
ಸರ್ಕಾರಿ ಅಧಿಕಾರಿಗಳ ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಹೆಡ್‌ಕಾನ್‌ಸ್ಟೆಬಲ್ ಚಿತ್ರದುರ್ಗದ ಜಿ ನಿಂಗಪ್ಪ ಅಲಿಯಾಸ್ ನಿಂಗಪ್ಪ ಸಾವಂತ್ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ವಜಾಗೊಳಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ.
ಪ್ರಕರಣದ ಸಂಬಂಧಿತ ತನಿಖಾ ಪ್ರಕ್ರಿಯೆಯು ಪ್ರಾಥಮಿಕ ಹಂತದಲ್ಲಿದ್ದು, ಲಭ್ಯವಿರುವ ದಾಖಲೆಗಳನ್ನು ಆಧರಿಸಿ ಮೇಲ್ನೋಟಕ್ಕೆ ಹಾಲಿ ಆದೇಶ ಮಾಡಲಾಗಿದೆ ಎಂದು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠವು ಹೇಳಿದೆ.
“ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಅವರು 02.06.2025ರಂದು ನೀಡಿರುವ ಪ್ರಾಥಮಿಕ ತನಿಖಾ ವರದಿಯಲ್ಲಿ 30.05.2025ರಂದು ನೀಡಿದ ದೂರಿನ ಅಂಶಗಳನ್ನು ಉಲ್ಲೇಖಿಸಿ, ಮೇಲ್ನೋಟಕ್ಕೆ ನಿಂಗಪ್ಪ ಅವರು ಆರೋಪಿತ ಕೃತ್ಯ ಎಸಗಿದ್ದಾರೆ. ಹೀಗಾಗಿ, ಎಫ್‌ಐಆರ್ ದಾಖಲಿಸಿ ವಿಸ್ತೃತ ತನಿಖೆ ನಡೆಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
“ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಸೆಕ್ಷನ್ 7ಎ ಅಡಿ ಎಫ್‌ಐಆರ್ ದಾಖಲಿಸಿದ್ದು, ಇದರಲ್ಲಿ ಯಾವುದೇ ಸರ್ಕಾರಿ ಅಧಿಕಾರಿಯನ್ನು ಆರೋಪಿಯನ್ನಾಗಿಸದೇ ತನ್ನನ್ನು ಮಾತ್ರ ಆರೋಪಿಯಾಗಿಸಿರುವುದರಿಂದ ದೂರು ಅನೂರ್ಜಿತವಾಗುತ್ತದೆ ಎಂಬ ನಿಂಗಪ್ಪ ವಾದದಲ್ಲಿ ಉರುಳಿಲ್ಲ. ಏಕೆಂದರೆ ತನಿಖೆಯ ಬಳಿಕ ಸಿಆರ್‌ಪಿಸಿ ಸೆಕ್ಷನ್ 173 ಅಡಿ ಕಾಯಿದೆಯ ಸೆಕ್ಷನ್ 7, 8, 12 ಇತ್ಯಾದಿ ಅನ್ವಯಿಸಿ ಸರ್ಕಾರಿ ಅಧಿಕಾರಿಗಳನ್ನು ಹೆಚ್ಚುವರಿಯಾಗಿ ಆರೋಪಿಗಳನ್ನಾಗಿಸಲು ಅವಕಾಶವಿದೆ. ಸದ್ಯ ತನಿಖೆಯು ಪ್ರಾಥಮಿಕ ಹಂತದಲ್ಲಿದ್ದು, ಲೋಕಾಯುಕ್ತ ಪೊಲೀಸರಿಗೆ ಬಿಬಿಎಂಪಿ, ಅಬಕಾರಿ ಇಲಾಖೆ ಸೇರಿದಂತೆ ಬೇರೆ ಆರೋಪಿಗಳನ್ನು ಸೇರ್ಪಡೆ ಮಾಡಲು ನಿರಾಕರಿಸಲಾಗದು. ಆರೋಪ ಪಟ್ಟಿ ಸಲ್ಲಿಸುವಾಗ ತನಿಖಾಧಿಕಾರಿಯು ಕಾಯಿದೆಯ ಬೇರೆ ಸೆಕ್ಷನ್‌ಗಳನ್ನು ಅನ್ವಯಿಸಿ ಆರೋಪ ಪಟ್ಟಿ ಸಲ್ಲಿಸಲು ಅವಕಾಶವಿದೆ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರ ಸಾವಂತ್ ವಿರುದ್ಧ ಕಾಯಿದೆಯ ಸೆಕ್ಷನ್ 7ಎ ಅನ್ವಯಿಸಲು ಮೇಲ್ನೋಟಕ್ಕೆ ಅಗತ್ಯವಾದ ಅಂಶಗಳು ಗೋಚರಿಸಿದ್ದು, ಆತನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ದೂರಿನಲ್ಲಿನ ವಿಸ್ತೃತ ಆರೋಪ ಮತ್ತು ವರದಿಯಲ್ಲಿನ ಅಂಶಗಳನ್ನು ನೋಡಿದರೆ ಕಾಯಿದೆ ಸೆಕ್ಷನ್ 7ಎ ಅನ್ವಯ ಪ್ರಕರಣದ ತನಿಖೆ ನಡೆಯುವುದು ಅಗತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: ಲೋಕಾಯುಕ್ತ ಪೊಲೀಸರು ತಮ್ಮ ಮೇಲೆ ದಾಳಿ ನಡೆಸುವ ಯೋಜನೆ ಸಿದ್ಧವಾಗಿದೆ ಎಂದು ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿ, ಇದನ್ನು ತಪ್ಪಿಸಲು ನಿಂಗಪ್ಪ ಲಂಚಕ್ಕೆ ಬೇಡಿಕೆ ಇಡುತ್ತಿದ್ದನು. ಇದರಿಂದ ಅಧಿಕಾರಿಗಳು ಫೋನ್ ಪೇ, ಎಲೆಕ್ಟ್ರಾನಿಕ್ ವರ್ಗಾವಣೆ, ನಗದಿನ ರೂಪದಲ್ಲಿ ಹಣ ನೀಡಿದ್ದರು. ಈ ವಿಚಾರವನ್ನು ಲೋಕಾಯುಕ್ತದಲ್ಲಿ ಪರಿಶೀಲಿಸಲಾಗಿ, ಲೋಕಾಯುಕ್ತ ಅಧಿಕಾರಿಗಳು ಅಂಥ ಯಾವುದೇ ಕೆಲಸ ಮಾಡಿಲ್ಲ ಎಂದು ಬಾಧಿತ ಅಧಿಕಾರಿಗಳಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ಅಧಿಕಾರಿಗಳು ಸಂಬಂಧಿತ ಠಾಣೆಯಲ್ಲಿ ದೂರು ನೀಡಿದ್ದರು. ಇದರ ತನಿಖೆ ನಡೆಯುತ್ತಿರುವಾಗಲೇ ಸರ್ಕಾರಿ ಅಧಿಕಾರಿಗಳ ಸುಲಿಗೆ ಮುಂದುವರಿಸಲಾಗಿತ್ತು.
ಈ ಕೃತ್ಯ ನಡೆಸಲು ಆರೋಪಿಗಳು ಹೊಸ ಸಿಮ್ ಕಾರ್ಡ್‌ಗಳನ್ನು ಖರೀದಿಸಿ, ತಮ್ಮ ಐಡಿ, ಟ್ರೂ ಕಾಲರ್ ಮತ್ತು ವಾಟ್ಸಪ್‌ಗಳಲ್ಲಿ ಲೋಕಾಯುಕ್ತ, ಉಪಲೋಕಾಯುಕ್ತ ಮತ್ತು ಹಿರಿಯ ಅಧಿಕಾರಿಗಳ ಚಿತ್ರಗಳು ಬರುವಂತೆ ಮಾಡಿದ್ದರು. ಈ ಮೂಲಕ ಸುಲಿಗೆಗೆ ರಹದಾರಿ ಮಾಡಿಕೊಂಡಿದ್ದರು.
ಅಬಕಾರಿ ಇಲಾಖೆ ಮತ್ತು ಬಿಬಿಎಂಪಿ ಇಲಾಖೆಯ ಅಧಿಕಾರಿಗಳಿಗೆ ನಿಂಗಪ್ಪ ಸಾವಂತ್ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದನು. ಅಲ್ಲದೇ, ನಿರಂತರವಾಗಿ ಲೋಕಾಯುಕ್ತ ಕಚೇರಿಗೆ ನಿಂಗಪ್ಪ ಹೋಗುತ್ತಿದ್ದನು. ವಾಟ್ಸಾಪ್ ಡಿಪಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಎಂದು ಹಾಕಿಕೊಂಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ತುಮಕೂರಿನಲ್ಲಿ ಅನಾಮಿಕರು ಎಂದು ದೂರು ದಾಖಲಿಸಲಾಗಿತ್ತು. ಸಾರಿಗೆ ಇಲಾಖೆ ಅಧಿಕಾರಿ ಎ ವಿ ಪ್ರಸಾದ್ ಎಂಬವರಿಗೆ ಆತ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆನಂತರ ಬೆಂಗಳೂರಿನಲ್ಲಿ ಕೆಲವು ಅಧಿಕಾರಿಗಳಿಗೆ ಕರೆ ಮಾಡಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಇದೆಲ್ಲವೂ ಲೋಕಾಯುಕ್ತ ಪೊಲೀಸರಿಗೆ ಅರಿವಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿಂಗಪ್ಪ ಸಾವಂತ್ ಮತ್ತು ಇತರರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧ ಕಾಯಿದೆ ಸೆಕ್ಷನ್ 7ಎ ಅಡಿ ಬೆಂಗಳೂರಿನ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ನಿಂಗಪ್ಪ ಸಾವಂತ್ ಬಂಧಿಸಲ್ಪಟ್ಟು, ಆನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಈ ಮಧ್ಯೆ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶ್ರೀನಾಥ್ ಜೋಶಿಯನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ. ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.