ಸದನದಲ್ಲಿ ಸಚಿವೆ ಲಕ್ಷ್ಮಿ ವಿರುದ್ಧ ಅಶ್ಲೀಲ ಪದ ಬಳಕೆ: ಸಿ ಟಿ ರವಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಶಾಸನಸಭೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಳಕೆ ಮಾಡಿದ ಪದಗಳಿಗೆ ಶಾಸಕರಿಗೆ ವಿನಾಯಿತಿ ಇರುತ್ತದೆ. ರವಿ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಪದ, ಅವರ ನಡತೆಯು ಪ್ರಾಸಿಕ್ಯೂಷನ್‌ನಿಂದ ರಕ್ಷಣೆ ನೀಡುವುದಕ್ಕೆ ಅನ್ವಯಸದು ಎಂದು ತಿಳಿಸಿದ ಪೀಠ.
ಸದನದಲ್ಲಿ ಸಚಿವೆ ಲಕ್ಷ್ಮಿ ವಿರುದ್ಧ ಅಶ್ಲೀಲ ಪದ ಬಳಕೆ: ಸಿ ಟಿ ರವಿ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ
Published on

ಬೆಳಗಾವಿ ಸುವರ್ಣಸೌಧದಲ್ಲಿ ನಡೆದಿದ್ದ ಅಧಿವೇಶನದ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಗೇವಾಡಿ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ಕಿರುಕುಳ ಮತ್ತು ಮಹಿಳೆ ಘನತೆಗೆ ಹಾನಿ ಪ್ರಕರಣ ರದ್ದತಿ ಕೋರಿ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ. ಇದರಿಂದ ಸಿ ಟಿ ರವಿ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಸದನದಲ್ಲಿ ಸಿ ಟಿ ರವಿ ಅವರು ಬಳಕೆ ಮಾಡಿರುವ ಪದಕ್ಕೆ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ನಿಂದ ಶಾಸಕರಿಗೆ ಇರುವ ವಿನಾಯಿತಿ ರಕ್ಷಣೆ ದೊರೆಯುವುದಿಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಆದೇಶಿಸಿದೆ.

ಶಾಸನಸಭೆಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಬಳಕೆ ಮಾಡಿದ ಪದಗಳಿಗೆ ಶಾಸಕರಿಗೆ ಇರುವ ರಕ್ಷಣೆ ವಿನಾಯಿತಿ ಅನ್ವಯಿಸುತ್ತದೆ. ರವಿ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಪದ ಮತ್ತು ಅವರ ನಡತೆಯು ಪ್ರಾಸಿಕ್ಯೂಷನ್‌ನಿಂದ ರಕ್ಷಣೆ ನೀಡುವುದಕ್ಕೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

“ಆಕ್ಷೇಪಿತ ಪದ ಬಳಕೆ, ಅದನ್ನು ಬಳಕೆ ಮಾಡಿದ್ದರೆ ಅಥವಾ ನಡತೆ ತೋರಿದ್ದರೆ ಅದು ಮಹಿಳೆಯ ಘನತೆಗೆ ಹಾನಿ ಮಾಡುವುದಾಗಿದೆ. ಇದು ಯಾವುದೇ ರೀತಿಯಲ್ಲೂ ಸದನದ ಕಾರ್ಯನಿರ್ವಹಣೆಗೆ ಸಂಬಂಧಿಸಿಲ್ಲ… ಸಂಬಂಧವಿಲ್ಲ ಎಂದಾಗ ಅದಕ್ಕೆ ವಿನಾಯಿತಿ ಇರುವುದಿಲ್ಲ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ” ಎಂದು ನ್ಯಾಯಾಲಯ ಆದೇಶ ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ರಾಜ್ಯ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎ ಬೆಳ್ಳಿಯಪ್ಪ ಅವರು “ಘಟನೆ ನಡೆದಾಗ ಸದನ ಮುಂದೂಡಲ್ಪಟ್ಟಿತ್ತು. ಸಭಾಪತಿ ನೀಡಿರುವ ವರದಿಯಲ್ಲಿ ಸದನ ಚಾಲ್ತಿಯಲ್ಲಿರಲಿಲ್ಲ. ಆಕ್ಷೇಪಾರ್ಹವಾದ ಭಾಷೆ ಬಳಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಸದನ ಮುಂದೂಡಿದ ಸಮಯದಲ್ಲಿ ಶಾಸಕರು (ಆ ಸದನದ ಸದಸ್ಯರು) ನೀಡಿದ ಹೇಳಿಕೆಗೆ ಯಾವುದೇ ರಕ್ಷಣೆ ಇಲ್ಲ. ಈ ಪ್ರಕರಣದಲ್ಲಿ ಹೆಬ್ಬಾಳ್ಕರ್‌ ವಿರುದ್ಧ ಸಿ ಟಿ ರವಿ ನೀಡಿರುವ ಹೇಳಿಕೆ ಸಂಬಂಧ ಪ್ರಕರಣ ದಾಖಲಿಸಿರುವುದು ಸೂಕ್ತವಾಗಿದೆ” ಎಂದು ಪ್ರತಿಪಾದಿಸಿದ್ದರು.

ಅರ್ಜಿದಾರ ಸಿ ಟಿ ರವಿ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಪ್ರಕರಣದಲ್ಲಿ ದೂರುದಾರೆಯಾಗಿರುವ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಬಗ್ಗೆ ಅರ್ಜಿದಾರರಿಗೆ ಗೌರವವಿದೆ. ಶಾಸನಸಭೆಯಲ್ಲಿ ಶಾಸಕರು ನೀಡಿದ ಹೇಳಿಕೆ ಅಥವಾ ಮಾಡಿದ ಚರ್ಚೆಗೆ ಸಂಬಂಧಿಸಿದಂತೆ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸಂವಿಧಾನದಲ್ಲಿ ನಿರ್ಬಂಧವಿದೆ. ಸದನದಲ್ಲಿ ಹೇಳಿಕೆಗೆ ಸಂಬಂಧಿಸಿದಂತೆ ಶಾಸಕರಿಗೆ ರಕ್ಷಣೆಯಿದೆ” ಎಂದಿದ್ದರು.

Also Read
ಶಾಸನಸಭೆಯಲ್ಲಿ ಸದಸ್ಯರು ಆಡಿದ ಮಾತುಗಳಿಗೆ ಸಂಪೂರ್ಣ ರಕ್ಷಣೆ ಇದೆ: ಹಿರಿಯ ವಕೀಲ ಪ್ರಭುಲಿಂಗ ನಾವದಗಿ

“ಸದನ ನಡೆಯುತ್ತಿತ್ತೇ, ಇಲ್ಲವೇ ಎಂದು ಕಾರ್ಯಾಂಗ ಹೇಳಲಾಗದು. ಇದು ಶಾಸಕಾಂಗದ ಭಾಗವೇ? ಇಲ್ಲವೇ ಎಂಬುದನ್ನು ಶಾಸಕಾಂಗವೇ ನಿರ್ಧರಿಸಬೇಕು. ಈ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರು ಗೃಹ ಸಚಿವ ಜಿ ಪರಮೇಶ್ವರ್‌ ಅವರಿಗೆ ಪತ್ರ ಬರೆದಿದ್ದಾರೆ. ಸಭಾಪತಿ ಪ್ರಕರಣವನ್ನು ವಿಸ್ತರಿಸದಂತೆ ಮನವಿ ಮಾಡಿದ್ದಾರೆ. ಇಡೀ ಪ್ರಕರಣದಲ್ಲಿ ಇದು ಅತ್ಯಂತ ಪ್ರಮುಖ ವಿಚಾರವಾಗಿದೆ. ಎಫ್‌ಐಆರ್‌ ಸಂಬಂಧ ಆರೋಪ ಪಟ್ಟಿ ಸಲ್ಲಿಕೆಯಾದರೆ ರವಿ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಆಗ ಸಭಾಪತಿಯೂ ನ್ಯಾಯಾಲಯದ ಮುಂದೆ ನಿಂತು ಉತ್ತರಿಸಬೇಕಾಗಿ ಬರಬಹುದು” ಎಂದು ವಾದಿಸಿದ್ದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ನೀಡಿದ ದೂರಿನ ಹಿನ್ನೆಲೆಯಲ್ಲಿ ರವಿ ವಿರುದ್ಧ ಬಾಗೇವಾಡಿ ಪೊಲೀಸರು 19.12.2024ರಂದು ಬಿಎನ್‌ಎಸ್‌ ಸೆಕ್ಷನ್‌ 75 (ಲೈಂಗಿಕ ಕಿರುಕುಳ) ಮತ್ತು 79 (ಮಹಿಳೆ ಘನತೆಗೆ ಹಾನಿ) ಅಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಆನಂತರ ಹೈಕೋರ್ಟ್‌ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.

Kannada Bar & Bench
kannada.barandbench.com