶಾಂತಕುಮಾರ್‌ ಸಲ್ಲಿಸಿದ್ದ ಅರ್ಜಿ ಎತ್ತಿ ಹಿಡಿದಿದ್ದ ಏಕಸದಸ್ಯ ಪೀಠದ ಆದೇಶ ಸರಿಯಾಗಿದೆ ಎಂದ ವಿಭಾಗೀಯ ಪೀಠ.
ಕೆಎಸ್‌ಸಿಎ ಚುನಾವಣೆ: ಶಾಂತಕುಮಾರ್‌ ನಾಮಪತ್ರ ಸಿಂಧು ಆದೇಶ ಎತ್ತಿ ಹಿಡಿದ ಹೈಕೋರ್ಟ್‌; ಡಿಸೆಂಬರ್‌ 7ಕ್ಕೆ ಚುನಾವಣೆ
Published on

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿರುವ ಪತ್ರಿಕೋದ್ಯಮಿ ಕೆ ಎನ್‌ ಶಾಂತಕುಮಾರ್‌ ಅವರ ನಾಮಪತ್ರ ಸಿಂಧುವಾಗಿದೆ ಎಂದಿದ್ದ ಕರ್ನಾಟಕ ಹೈಕೋರ್ಟ್‌ನ ಏಸಕದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠವು ಗುರುವಾರ ಎತ್ತಿ ಹಿಡಿದಿದೆ. ಹೀಗಾಗಿ, ನಿಗದಿಯಂತೆ ಡಿಸೆಂಬರ್‌ 7ರಂದು ಚುನಾವಣೆ ನಡೆಯಲಿದೆ.

ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿ ಆನಂತರ ನಾಮಪತ್ರ ಹಿಂಪಡೆದಿದ್ದ ಕಲ್ಪನಾ ವೆಂಕಟಾಚಾರ್‌ ಅವರು ಶಾಂತಕುಮಾರ್‌ ನಾಮಪತ್ರ ಸಿಂಧು ಎಂದಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ವಿಭಾಗೀಯ ಪೀಠ ನಡೆಸಿತು.

ಕಲ್ಪನಾ ಪರ ವಕೀಲೆ ಲಕ್ಷ್ಮಿ ಮೆನನ್‌ ಅವರ ವಾದ ಆಲಿಸಿದ ನ್ಯಾಯಾಲಯವು “ಕಲ್ಪನಾ ವೆಂಕಟಾಚಾರ್‌ ನಾಮಪತ್ರ ಹಿಂಪಡೆದಿರುವುದರಿಂದ ಮೇಲ್ಮನವಿ ಸಲ್ಲಿಸಲು ಬಾಧಿತರಲ್ಲ. ನಾಮಪತ್ರ ಪರಿಶೀಲನೆಯ ವೇಳೆಯವರೆಗೆ ಹಿಂಬಾಕಿ ಪಾವತಿಸಲು ಅವಕಾಶವಿದೆ ಎಂದು ಕೆಎಸ್‌ಸಿಎ ಬೈಲಾದಲ್ಲಿ ಹೇಳಲಾಗಿದೆ ಎಂಬ ಏಕಸದಸ್ಯ ಪೀಠದ ಆದೇಶ ಸರಿಯಾಗಿದೆ. ಹೀಗಾಗಿ, ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶ ಅಗತ್ಯವಿಲ್ಲ” ಎಂದು ಮೇಲ್ಮನವಿ ವಜಾಗೊಳಿಸಿತು.

Also Read
ಕೆಎಸ್‌ಸಿಎ ಚುನಾವಣೆ: ಶಾಂತಕುಮಾರ್‌ ನಾಮಪತ್ರ ಸಿಂಧುತ್ವ ಎತ್ತಿಹಿಡಿದ ಆದೇಶ ಪ್ರಶ್ನಿಸಿ ಮೇಲ್ಮನವಿ; ನಾಳೆ ವಿಚಾರಣೆ

ಪ್ರಜಾವಾಣಿ-ಡೆಕ್ಕನ್‌ ಹೆರಾಲ್ಡ್‌ ಕ್ರೀಡಾ ಕ್ಲಬ್‌ ₹200 ಚಂದಾ ಪಾವತಿಸಿಲ್ಲ ಎಂದು ತಮ್ಮ ನಾಮಪತ್ರ ತಿರಸ್ಕರಿಸಿದ್ದ ಚುನಾವಣಾಧಿಕಾರಿ ಕ್ರಮ ಪ್ರಶ್ನಿಸಿ ಕೆ ಎನ್‌ ಶಾಂತಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ಕಳೆದ ಶನಿವಾರ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿತ್ತು.

ಶಾಂತಕುಮಾರ್ ಅವರ ನಾಮಪತ್ರ ತಿರಸ್ಕರಿಸಿ ನವೆಂಬರ್ 24ರಂದು ಚುನಾವಣಾಧಿಕಾರಿ ಹೊರಡಿಸಿದ್ದ ಆದೇಶ ರದ್ದುಪಡಿಸಿತಲ್ಲದೇ, ನಿಗದಿತ ವೇಳಾಪಟ್ಟಿಯಂತೆ ಡಿಸೆಂಬರ್ 7ರಂದು ಕೆಎಸ್‌ಸಿಎ ಚುನಾವಣೆ ನಡೆಸಿ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಲಾಗಿತ್ತು.

Kannada Bar & Bench
kannada.barandbench.com