ವರದಕ್ಷಿಣೆ ಕಿರುಕುಳ: ಅತ್ತೆ-ಮಾವನ ವಿರುದ್ಧದ ಪ್ರಕರಣ ರದ್ದು, ಪತಿಯ ವಿರುದ್ಧ ತನಿಖೆಗೆ ಅಸ್ತು ಎಂದ ಹೈಕೋರ್ಟ್‌

ಅತ್ತೆ-ಮಾವನ ವಿರುದ್ಧ ಮಾಡಿರುವ ಆರೋಪಗಳು ಮೇಲ್ನೋಟಕ್ಕೆ ಅಪರಾಧದ ಅಂಶಗಳನ್ನು ಒಳಗೊಂಡಿಲ್ಲ. ಆದರೆ, ಪತಿಯ ವಿರುದ್ಧ ಸಾಕಷ್ಟು ಆರೋಪಗಳಿವೆ ಎಂದು ನ್ಯಾಯಾಲಯ ಹೇಳಿದೆ.
Divorce
Divorce
Published on

ಪತಿ ಹಾಗೂ ಅತ್ತೆ-ಮಾವನ ವಿರುದ್ಧ ಪತ್ನಿಯು ವರದಕ್ಷಿಣ ಕಿರುಕುಳ ಕಾಯಿದೆ ಅಡಿ ದಾಖಲಿಸಿದ್ದ ದೂರಿನ ಪೈಕಿ ಪತಿಯ ವಿರುದ್ಧ ತನಿಖೆಗೆ ಅನುಮತಿಸಿರುವ ಕರ್ನಾಟಕ ಹೈಕೋರ್ಟ್‌, ಅತ್ತೆ-ಮಾವನ ವಿರುದ್ಧದ ಪ್ರಕರಣ ರದ್ದುಪಡಿಸಿದೆ.

ಪತಿಯಿಂದ ಅಸಹಜ ಲೈಂಗಿಕ ಕ್ರಿಯೆ ಒತ್ತಾಯ, ಡ್ಯಾನ್ಸ್‌ ಅಭ್ಯಾಸಕ್ಕೆ ವಿರೋಧ, ಮನೆಯಲ್ಲಿ ಸಾಕಿರುವ ಬೆಕ್ಕಿನ ವಿಚಾರಕ್ಕೆ ಕಲಹ, ಆಸ್ತಿ-ಆಭರಣ ತರುವಂತೆ ಆಗ್ರಹ.. ಹೀಗೆ ಹಲವು ಆರೋಪಗಳನ್ನು ಪತ್ನಿ ಮಾಡಿದ್ದರು. ಪತಿ, ಅತ್ತೆ-ಮಾವನ ವಿರುದ್ಧ ಪತ್ನಿಯು ವರದಕ್ಷಿಣ ಕಿರುಕುಳ ಕಾಯಿದೆ ಅಡಿ ದೂರು ದಾಖಲಿಸಿದ್ದರು.

ಪತ್ನಿ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಪತ್ನಿ, ಆತನ ತಂದೆ-ತಾಯಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.

ಅತ್ತೆ-ಮಾವನ ವಿರುದ್ಧ ಮಾಡಿರುವ ಆರೋಪಗಳು ಮೇಲ್ನೋಟಕ್ಕೆ ಅಪರಾಧದ ಅಂಶಗಳನ್ನು ಒಳಗೊಂಡಿಲ್ಲ. ಆದರೆ, ಪತಿಯ ವಿರುದ್ಧ ಸಾಕಷ್ಟು ಆರೋಪಗಳಿವೆ. ಹೀಗಾಗಿ, ಅತ್ತೆ-ಮಾವನ ವಿರುದ್ಧ ತನಿಖೆಗೆ ಅನುಮತಿಸುವುದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ನ್ಯಾಯಾಲಯ ಹೇಳಿದೆ.

ಪತ್ನಿಗೆ ಅಸಹಜ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಪತಿ ಮಾಡಿರುವ ವಾಟ್ಸಾಪ್‌ ಚಾಟ್‌ಗಳು ಭಯಾನಕವಾಗಿದ್ದು, ಆತನ ಕಿರುಕುಳದ ಮಟ್ಟವನ್ನು ಅನಾವರಣಗೊಳಿಸುತ್ತವೆ. ಆತ ಅಶ್ಲೀಲ ಪದಗಳನ್ನು ಬಳಕೆ ಮಾಡಿದ್ದು, ಅವು ದೂರಿನ ಭಾಗವಾಗಿವೆ. ಪತಿಯು ಪೋಕರಿ ಜೀವನ ನಡೆಸುತ್ತಿದ್ದು, ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬುದು ವಾಟ್ಸಾಪ್‌ ಚಾಟ್‌ನಿಂದ ಗೊತ್ತಾಗಲಿದೆ. ದೂರಿನಲ್ಲಿ ಸಾಕು ಬೆಕ್ಕು ಪ್ರತಿಬಾರಿಯೂ ದೂರುದಾರೆಯಾಗಿರುವ ಪತ್ನಿಗೆ ಹಾನಿ ಮಾಡುತ್ತಿತ್ತು ಎಂದು ಹೇಳಲಾಗಿದೆ. ಇದೆಲ್ಲವೂ ಪೂರ್ಣ ವಿಚಾರಣೆಯಿಂದ ಸಾಬೀತಾಗಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರ ಪತಿ ಪರ ವಕೀಲ ಕೇಶವ್‌ ದಾತಾರ್‌ ಅವರು “ಪ್ರಕರಣದಲ್ಲಿ ವರದಕ್ಷಿಣೆಗಾಗಿ ಕಿರುಕುಳ ನೀಡಿರುವ ಸಂಬಂಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದರೆ, ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬೇಡಿಕೆ ಇಡುವುದು, ಬೆಟ್ಟಿಂಗ್‌ನಲ್ಲಿ ತೊಡಗಿರುವುದು ಮತ್ತು ಮಧ್ಯವ್ಯಸನಿ ಎಂಬ ಆರೋವಿದೆ. ವಿನಾ ಕಾರಣ ಅರ್ಜಿದಾರರ ತಂದೆ ಮತ್ತು ತಾಯಿಯನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ. ಹೀಗಾಗಿ ಪ್ರಕರಣ ರದ್ದುಗೊಳಿಸಬೇಕು” ಎಂದು ಮನವಿ ಮಾಡಿದ್ದರು.

ದೂರುದಾರ ಪತ್ನಿಯ ಪರ ವಕೀಲ ವಕೀಲ ನಾಗರಾಜ್‌ ಅವರು “ಮದುವೆಯಾದ ಬಳಿಕವೂ ಪತಿ ಅಕ್ರಮ ಸಂಬಂಧ ಹೊಂದಿದ್ದರು. ಸದಾ ಬೆಟ್ಟಿಂಗ್‌ನಲ್ಲಿ ನಿರತವಾಗಿದ್ದು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ದಾಖಲೆಗಳ ಪ್ರಕಾರ ಆಕೆಯ ಕೈಯನ್ನು ತಿರುಚುವ ಮೂಲಕ ಗಾಯಪಡಿಸಿದ್ದಾರೆ ಎಂಬ ಅಂಶ ಗೊತ್ತಾಗಿದೆ. ಡಾನ್ಸ್‌ ನಿಲ್ಲಿಸಬೇಕು ಎಂದು ಆಕೆಯ ಅತ್ತೆ ಮತ್ತು ಮಾವ ಒತ್ತಾಯಿಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸಾಮಾನ್ಯವಾಗಿತ್ತು. ಹೀಗಾಗಿ, ಅರ್ಜಿ ವಜಾಗೊಳಿಸಬೇಕು” ಎಂದು ಕೋರಿದರು.

ಪ್ರಕರಣದ ಹಿನ್ನೆಲೆ: ದೂರುದಾರರ ಮತ್ತು ಅರ್ಜಿದಾರರು 2022ರಲ್ಲಿ ಸ್ನೇಹಿತರ ಮೂಲಕ ಪರಿಚಯವಾಗಿದ್ದು, 2023ರ ಆಗಸ್ಟ್‌ನಲ್ಲಿ ವಿವಾಹವಾಗಿದ್ದರು. ಮದುವೆಯಾದ ಒಂದು ವರ್ಷದ ಬಳಿಕ ದಂಪತಿಯ ನಡುವೆ ಸಂಬಂಧ ಹದಗೆಟ್ಟಿತ್ತು. ದಂಪತಿ ಒಂದುಗೂಡಿಸುವುದಕ್ಕೆ ವಿವಿಧ ಹಂತದಲ್ಲಿ ಸಂಧಾನ ನಡೆದರೂ ವಿಫಲವಾಗಿತ್ತು.

ಬಳಿಕ ಪತ್ನಿ ಕೌಟುಂಬಿಕ ದೌರ್ಜನ್ಯದ ಆರೋಪದಲ್ಲಿ ಕೊತ್ತನೂರು ಪೊಲೀಸ್‌ ಠಾಣೆಯಲ್ಲಿ ಅರ್ಜಿದಾರ ಆರೋಪಿ ಪತಿ, ಆತನ ತಾಯಿ ಮತ್ತು ತಂದೆ (ಅತ್ತೆ) ಮಾವನ ವಿರುದ್ದ ಬಿಎನ್‌ಎಸ್‌ ಸೆಕ್ಷನ್‌ 85, 115(2), 351(3) ಮತ್ತು 352 ಅಡಿ ಪ್ರಕರಣ ದಾಖಲಿಸಲಾಗಿದೆ.

Kannada Bar & Bench
kannada.barandbench.com